Advertisement

ಗ್ರಾಮವಾಸ್ತವ್ಯದಿಂದ ಕಾನೂನು ಅರಿವು: ಎಸ್ಪಿ

12:30 PM Oct 06, 2017 | |

ಹುಣಸೂರು: ಕಾನೂನು ವ್ಯಾಪ್ತಿಯಲ್ಲಿ ಪೊಲೀಸ್‌ ಇಲಾಖೆಗೆ ಗ್ರಾಮದ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಸಮಸ್ಯೆಗಳು ಬರಲಿದ್ದು ಇವುಗಳನ್ನು ಇನ್ನಿತರೆ ಇಲಾಖೆಗಳ ಗಮನಕ್ಕೆ ತಂದು ಪರಿಹರಿಸುವುದು ನಮ್ಮ ಜವಾಬ್ದಾರಿ. ಒಂದು ವಾಸ್ತವ್ಯದಿಂದ ಎಲ್ಲವೂ ಪರಿಹಾರವಾಗುತ್ತದೆಂಬ ಭ್ರಮೆ ಇಲ್ಲ. ಆದರೆ, ಸಾಧ್ಯವಾದಷ್ಟು ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ಮೈಸೂರು ಎಸ್‌.ಪಿ.ರವಿ ಡಿ.ಚನ್ನಣ್ಣನವರ ತಿಳಿಸಿದರು.

Advertisement

ಗ್ರಾಮವಾಸ್ತವ್ಯದ ಅಂಗವಾಗಿ ತಾಲೂಕಿನ ತಟ್ಟೆಕೆರೆಯಲ್ಲಿ ಆಯೋಜಿಸಿದ್ದ ಬುಧವಾರ ರಾತ್ರಿ ನಡೆದ ಜನಸಂಪರ್ಕ ಸ‌ಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ದೇಶದ ಬಹುಪಾಲು ಮಂದಿಗೆ ಕಾನೂನು ಹಾಗೂ ಪೊಲೀಸ್‌ ಕಾರ್ಯ ನಿರ್ವಹಣೆ  ಬಗ್ಗೆ ಅರಿವಿರುವುದಿಲ್ಲ. ಅಂತಹವರ ನೆರವಿಗೆ ಬರುವ ಉದ್ದೇಶದಿಂದಲೇ ಇಲಾಖೆ ವತಿಯಿಂದ ಗ್ರಾಮವಾಸ್ತವ್ಯದಂತಹ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲೇ ಹೆಚ್ಚು ಸಾವು: ರಾಜ್ಯದ ಮೈಸೂರು ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 400 ಮಂದಿ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಹೆಲ್ಮೆಟ್‌ ಬಳಸದಿರುವುದು, ಸಂಚಾರ ನಿಯಮ ಪಾಲಿಸದಿರುವುದು ನೋವಿನ ಸಂಗತಿ. ಈ ಬಗ್ಗೆ ವಾಹನ ಸವಾರರು ಹಾಗೂ ಅವರ ಕುಟುಂಬದವರು ಎಚ್ಚರ ವಹಿಸಬೇಕೆಂದರು. 

ಪೊಲೀಸ್‌ ಇಲಾಖೆ ವತಿಯಿಂದ ಪಾಠ: ಚಾಲನಾ ಪರವಾನಗಿ ಪಡೆಯಲು 8 ನೇ ತರಗತಿ ಕಡ್ಡಾಯ ಮಾಡಿದ್ದು ತೊಂದರೆಯಾಗಿರುವ ಬಗ್ಗೆ ಚನ್ನಸೋಗೆ ರವಿಕುಮಾರ್‌ ಪ್ರಸ್ತಾಪಕ್ಕೆ ಸಾರ್ವಜನಿಕ ಹಿತದೃಷ್ಟಿಯಿಂದ ಶಿಕ್ಷಣ ಕಡ್ಡಾಯಗೊಳಿಸಿದೆ. ಓದಿಲ್ಲವೆಂದರೆ ಅಂತಹವರಿಗೆ ಪೊಲೀಸ್‌ ಇಲಾಖೆ ವತಿಯಿಂದಲೇ 3 ತಿಂಗಳ ಕಾಲ ಉಚಿತ ಪಾಠ ಮಾಡಿ ಪರೀಕ್ಷೆ ಕುಳಿತುಕೊಳ್ಳಲು ಅವಕಾಶ, ಆನಂತರ ಉಚಿತವಾಗಿ ಡಿ.ಎಲ್‌ ಮಾಡಿಸಿಕೊಡಲಾಗುವುದೆಂದರು. 

ಹರೀಶ್‌ ಯೋಜನೆ ಬಳಸಿಕೊಳ್ಳಿ: ಯಾವುದೇ ಅಪಘಾತವಾದರೂ 24 ಗಂಟೆಯೊಳಗೆ 25ಸಾವಿರ ರೂ.,ವರೆಗೆ  ಚಿಕಿತ್ಸಾ ವೆಚ್ಚವನ್ನು ಹರೀಶ್‌ ಯೋಜನೆಯಡಿ ಸರ್ಕಾರವೇ ಭರಿಸಲಿದೆ. ಅಲ್ಲದೆ ಯಾವುದೇ ಅಸಹಜ ಸಾವು, ಅಪಘಾತ ಸಂಭವಿಸಿದಲ್ಲಿ ಸ‌ರ್ಕಾರದ ವತಿಯಿಂದ ಪರಿಹಾರ ಸಿಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಎಸ್‌ಪಿ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವಿದ್ದು ಬಳಸಿಕೊಳ್ಳಿರೆಂದು ಮನವಿ ಮಾಡಿದರು.

Advertisement

ತಾಪಂ ಸದಸ್ಯ ಶ್ರೀನಿವಾಸ್‌ ಎಸ್‌.ಐ.ಪುಟ್ಟಸ್ವಾಮಿ ಬಂದ ನಂತರ ಠಾಣೆಯಲ್ಲಿ ಮದ್ಯವರ್ತಿಗಳ ಹಾವಳಿ ತಪ್ಪಿದೆ. ತಮ್ಮೂರಿನ ಗ್ರಾಪಂನ ಹಳೇ ರಸ್ತೆ ಒಂದುಕಡೆ ಕಿರಿದಾಗಿದ್ದು, ಜಮೀನು ಮಾಲಿಕರನ್ನು ಮನವೊಲಿಸಿ ರಸ್ತೆ ಅಗಲೀಕರಣಗೊಳಿಸಬೇಕೆಂದರು. ರೈತ ಸಂಘದ ನಾಗಣ್ಣಾಚಾರ್‌ ನಮ್ಮ ಅಳಿಯ ಪೊಲೀಸ್‌ ಆಗಿದ್ದು, 2ನೇ ಮದುವೆಯಾಗಿ ಆಸ್ತಿಗಾಗಿ ಕಿರುಕುಳ ನೀಡುತ್ತಿದ್ದಾರೆಂದರು. ಈ ವೇಳೆ ಹಲವು ಸಮಸ್ಯೆ ತಿಳಿಸಿದ ನಾಗರಿಕರಿಗೆ ಪಿಡಿಒ ರಚನಾ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಎಸ್‌.ಐ.ಪುಟ್ಟಸ್ವಾಮಿ ಮಾತನಾಡಿ, ಎಸ್‌ಪಿ ಅವರ ಮಾರ್ಗದರ್ಶನದಂತೆ 167 ಗ್ರಾಮಗಳಲ್ಲಿ ಸಂಪರ್ಕ ಸಭೆ ನಡೆಸಲಾಗಿದೆ. ಸಾಕಷ್ಟು ಅಕ್ರಮ ಮದ್ಯ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಸ್‌.ಪಿ.ಯವರ ಗ್ರಾಮ ವಾಸ್ತವ್ಯ ನಮ್ಮಲ್ಲಿ ಅನೇಕ ಪಾಠ ಕಲಿಸಿದೆ ಎಂದರು. ಇಲಾಖೆ ವತಿಯಿಂದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು. ಗ್ರಾಮಕ್ಕೆ ಆಗಮಿಸಿದ ಎಸ್‌.ಪಿ.ಯವರನ್ನು  ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿ ಬರಮಾಡಿಕೊಂಡರು. 

ಎಎಸ್ಪಿ ರುದ್ರಮುನಿ, ತಹಶೀಲ್ದಾರ್‌ ಎಸ್‌.ಪಿ.ಮೋಹನ್‌, ಡಿವೈಎಸ್‌ಪಿ ಭಾಸ್ಕರ್‌ರೆ, ಸಿಪಿಐ ಪೂವಯ್ಯ, ವಿವಿಧ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ತಾಪಂ ಸದಸ್ಯ ಶ್ರೀನಿವಾಸ್‌,  ಅಕ್ಕಪಕ್ಕದ ಗ್ರಾಮಸ್ಥರು, ಮಹಿಳೆಯರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಇದ್ದರು.

ಗಸ್ತು ಪೊಲೀಸರೇ ಹೊಣೆ: ಇದೀಗ ಪ್ರತಿ ಗ್ರಾಮಕ್ಕೂ ಒಬ್ಬ ಪೇದೆಯನ್ನು ನೇಮಿಸಲಾಗುತ್ತಿದ್ದು, ಇಡೀ ಗ್ರಾಮದ ಎಲ್ಲಾ ಆಗು ಹೋಗುಗಳು ಸೇರಿದಂತೆ ಎಲ್ಲಾ ಜವಾಬ್ದಾರಿಯೂ ಆತನದ್ದೇ ಆಗಿರುತ್ತದೆ. ಗ್ರಾಮದಲ್ಲಿ ನಡೆಯುವ ಅಪರಾಧಗಳು-ಅಪರಿಚಿತರ ಬಗ್ಗೆ ಮಾಹಿತಿ ನೀಡಬೇಕು. ಎಲ್ಲಾ ಇಲಾಖೆ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆ ಸೇರಿದಂತೆ ಸರ್ಕಾರ ಯೋಜನೆಗಳ ಮಾಹಿತಿಯುಳ್ಳ ಕಿರುಹೊತ್ತಿಗೆಯನ್ನು ಇಲಾಖೆ ಹೊರ ತಂದಿದೆ. ಈ ಕಿರು ಹೊತ್ತಿಗೆಯನ್ನು ಪ್ರತಿ ಗ್ರಾಪಂಗೆ ವಿತರಿಸಲಾಗಿದ್ದು ಮಾಹಿತಿ ಪಡೆಯಬೇಕೆಂದು ಮೈಸೂರು ಎಸ್‌.ಪಿ.ರವಿ ಡಿ.ಚನ್ನಣ್ಣನವರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next