Advertisement

ಬಂಟ್ಸ್‌ ಲಾ ಫೋರಂ ಮತ್ತು  ಜವಾಬ್‌ ವತಿಯಿಂದ ಕಾನೂನು ಸಲಹೆ

05:23 PM Mar 05, 2019 | |

ಮುಂಬಯಿ: ಸಮಾಜದ ಜನರು ಕಾನೂನು  ತಿಳುವಳಿಕೆಯ ಮೂಲಕ ಸಾಮಾಜಿಕ,  ಕೌಟುಂಬಿಕ ಸಮಸ್ಯೆಗಳನ್ನು ಅರಿಯಲು ಇಂದು ಕಾನೂನು ಸಲಹೆಯ ವಿಚಾರ ಗೋಷ್ಠಿಯನ್ನು ಆಯೋಜಿಸಲಾಗಿದ್ದು,  ಬಂಟ್ಸ್‌ ಲಾ ಫೋರಂ ಹಾಗೂ ಜವಾಬ್‌ನ ವತಿಯಿಂದ ಸಮಾಜ ಬಾಂಧವರಿಗೆ ಉಚಿತವಾಗಿ ಏರ್ಪಡಿಸಿದ ಕಾರ್ಯಕ್ರಮವಾಗಿದೆ. ಕಾನೂನಿನಲ್ಲಿ ಆಳವಾಗಿ ತಿಳುವಳಿಕೆಯುಳ್ಳ ಉಪನ್ಯಾಸಕರಿಂದ ನಡೆದ ಇಂದಿನ ವಿಚಾರಗೋಷ್ಠಿಗೆ ಬಂಟ್ಸ್‌ ಲಾ ಫೋರಂನ ಅಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ ಅವರ ಕೊಡುಗೆ ವಿಶೇಷವಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಜೀವ ತುಂಬಿದ್ದಾರೆ ಎಂದು ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ನುಡಿದರು.

Advertisement

ಮಾ. 2ರಂದು ಬಂಟ್ಸ್‌ ಲಾ ಫೋರಂ ಹಾಗೂ ಜವಾಬ್‌ ಜಂಟಿಯಾಗಿ ಅಂಧೇರಿ ಲಿಂಕ್‌ರೋಡ್‌ನ‌  ಹೊಟೇಲ್‌ ಪ್ಯಾಪಿ ಲೋನ್‌ ಪಾರ್ಕ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಕಾನೂನು ಸಲಹಾ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿನೂತನ ಸಾಮಾಜಿಕ ತಿಳುವಳಿಕೆಗಾಗಿ ನಡೆದ ಈ ಕಾರ್ಯಕ್ರಮವು ಸರ್ವ ಬಂಟ ಸಮಾಜ ಬಾಂಧವರಿಗೆ ವೈಯಕ್ತಿಕ, ಕೌಟುಂಬಿಕವಾಗಿ ಅನುಭವವನ್ನು ಹಂಚಿಕೊಳ್ಳುವ ಕಾರ್ಯಕ್ರಮವಾಗಿದ್ದು, ನಿರೀಕ್ಷೆಗೂ ಮೀರಿ ಸಮಾಜ ಬಾಂಧವರು ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.

ಈ ಸಂದರ್ಭ ವಿಶೇಷ ಕಾನೂನು ತಜ್ಞರಾದ ನ್ಯಾಯವಾದಿ ಪದ್ಮನಾಭ ಶೆಟ್ಟಿ ಅವರು ಕಾರ್ಮಿಕ ಕಾನೂನು ಮತ್ತು ನ್ಯಾಯವಾದಿ ಮಂಜುನಾಥ ಹೆಗ್ಡೆ ಇವರು ವೈವಾಹಿಕ ಕಾನೂನುಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.

ವೈವಾಹಿಕ ಜೀವನದ ಸಮಸ್ಯೆ, ಕಾನೂನು ಅಭಿಮತದ ಬಗ್ಗೆ ವಿಚಾರ ಮಂಡನೆಗೈದ ಮಂಜುನಾಥ ಹೆಗ್ಡೆ ಇವರು, ಬದಲಾದ ಆಧುನಿಕ ಜೀವನದಲ್ಲಿ ಮದುವೆ ಸ್ವರ್ಗದಲ್ಲಿನ ನಿರ್ಧಾರಿತ ಕೊಡುಗೆ ಎಂಬ ವೇಧ ವಾಕ್ಯಕ್ಕೆ ಇಂದು ಪ್ರಪಂಚ ತದ್ವಿರುದ್ಧವಾಗಿ ವರ್ತಿಸುತ್ತಿದೆ. ಸಮಾಜದ ಅವಿವೇಕ ತಲ್ಲಣಗಳಿಂದ ವೈವಾಹಿಕ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇಂದಿನ ಆಧುನಿಕತೆಯಲ್ಲಿ ಉಪಯೋಗಿಸುವ ಯೂಸ್‌ ಆ್ಯಂಡ್‌ ಥ್ರೋ  ಎಂಬ ಪರಿಕಲ್ಪನೆಯಲ್ಲಿ ವೈವಾಹಿಕ ಜೀವನಗಳು ಸಾಗುತ್ತಿರುರುವುದು ವಿಷಾದನೀಯವಾಗಿದೆ. ಭವಿಷ್ಯದಲ್ಲಿ ಸತಿಪತಿಯಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ಮೂಲ ಆಧಾರದ ಮೇಲೆ ವೈವಾಹಿಕ ಜೀವನ ಸುಗಮಗೊಳ್ಳಲು ಸಾಧ್ಯ. ಭವಿಷ್ಯದಲ್ಲಿ ವೈಧಿಕ ಪರಂಪರೆಯ ಮೂಲಕ ಸಪ್ತಪದಿ ತುಳಿಯುವ ಚಿಂತನೆಯಲ್ಲಿ ವಿವಾಹ ನಡೆದರೂ ಭದ್ರತೆ ಹಾಗೂ ಕಾನೂನಾತ್ಮಕವಾಗಿ ನೊಂದಣಿಗೊಳಿಸುವುದು ಅನಿ ವಾರ್ಯವಾಗಿದೆ. ಹಾಗಾಗಿ ಮದುವೆಗಾಗಿ ಬದುಕಾಗಿರದೆ, ಬದುಕಿಗಾಗಿ ಮದುವೆ ಎಂಬ ದೀರ್ಘ‌ವಾದ ಅನುಭವನ ಚಿಂತನೆ ಎಲ್ಲರಲ್ಲೂ ಮೂಡಬೇಕು. ಇದರಿಂದ ವೈವಾಹಿಕ ಜೀವನಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು ನುಡಿದು ಕಾನೂನು ಹಂತನ ವಿವಿಧ ಸಲಹೆ, ಅದರಿಂದ ದೊರೆಯುವ ಪ್ರಯೋಜನ ಹಾಗೂ ಜಟಿಲ ಸಮಸ್ಯೆಗಳಿಂದ ಕೋರ್ಟ್‌ ಯಾವ ರೀತಿ ಸಲಹೆ ನೀಡುತ್ತದೆ ಎಂಬುವುದರ ಬಗ್ಗೆ ವಿವರಿಸಿದರು.

ಕಾನೂನು ಕಾರ್ಮಿಕರ ಸಮಸ್ಯೆ ಮತ್ತು ಪರಿವಾರಗಳ ಬಗ್ಗೆ ಮಾತನಾಡಿದ ನ್ಯಾಯವಾದಿ ಪದ್ಮನಾಭ ಶೆಟ್ಟಿ ಇವರು, ಕಡಿಮೆ ಸಂಬಳ ನೀಡಿ ಹೆಚ್ಚು ಬಂಡವಾಳ ಪಡೆಯುವ ಮಾಲಿಕರಿಗೂ ಅದಕ್ಕೆ ತದ್ವಿರುದ್ದವಾಗಿರುವ ಕಾರ್ಮಿಕರು ಒಬ್ಬರಿಗೊಬ್ಬರು ಅರ್ಥೈಯಿಸಿ ಮುಂದುವರಿದಾಗ ಸಮಸ್ಯೆಗಳು ಉಂಟಾಗುವುದಿಲ್ಲ. ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಕೆಲಸಗಾರರ ವಯೋಮಿತಿಯನ್ನು ಸಂಪೂರ್ಣವಾಗಿ ಗಮನಕ್ಕೆ ತೆಗೆದುಕೊಳ್ಳುವುದು, ರಾತ್ರಿ ಹಾಗೂ ಹಗಲು ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಸರಕಾರದ ಕಾನೂನು ಜಟಿಲವಾಗಿದೆ. ಇದನ್ನು ಮಾಲಕರು ಸಂಪೂರ್ಣವಾಗಿ ಅರಿತು ಮಹಿಳೆಯರಿಗೆ ಲೈಂಗಿಕ ಕಿರುಕುಳ, ಪ್ರಯಾಣದಲ್ಲಿ ಭದ್ರತೆ ಮೊದಲಾದ ವಿಷಯಗಳಿಗೆ ವಿಶೇಷ ಭದ್ರತೆ ನೀಡಬೇಕು. ರಜೆ ಹಾಗೂ ಕಂಪೆನಿಯಲ್ಲಿ ಕಾರ್ಮಿಕರ ಮೂಲಭೂತ ಸೌಕರ್ಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಕಡಿಮೆ ವಯೋಮಿತಿಯ ಮಕ್ಕಳನ್ನು ಕೆಲಸದಲ್ಲಿ ಇಡುವುದು ದಂಡನಾರ್ಹ ಅಪರಾಧ. ಕಂಪೆನಿಗಳಲ್ಲಿ ಅಪಾಯಕಾರಿ ಕೆಮಿಕಲ್‌ಗ‌ಳ ಉಪ ಯೋಗದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

Advertisement

ಗೋಷ್ಠಿಯ ಉಪನ್ಯಾಸಕರಾದ ಪದ್ಮನಾಭ ಶೆಟ್ಟಿ ಮತ್ತು ಮಂಜುನಾಥ ಹೆಗ್ಡೆ ಇವರನ್ನು ಗೌರವಿಸಲಾಯಿತು. ಸುಜಾತಾ ಶೆಟ್ಟಿ ಪ್ರಾರ್ಥನೆಗೈದರು. ಜಂಟಿ ಸಂಸ್ಥೆಗಳ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಬಂಟ್ಸ್‌ ಲಾ ಫೋರಂ ಅಧ್ಯಕ್ಷ ನ್ಯಾಯವಾದಿ  ಡಿ. ಕೆ. ಶೆಟ್ಟಿ ಸ್ವಾಗತಿಸಿ, ಕಾನೂನು ಸಲಹೆ, ಸೂಚನೆಗಳು ಸಮಾಜ ಬಾಂಧವರಿಗೆ ಪ್ರಯೋಜನವಾಗಬೇಕು ಎಂಬ ನೆಲೆಯಲ್ಲಿ ಆಯೋಜಿಸಲಾದ ಇಂದಿನ ಕಾರ್ಯಕ್ರಮಕ್ಕೆ ಜವಾಬ್‌ ಕಾರ್ಯಕಾರಿ ಸಮಿತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸಿರುವುದು ಸಂತೋಷವಾಗಿದೆ. ಉಪನ್ಯಾಸಕರ ಕಾನೂನಿನ ಸಲಹೆಗಳು ಪರಿಸರದ ಸಮಾಜ  ಬಾಂಧವರಿಗೆ ಪ್ರಯೋಜನವಾಗಲೆಂಬ ದೃಷ್ಟಿ ಕೋನದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಣಿಕೆಗೂ ಮೀರಿ ಈ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಭಿನಂದ ನೀಯವಾಗಿದೆ ಎಂದರು.

ಬಂಟರ ಸಂಘದ ಹಲವು ಉಪಸಮಿತಿಗಳು, ಆಹಾರ್‌, ಭಾರತ್‌ ಬ್ಯಾಂಕ್‌, ವಿಜಯಾ ಬ್ಯಾಂಕ್‌ ಆಫೀಸರ್ ಅಸೋಸಿಯೇಶನ್‌, ಮುಲುಂಡ್‌ ಬಂಟ್ಸ್‌,  ಥಾಣೆ ಬಂಟ್ಸ್‌ ಅಸೋಸಿಯೇಶನ್‌, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಸಹಕಾರ ನೀಡಿತು. ಕೊನೆಯಲ್ಲಿ ಸಂವಾದ ಕಾರ್ಯಕ್ರಮ ಜರಗಿತು. ಅಧ್ಯಕ್ಷ ಡಿ. ಕೆ. ಶೆಟ್ಟಿ, ಉಪಾಧ್ಯಕ್ಷ ನ್ಯಾಯವಾದಿ ಪಿ. ಕೆ. ಶೆಟ್ಟಿ ಅವರು ಉಪನ್ಯಾಸಕರನ್ನು ಪರಿಚಯಿಸಿದರು. ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಬಂಟ್ಸ್‌ ಲಾ ಫೋರಂ ಇದರ ಅಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ, ಉಪಾಧ್ಯಕ್ಷ ನ್ಯಾಯವಾದಿ ಪಿ. ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗುಣಕರ್‌ ಶೆಟ್ಟಿ, ಗೌರವ ಕೋಶಾಧಿಕಾರಿ ನ್ಯಾಯವಾದಿ ಆರ್‌. ಜಿ. ಶೆಟ್ಟಿ ಹಾಗೂ ಜವಾಬ್‌ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ, ಗೌರವ ಕೋಶಾಧಿಕಾರಿ ಅಶೋಕ್‌ ಆರ್‌. ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಹಾಗೂ ಜಂಟಿ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 
 ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next