ಮಂಗಳೂರು: ಜಿಲ್ಲೆಯ ವಸತಿನಿಲಯಗಳಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು, ನಿಲಯಗಳ ಮುಖ್ಯಸ್ಥರು, ಬಿಸಿಯೂಟ ವಿತರಿಸುವ ಶಾಲೆಗಳು ಕಟ್ಟು ನಿಟ್ಟಾಗಿ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು. ಮಾರ್ಗಸೂಚಿ ಪಾಲಿಸದೇ ಇರುವುದು ಕಂಡು ಬಂದಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ಹೇಳಿದರು.
ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದ ನಿಲಯ ಪಾಲಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಹಾರ, ನೀರಿನ ಸುರಕ್ಷತೆ ಬಗ್ಗೆ ಸುಮಾರು 25 ನಿಯಮಗಳನ್ನು ಸಿದ್ಧಪಡಿಸಿ ವಿತರಿಸಲಾಗಿದೆ. ಅವುಗಳು ಚಾಚು ತಪ್ಪದೆ ಪಾಲನೆಯಾಗಬೇಕು. ಪ್ರತೀ ಸಂಸ್ಥೆಯಲ್ಲೂ ಆಹಾರ ಭದ್ರತಾ ಸಮಿತಿ ರಚಿಸಬೇಕು. ಅದರಲ್ಲಿ ವಿದ್ಯಾರ್ಥಿಗಳನ್ನು ಸೇರಿಕೊಂಡು, ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಸಭೆ ನಡೆಸಿದ ಹಾಗೂ ಕೈಗೊಂಡ ಕ್ರಮದ ಫೋಟೋ ಸಹಿತ ವರದಿಯನ್ನು ಪ್ರತೀ ತಿಂಗಳು ಇಲಾಖೆಗೆ ನೀಡಬೇಕು ಎಂದರು.
ಆರೋಗ್ಯ ಇಲಾಖೆಯ ಮೂಲಕ ಸಿಬಂದಿಗಳ ತಂಡ ರಚಿಸಿ ತಿಂಗಳಿಗೆ ಒಂದು ಬಾರಿ ಪರಿಶೀಲನೆ ನಡೆಯಲಿದೆ. ಈ ವೇಳೆ ನಿಯಮ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು. ಮಂಗಳೂರು ನಗರದಲ್ಲಿ ಅನೇಕ ಪೇಯಿಂಗ್ ಗೆಸ್ಟ್‌ಗಳಿದ್ದು ಅವುಗಳನ್ನು ನೋಂದಣಿ ಮಾಡಬೇಕು. ಈ ನಿಟ್ಟಿನಲ್ಲಿ ನಗರದ ಎಲ್ಲಾ ಪಿಜಿ ಮಾಲಕರೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ತಿಳಿಸಿದರು.