Advertisement

ಲಾಕ್‌ಡೌನ್‌ಗೆ ಸಹಕರಿಸದಿದ್ದರೆ ಕಾನೂನು ಕ್ರಮ: ಎಎಸ್‌ಪಿ

08:08 PM Mar 24, 2020 | mahesh |

ಕುಂದಾಪುರ: ರಾಜ್ಯಾದ್ಯಂತ ಲಾಕ್‌ಡೌನ್‌ಗೆ ಸರಕಾರ ಆದೇಶ ನೀಡಿದ್ದು ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಜನತೆಯ ಹಿತದೃಷ್ಟಿಯಿಂದ, ಕೋವಿಡ್‌ 19 ವೈರಸ್‌ ಎಲ್ಲೆಡೆ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಈ ನಿಯಮ ಹೇರಲಾಗಿದ್ದು ಜನತೆ ಅರ್ಥೈಸಿಕೊಳ್ಳಬೇಕು. ಇದರ ಹೊರತಾಗಿ ಅನವಶ್ಯಕವಾಗಿ ಅಲ್ಲಲ್ಲಿ ಗುಂಪು ಸೇರುವುದು, ತಿರುಗಾಡುವುದು ಕಂಡು ಬಂದರೆ ಕಾನೂನು ಕ್ರಮ ಜರಗಿಸಲು ಅವಕಾಶ ಇದೆ ಎಂದು ಎಎಸ್‌ಪಿ ಹರಿರಾಮ್‌ ಶಂಕರ್‌ ತಿಳಿಸಿದ್ದಾರೆ.

Advertisement

ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ತಾಲೂಕಿನ 3 ಕಡೆ ಚೆಕ್‌ಪೋಸ್ಟ್‌ ಮಾಡಲಾಗಿದೆ. ಸರಕು ಸಾಗಣೆ, ಹಾಲು, ತರಕಾರಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹಾಲು, ತರಕಾರಿ, ದಿನಸಿ, ಮೆಡಿಕಲ್‌, ಬ್ಯಾಂಕ್‌ಗಳಿಗೆ ತೆರೆಯಲು ಅವಕಾಶ ಇದೆ. ಇವುಗಳಿಗೆ ಇಂತಿಷ್ಟೇ ಅವಧಿ ಎಂದು ನಿಗದಿ ಮಾಡದ ಕಾರಣ ಜನ ಅವಸರಕ್ಕೆ ಬಿದ್ದು ಖರೀದಿಗೆ ಮುಗಿ ಬೀಳಬೇಕಿಲ್ಲ. ಮನೆಯಿಂದ ಒಬ್ಬರು ಆಗಮಿಸಿದರೆ ಸಾಕು. ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕನಿಷ್ಟ 4ರಿಂದ 6 ಅಡಿ ಅಂತರದಲ್ಲಿ ನಿಲ್ಲಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬೇಡಿ.ಉಡುಪಿ, ಕುಂದಾಪುರದ ಜನ ತಿಳಿವಳಿಕೆ ಉಳ್ಳವರಾಗಿದ್ದು ಇದನ್ನು ಅರ್ಥೈಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಯಾವುದೇ ಸಂಶಯ ಬಂದರೂ ಪೊಲೀಸರಿಗೆ ಅಥವಾ ಆರೋಗ್ಯ ಇಲಾಖೆ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.

ಕಾನೂನು ಕ್ರಮ
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್‌ಪಿ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದು ಕಾಲಕಾಲಕ್ಕೆ ತಕ್ಕುದಾದ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗುತ್ತಿದೆ. ದಂಡಾಧಿಕಾರಿ ಸಹಾಯಕ ಕಮಿಷನರ್‌ ಅವರು ಕೂಡಾ ಅಗತ್ಯ ಬಿದ್ದರೆ ಆದೇಶಗಳನ್ನು ನೀಡಲಿದ್ದಾರೆ. ಇಂದು ಪೊಲೀಸರು ಮನವಿ ಮಾಡಿದ್ದು ವಾಹನಗಳ ಓಡಾಟ ನಡೆಸದಂತೆ ಸೂಚಿಸಿದ್ದಾರೆ. ಇದನ್ನು ನಿರ್ಲಕ್ಷಿಸಿದರೆ ಪೊಲೀಸ್‌ ಕಾಯ್ದೆ ಹಾಗೂ ಆರೋಗ್ಯ ಇಲಾಖೆ ಕಾಯ್ದೆ ಪ್ರಕಾರ, ಐಪಿಸಿ ಪ್ರಕಾರವೂ ಕಾನೂನು ಕ್ರಮ ಜರುಗಿಸಲು ಅವಕಾಶ ಇದೆ. ಜನಜಂಗುಳಿ ಅನವಶ್ಯಕವಾಗಿ ಸೇರಿದರೆ ಲಾಠೀ ಚಾರ್ಜ್‌ ಕೂಡ ಮಾಡಬಹುದು. ಆದರೆ ಅದಕ್ಕೆಲ್ಲ ಆಸ್ಪದ ನೀಡಬೇಡಿ. ಜನಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಸಹಕರಿಸಿ ಎಂದರು.

ಭದ್ರತೆ
ಎಲ್ಲರೂ ಮನೆಯಲ್ಲಿ ಇರುವ ಕಾರಣ ಜುವೆಲ್ಲರಿ, ದೇವಾಲಯ, ಸೊಸೈಟಿ, ಫೈನಾನ್ಸ್‌ ಮೊದಲಾದೆಡೆ ಕಳ್ಳತನದ ಭೀತಿ ಇರುತ್ತದೆ. ಇದಕ್ಕಾಗಿ ಪ್ರತ್ಯೇಕವಾಗಿ ನಿಗಾ ವಹಿಸಲಾಗಿದೆ. ಮಾಲಕರಿಗೆ ಮಾಹಿತಿ ನೀಡಲಾಗಿದೆ. ಸೆಕ್ಯುರಿಟಿಗಳನ್ನು ನಿಯೋಜಿಸಿದರೆ ಅವರಿಗೆ ಕರ್ಫ್ಯೂ ಪಾಸ್‌ ನೀಡಲಾಗುವುದು. ಜುವೆಲ್ಲರಿಗಳನ್ನು ಲಾಕರ್‌ಗಳಲ್ಲಿ ಇಡಿ. ನಗದು ಎಲ್ಲೂ ಇಡಬೇಡಿ. ದೇವಾಲಯಗಳಲ್ಲೂ ಲಾಕರ್‌ಗಳಲ್ಲಿ ಇಡುವಂತೆ ಸೂಚಿಸಲಾಗಿದ್ದು ದೇವಾಲಯಗಳಲ್ಲಿ ರಾತ್ರಿ ವೇಳೆ ಪಾಳಿ ಪ್ರಕಾರ ಇಬ್ಬರು ಇರುವಂತೆ ಸೂಚಿಸಲಾಗಿದೆ ಎಂದರು. ಸೇಫ್ ಕುಂದಾಪುರ ಪ್ರಾಜೆಕ್ಟ್ ಪ್ರಕಾರವೂ ಸಿಸಿಟಿವಿ ನಿಗಾದಲ್ಲಿ ಇರಲಿದ್ದು ಅಪರಾಧ ಪ್ರಕರಣಗಳ ತಡೆಗೆ ಕ್ರಮ ವಹಿಸಲಾಗಿದೆ ಎಂದರು.

ಸ್ಟಿಕ್ಕರ್‌
ವಿದೇಶದಿಂದ ಬಂದು ಕ್ವಾರಂಟೀನ್‌ನಲ್ಲಿ ಇರುವವರ ಮನೆ ಗೋಡೆಯಲ್ಲಿ ಸ್ಟಿಕ್ಕರ್‌ ಅಳವಡಿಸಲಾಗುತ್ತದೆ. ಇಲ್ಲಿಗೆ ಆರೋಗ್ಯ ಇಲಾಖೆ ಕಾರ್ಯಕರ್ತರ ಜತೆ ಪೊಲೀಸರು ಕೂಡ ತೆರಳಿ ಮನೆಯಲ್ಲಿಯೇ ಇದ್ದಾರೆಯೇ ಎಂದು ಪರಿಶೀಲಿಸುತ್ತಿದ್ದಾರೆ. ವಿದೇಶದಿಂದ ಬಂದವರು ಕಾನೂನು ಪಾಲನೆ ಮಾಡದೇ ಇದ್ದರೆ ಅಂತಹವರ ಕುರಿತು ಪೊಲೀಸರಿಗೆ ಮಾಹಿತಿ ನೀಡಬಹುದು ಎಂದರು.

Advertisement

ವಸ್ತು ಖರೀದಿಗೆ ಆತಂಕ ಬೇಡ
ತರಕಾರಿ, ಹಾಲು, ದಿನಸಿ, ಮೆಡಿಕಲ್‌ ಮೊದಲಾದ ಜೀವನಾವಶ್ಯಕ ವಸ್ತುಗಳ ಅಂಗಡಿ ಹಗಲು ಇಡೀ ದಿನ ತೆರೆದಿಡಬಹುದು ಎಂದು ಆದೇಶ ಇದೆ. ಆದ್ದರಿಂದ ಜನ ಒಮ್ಮೆಲೆ ಮುಗಿಬಿದ್ದು ಖರೀದಿ ಮಾಡಬೇಕಿಲ್ಲ. ಮನೆಯಿಂದ ಒಬ್ಬರೇ ಬಂದು 4 ಅಡಿಗಳ ಅಂತರ ಕಾಯ್ದು ಸರದಿಯಲ್ಲಿ ನಿಂತು ಖರೀದಿ ಮಾಡಿ.
-ಹರಿರಾಮ್‌ ಶಂಕರ್‌, ಎಎಸ್‌ಪಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next