Advertisement

ನೂಪುರ್‌ ಶರ್ಮಾ-ಜಿಂದಾಲ್‌ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯ

03:41 PM Jun 13, 2022 | Shwetha M |

ವಿಜಯಪುರ: ಬಿಜೆಪಿ ವಕ್ತಾರೆ ನೂಪುರ್‌ ಶರ್ಮಾ ಹಾಗೂ ನವೀನಕುಮಾರ್‌ ಜಿಂದಾಲ್‌ ಅವರು ಪ್ರವಾದಿ ಮಹ್ಮದ್‌ರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಮುಸ್ಲಿಂ ಮುತ್ತೈದಾ ಕೌನ್ಸಿಲ್‌(ಎಂಎಂಸಿ) ಪದಾಧಿಕಾರಿಗಳಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಾಮನಾಥ್‌ ಕೋವಿಂದ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಎಂಎಂಸಿ ಜಿಲ್ಲಾಧ್ಯಕ್ಷ ಮೌಲಾನಾ ತನ್ವೀರಫೀರಾ ಹಾಶ್ಮಿ ಮಾತನಾಡಿ, ಪ್ರವಾದಿ ಮಹ್ಮದ್‌ ರು ಶಾಂತಿ ಸಂದೇಶ ಸಾರಿದವರು. ಅವರ ಬಗ್ಗೆ ನೂಪುರ್‌ ಶರ್ಮಾ ಹಾಗೂ ನವೀನಕುಮಾರ ಜಿಂದಾಲ್‌ ಹಗುರವಾಗಿ ಮಾತನಾಡಿರುವುದು ಮುಸ್ಲಿಂ ಸಮುದಾಯದವರ ಮನಸಿಗೆ ನೋವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಬಿಜೆಪಿ ಹಾಗೂ ಕೆಲವು ಹಿಂದೂಪರ ಸಂಘಟನೆಗಳು ನಿರಂತರವಾಗಿ ಅಲ್ಪಸಂಖ್ಯಾತರ, ದಲಿತರ ಹಾಗೂ ಹಿಂದುಳಿದ ಸಮುದಾಯಗಳ ಮೇಲೆ ದಬ್ಟಾಳಿಕೆ ನಡೆಸುತ್ತಿವೆ. ಅದರಲ್ಲೂ ಮುಸ್ಲಿಂ ಸಮುದಾಯದ ಧಾರ್ಮಿಕ ಆಚರಣೆಗಳಾದ ಆಜಾನ್‌, ಹಿಜಾಬ್‌ ಸೇರಿದಂತೆ ವಿವಿಧ ಆಚರಣೆಗಳಲ್ಲಿ ಸುಖಾಸುಮ್ಮನೆ ಮೂಗು ತೋರಿಸುತ್ತಿವೆ. ಇದರಿಂದ ದೇಶದಲ್ಲಿ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದ್ದು ಸಾಮಾಜಿಕ ನೆಮ್ಮದಿ ಹಾಗೂ ಸ್ವಾಸ್ಥ್ಯ ಹಾಳಾಗುತ್ತಿದೆ. ರಾಷ್ಟ್ರಪತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೋಮು ದಳ್ಳುರಿ ಹರಡುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದರು.

ಭಾರತವು ಶಾಂತಿ, ಭ್ರಾತೃತ್ವ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆ ದೇಶವಾಗಿದೆ. ಆದರೆ ಬಿಜೆಪಿ ವಕ್ತಾರರಾದ ನುಪೂರ್‌ ಶರ್ಮಾ ಮತ್ತು ನವೀನಕುಮಾರ್‌ ಜಿಂದಾಲ್‌ ಇವರು ಟಿವಿ ಚಾನೆಲ್‌ನಲ್ಲಿ ಚರ್ಚೆ ವೇಳೆ ಉದ್ದೇಶಪೂರ್ವಕವಾಗಿ ಪ್ರವಾದಿ ಮಹ್ಮದ್‌ ರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ದೇಶದ ಎಲ್ಲ ಸಮುದಾಯದ ಜನರಿಗೆ ದುಃಖವನ್ನುಂಟು ಮಾಡಿದ್ದಾರೆ. ಇದು ಅಕ್ಷಮ್ಯ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಸ್ಲಾಂ ಧರ್ಮದ ಪ್ರವಾದಿಯವರನ್ನು ಅವಮಾನಿಸಿದ ನೂಪುರ್‌ ಶರ್ಮಾ ಮತ್ತು ನವೀನಕುಮಾರ್‌ ಜಿಂದಾಲ್‌ ಇವರ ಮೇಲೆ ಸೆಕ್ಷನ್‌ 153 (ಎ), ಸೆಕ್ಷನ್‌ 153(ಬಿ), 295 (ಎ), 298, 501, 504, 295 (ಎ) ಕಲಂಗಳನ್ನು ಹಾಕಿ ಶಿಸ್ತು ಕ್ರಮ ಜರುಗಿಸಬೇಕು. ಇಸ್ಲಾಂ ಧರ್ಮ ಪವಿತ್ರ ಧರ್ಮ ಅದರ ಪ್ರವಾದಿಗಳು ಎಲ್ಲ ಧರ್ಮಗಳನ್ನು ಪ್ರೀತಿಸುತ್ತಾರೆ. ಮುಸ್ಲಿಂ ಸಮಾಜದವರು ಯಾವಾಗಲೂ ಇತರ ಧರ್ಮದ ಬೋಧಕರನ್ನು ಹಾಗೂ ಮಹಾನ್‌ ವ್ಯಕ್ತಿಗಳನ್ನು ಗೌರವಿಸುತ್ತಾರೆ. ಯಾರು ಗೌರವಿಸುವುದಿಲ್ಲವೋ ಅವರು ನಮ್ಮ ಧರ್ಮದ ಪ್ರಕಾರ ಮುಸ್ಲಿಂರೇ ಅಲ್ಲ ಎಂದರು.

ಇಂದಿನ ದಿನಗಳಲ್ಲಿ ಜಾತಿ ವಿರೋಧಿ ವ್ಯಕ್ತಿಗಳು, ರಾಜಕೀಯ ನಾಯಕರಾಗುವ ಹಂಬಲದಲ್ಲಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಪ್ರೀತಿಯ ಪ್ರವಾದಿ, ಧರ್ಮದ ಬಗ್ಗೆ ಅರ್ಥಹೀನ ಕಾಮೆಂಟ್‌ ಗಳನ್ನು ಮಾಡುತ್ತ ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಕುರಿತು ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಕೆಟ್ಟ ಬೆಳವಣಿಗೆಯಾಗಿದ್ದು ಮುಸ್ಲಿಂ ಸಮುದಾಯದ ಮನಸಿಗೆ ಘಾಸಿ ಉಂಟು ಮಾಡಿದೆ. ನಮ್ಮ ದೇಶ ಮಹಾನ್‌ ದೇಶ. ಗಂಗಾ, ಜಮುನಾ, ಸಂಸ್ಕೃತಿಯ ದೇಶ ಇಲ್ಲಿ ಎಲ್ಲ ಧರ್ಮದ ಜನರು ಸಹಬಾಳ್ವೆ, ಶಾಂತಿ, ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಈ ವ್ಯವಸ್ಥೆಯನ್ನು ಹಾಳು ಮಾಡಲು ಪದೆ ಪದೆ ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

Advertisement

ಮೌಲಾನಾ ಮಹೆಬೂಬಾ ಉರ್‌ರೆಹೆಮಾನ್‌, ಯೂಸಫ್‌ಖಾಜಿ, ರಫೀಕ್‌ ಟಪಾಲ್‌, ಎಂ.ಸಿ. ಮುಲ್ಲಾ, ಅಬ್ದುಲ್‌ ರಜಾಕ್‌ ಹೋರ್ತಿ, ಫಯಾಜ್‌ ಕಲಾದಗಿ, ಬಬ್ಲೂ ಪೀರಜಾದೆ, ರವೀಂದ್ರ ಜಾಧವ, ಬಂದೇನವಾಜ್‌, ಎಸ್‌.ಎಸ್‌. ಖಾದ್ರಿ ಇನಾಮದಾರ, ಶಕಿಲ್‌ ಸುತಾರ ಸಾಂಗಲಿಕರ, ಕನಾನ ಮುಶ್ರೀಫ್‌ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next