ನವದೆಹಲಿ:ದೆಹಲಿಯ ರಾಮ್ಜಾಸ್ ಕಾಲೇಜಿನಲ್ಲಿ ನಡೆದ ಗಲಾಟೆ ಕುರಿತಂತೆ ವಿದ್ಯಾರ್ಥಿನಿ ಗುರ್ಮೆಹರ್ ಕೌರ್ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದ ಪೋಸ್ಟ್ ಗೆ ಸಂಬಂಧಿಸಿದಂತೆ ಮತ್ತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಕಿರಣ್ ರಿಜಿಜು, ಈ ವಿವಾದದಲ್ಲಿ ಎಡಪಕ್ಷಗಳು ಜನರ ಹಾದಿಯನ್ನು ತಪ್ಪಿಸುತ್ತಿರುವುದಾಗಿ ಆರೋಪಿಸಿದ್ದಾರೆ.
ಆಕೆ(ಗುರ್ಮೆಹರ್ ಕೌರ್)ಕಾಲೇಜು ಯುವತಿ, ಆಕೆ ಇಂತಹ ವೇಳೆ ವಿವಾದ ಸೃಷ್ಟಿಸಿದ್ದು ಸರಿಯಲ್ಲ. ನಮ್ಮ ಯೋಧರು ಹುತಾತ್ಮರಾದಾಗ ಎಡಪಂಥೀಯರು ಸಂಭ್ರಮಿಸುವ ಮನಸ್ಥಿತಿ ಅವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಯುದ್ಧ ನಡೆಯುತ್ತಿದ್ದಾಗ. ಎಡಪಕ್ಷಗಳು ಚೀನಾವನ್ನು ಬೆಂಬಲಿಸಿದ್ದವು. ಈಗ ಯುವಕರ ದಾರಿ ತಪ್ಪಿಸುತ್ತಿದ್ದಾರೆ, ಇದು ಒಳ್ಳೆಯ ಮಾರ್ಗವಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಆಕೆ ಹುತಾತ್ಮ ಯೋಧನ ಮಗಳು. ಹುತಾತ್ಮರು ಹುತಾತ್ಮರಾದಾಗ ಸಂಭ್ರಮಿಸುವವರ ಮಾತು ಕೇಳಿ ತನ್ನ ಮಗಳು ಹಾದಿ ತಪ್ಪಿದ್ದಾಳೆಂದು ಪಾಪ ಯೋಧನ ಆತ್ಮ ನಿಜಕ್ಕೂ ದುಃಖ ಪಡುತ್ತಿರಬಹುದು ಎಂದು ಹೇಳಿದರು.
ಪಾಕಿಸ್ತಾನ ತನ್ನ ತಂದೆಯನ್ನು ಕೊಂದಿಲ್ಲ, ಕೊಂದಿದ್ದು ಯುದ್ಧ ಎಂಬ ಪ್ಲೇ ಕಾರ್ಡ್ ಅನ್ನು ಗುರ್ಮೆಹರ್ ಕೌರ್ ತನ್ನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ್ದ ಪೋಸ್ಟ್ ಗೆ ಕಿರಣ್ ರಿಜಿಜು ಈ ಪ್ರತಿಕ್ರಿಯೆ ನೀಡಿದ್ದಾರೆ. ಕೌರ್ ಈ ವಿಡಿಯೋ ಪೋಸ್ಟ್ ಅನ್ನು ಕಳೆದ ಮೇ ತಿಂಗಳಿನಲ್ಲಿ ಅಪ್ ಲೋಡ್ ಮಾಡಿದ್ದಳು.