ಹೊಸದಿಲ್ಲಿ : 17ನೇ ಶತಮಾನದ ವಿಶ್ವ ಪ್ರಸಿದ್ಧ ಐತಿಹಾಸಿಕ ಮೊಗಲ್ ಸ್ಮಾರಕವಾಗಿರುವ ಆಗ್ರಾದ ತಾಜಮಹಲ್ ನ ಕಳಪೆ ನಿರ್ವಹಣೆಗೆ ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.
“ತಾಜಮಹಲ್ ನಿರ್ವಹಣೆಗೆ ಯಾರು ಹೊಣೆ ? ಕೇಂದ್ರ ಸರಕಾರವೇ, ರಾಜ್ಯ ಸರಕಾರವೇ ಎಂಬುದನ್ನು ಸರಿಯಾಗಿ ತಿಳಿಸಿ. ತಾಜ್‌ಮಹಲ್ ನಿರ್ವಹಣೆ ಬಗೆಗಿನ ಅಧಿಕಾರಿಗಳ ಗಂಭೀರತೆಯು ಕಾಮಿಡಿ ಶೋ ರೀತಿಯದ್ದಾಗಿದೆ; ಎಡಗೈ ಏನು ಮಾಡುತ್ತಿದೆ ಬಲಗೈಗೆ ಗೊತ್ತಿಲ್ಲ; ಬಲಗೈ ಏನು ಮಾಡುತ್ತಿದೆ ಎಂದು ಎಡಗೈಗೆ ಗೊತ್ತಿಲ್ಲ ಎಂಬಂತಹ ಸ್ಥಿತಿ ಇರುವಂತೆ ಕಾಣುತ್ತಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ತಾಜಮಹಲ್ ನಿರ್ವಹಣೆಯ ಹೊಣೆಗಾರಿಕೆ ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಭಾರತೀಯ ಪ್ರಾಕ್ತನ ಸರ್ವೇಕ್ಷಣ ಸಂಸ್ಥೆ ಇವುಗಳಲ್ಲಿ ಯಾರದ್ದೆಂಬುದನ್ನು ನಮಗೆ ಸೋಮವಾರದ ಒಳಗೆ ತಿಳಿಸಿ’ ಎಂದು ಸುಪ್ರೀಂ ಕೋರ್ಟ್ ಖಡಕ್ ಆದೇಶ ನೀಡಿದೆ.
ತಾಜಮಹಲ್ ನಿರ್ವಹಣೆ ಮತ್ತು ರಕ್ಷಣೆ ಕುರಿತಾಗಿ ಉತ್ತರ ಪ್ರದೇಶ ಸರಕಾರ ಮುನ್ನೋಟದ ಕರಡು ದಾಖಲೆ ಪತ್ರವನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದೆ. ಆದರೆ ಇದು ಸುಪ್ರೀಂ ಕೋರ್ಟನ್ನು ಸಿಟ್ಟಿಗೆಬ್ಬಿಸಿದೆ. ಇದರ ಹಿಂದಿನ ತರ್ಕವನ್ನು ಅದು ಪ್ರಶ್ನಿಸಿದೆ. “ಉತ್ತರಪ್ರದೇಶ ಸರಕಾರಕ್ಕಾಗಿ ನಾವು ಈ ದಾಖಲೆ ಪತ್ರಗಳನ್ನು ಪರಾಮರ್ಶಿಸಬೇಕೇ?’ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಈ ಕರಡು ದಾಖಲೆ ಪತ್ರವನ್ನು ಸಿದ್ಧಪಡಿಸುವಾಗ ಉತ್ತರ ಪ್ರದೇಶ ಸರಕಾರ, 17ನೇ ಶತಮಾನದ ಈ ಐತಿಹಾಸಿಕ ಸ್ಮಾರಕದ ನಿರ್ವಹಣೆಯ ಹೊಣೆ ಹೊತ್ತಿರುವ ಪ್ರಾಕ್ತನ ಸರ್ವೇಕ್ಷಣ ಇಲಾಖೆಯೊಡನೆ ಸಮಾಲೋಚಿಸದಿರುವುದು ಆಶ್ಚರ್ಯ ಉಂಟು ಮಾಡುವಂತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.