ಇಂಗ್ಲಿಷ್‌ನಲ್ಲಿ ಕನ್ನಡ ನೆಲದ, ವಿಶೇಷವಾಗಿ ಗ್ರಾಮಾಂತರ ಪ್ರದೇಶದ ಸಮಷ್ಟಿ ದೃಷ್ಟಿಯ ಬದುಕಿನ ಚೆಲುವನ್ನು ಹಾಗೂ ಸೊಗಡನ್ನು ದಾಖಲಿಸಿದ ಭಾರತೀಯ ಇಂಗ್ಲಿಷ್ ಕಾದಂಬರಿಕಾರರಲ್ಲಿ ಮೈಸೂರಿನ ಆರ್. ಕೆ. ನಾರಾಯಣ್ ಹಾಗೂ ಹಾಸನದ ರಾಜಾರಾವ್ ಇವರಿಬ್ಬರದೂ ಮರೆಯಲಾಗದ ಕೊಡುಗೆ.
ಆರ್.ಕೆ. ನಾರಾಯಣ್ ಮಾಲ್ಗುಡಿ ಎಂಬ ಕಾಲ್ಪನಿಕ ಪೇಟೆಯ ನಿತ್ಯ ವೃತ್ತಾಂತಗಳ ಮೂಲಕ ಸಮಗ್ರ ಕರ್ನಾಟಕದ ಸಹಬಾಳ್ವೆ ಸಂಸ್ಕೃತಿಯ ವೈಶಿಷ್ಟéವನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾದವರು; ಹಾಗೆಯೇ ರಾಜಾರಾವ್ ಕಾಂತಾಪುರ ಎಂಬ ಕಾಲ್ಪನಿಕ ಗ್ರಾಮದ ಸ್ವಾತಂತ್ರ್ಯ ಚಳವಳಿಯ ನೆನಪುಗಳನ್ನು ದಾಖಲಿಸುವ ಮೂಲಕ ಗ್ರಾಮ ಭಾರತದ ಘನಸ್ತಿಕೆಯನ್ನು ಹೃದಯಂಗಮವಾಗಿ ಚಿತ್ರಿಸಿದವರು. ಕರ್ನಾಟಕದ ಗ್ರಾಮೀಣ ಜೀವನಶೈಲಿಯ ಸಮೀಪ ದರ್ಶನ ಮಾಡಿಸುವ ಇಂಥ ಕೃತಿಗಳ ಸಾಲಿಗೆ ಸೇರುವಂಥ ಕೃತಿ, ಇದೀಗಷ್ಟೆ ಪ್ರಕಟವಾಗಿರುವ ಲೆಫ್ಟ್ ಫ್ರಂ ದ ನೇಮ್‌ಲೆಸ್ ಶಾಪ್.
ಇಲ್ಲಿ ಹನ್ನೆರಡು ಕಥೆಗಳಿವೆ. ಈ ಕಥೆಗಳೆಲ್ಲವೂ ಶಿವಮೊಗ್ಗ ಜಿಲ್ಲೆಯ ರುದ್ರಪುರ ಎಂಬ ಕಾಲ್ಪನಿಕ ಊರಿನವು. ಬದುಕಿನ ಸ್ಥಿತ್ಯಂತರದ ಬಗ್ಗೆ ಸದಾ ಆಸಕ್ತರಾಗಿರುವ, ಆದರೆ, ಹೊಸಯುಗದ ಆಮಿಷಕ್ಕೊಳಗಾಗದೆ ಗ್ರಾಮೀಣ ಬದುಕಿನ ಮೌಲ್ಯಗಳನ್ನು ಅರ್ಥಪೂರ್ಣವಾಗಿ ಕಾಪಿಡುವ ಕಾಳಜಿಯ, ಪರಸ್ಪರರನ್ನು ಆದರದಿಂದ ಕಾಣುವ ಜನರನ್ನು ಒಳಗೊಂಡಿರುವ ಊರು ಇದು. ಈ ಮುಗ್ಧಮಂದಿ ನೆರೆಕರೆಯ ವ್ಯವಹಾರಗಳಲ್ಲಿ, ಅವು ತಮ್ಮದೇ ವ್ಯವಹಾರಗಳೆಂಬಂತೆ ಆಸಕ್ತರು; ಅಹಮಿಕೆಯಿಲ್ಲದ ಅನೌಪಚಾರಿಕ ನಡೆನುಡಿಯವರು; ತಮ್ಮ ವೃತ್ತಿಯಲ್ಲಿ ಕುಶಲರು; ಊರ ಯಾವನೇ ವ್ಯಕ್ತಿ ಕಷ್ಟದಲ್ಲಿದ್ದರೆ ಅವನ ನೆರವಿಗಾಗಿ ಧಾವಿಸುವಲ್ಲಿ ಸಂತೋಷ ಕಾಣುವವರು. ಟೂರಿಂಗ್ ಟಾಕೀಸಿಗಾಗಿ ನಾಯಕ ಹಾಗೂ ಖಳನಟರ ಭಾವಚಿತ್ರಗಳನ್ನು ಬರೆದುಕೊಡುವ, ಆದರೆ ತನ್ನ ಧನಿಯ ನಿರ್ಲಕ್ಷ್ಯ ಧೋರಣೆಯಿಂದ ಅದನ್ನು ತ್ಯಜಿಸುವ ಚಿತ್ರಕಾರ, ಗಂಡನನ್ನು ಕಳೆದುಕೊಂಡರೂ ಧೃತಿಗೆಡದೆ ಹೆಸರಿಲ್ಲದ ಗೂಡಂಗಡಿ ತೆರೆದು ಮರ್ಯಾದೆಯಿಂದ ಬದುಕಿ ತೋರಿಸುವ ದಿಟ್ಟ ಮಹಿಳೆ, ಊರ ದೇವಾಲಯದ ಆರಾಧ್ಯಮೂರ್ತಿಯಾದ ಪ್ರಸನ್ನ ಪಾರ್ವತಿಯನ್ನು ಜೀವಂತ ದೇವತೆಯೆಂದೇ ಅರ್ಚಿಸಿ ಸಂತೋಷ ಕಾಣುವ; ಪೂಜೆಯ ಅವಸರದಲ್ಲಿದ್ದರೂ ಹೂಕಟ್ಟಿಕೊಡುವ ವೃದ್ಧೆಯನ್ನು ತಾನೇ ಎತ್ತಿ ಆಸ್ಪತ್ರೆಗೆ ಕಳಿಸಿಕೊಡುವ ಅರ್ಚಕ, ಗ್ರಾಮದ ಎಲ್ಲ ಮನೆಯ ಹಿರಿಕಿರಿಯರ “ಹೇರ್‌ಕಟ್’ಗೆ ಹೇಗೋ ಹಾಗೇ ಊರ ಬ್ರಾಹ್ಮಣರ ಮನೆಯ ಶುಭಶೋಭನ ಸಮಾರಂಭಗಳ ಸಂದರ್ಭಗಳಲ್ಲಿ ಕರ್ಮಾಂಗ ಸಹಾಯಕನಾಗಿ ಒದಗಿಬರುವ ಕ್ರೈಸ್ತ ಕೌÒರಿಕ, ಜೀರ್ಣಾವಸ್ಥೆಯಲ್ಲಿರುವ ಕ್ರಿಸ್ತೋಸ್ ಕಾನ್ವೆಂಟಿನ ಹಳೆ ಕಟ್ಟಡದ ಕಂಬವನ್ನು ಊರ ಅರ್ಚಕನಂತೆ ಮುಟ್ಟಿ-ತಟ್ಟಿ ಮಾತಾಡಿಸಿ ಭವಿಷ್ಯ ಹೇಳುವ ವಿದ್ಯಾರ್ಥಿಯಲ್ಲಿ ಶಾಲೆಯ ಜೀರ್ಣೋದ್ಧಾರ ಹಾಗೂ ಅನಾಥಾಶ್ರಮದ ನಿರ್ಮಾಣ ಸಾಧ್ಯವೆ ಎಂದು ಭವಿಷ್ಯ ಕೇಳಲು ಕಾತರಿಸುವ ಶಾಲಾ ಮುಖ್ಯಾಧ್ಯಾಪಕ, ಹಾಕಿ ಆಟವನ್ನೂ ದಟ್ಟ ಹಸಿರನ್ನೂ ಧ್ಯಾನಿಸುವ ಅರೆಮರುಳ ಭಿಕ್ಷುಕನನ್ನೂ ಕೂಡ ಆದರಿಸಿ ಅವನನ್ನು ಉಪಚರಿಸುವ ಊರ ವೈದ್ಯ, ಅವನನ್ನು ಊರ ಜೀವನಾಸಕ್ತಿಯ ಕುರುಹೆಂದು ಭಾವಿಸಿ ಸ್ವೀಕರಿಸುವ ಹಿರಿಯ ಗ್ರಾಮಸ್ಥ ಬಸವರಾಜನಂಥವರು ಇಲ್ಲಿದ್ದಾರೆ. ಇಲ್ಲಿಯ ಎಲ್ಲ ಕಥೆಗಳಲ್ಲೂ ಇಂಥ ಎಲ್ಲ ಪಾತ್ರಗಳು ಒಂದಿಲ್ಲೊಂದು ನೆಪದಿಂದ ಸಹಜವಾಗಿ ಬಂದು ಹೋಗುತ್ತವೆ; ಸಹಭಾತೃತ್ವ , ಜೀವನಪ್ರೀತಿ, ಪರಸ್ಪರ ಭರವಸೆಗಳ ಪ್ರತಿನಿಧಿಗಳಾಗಿ ಬದುಕುವುದೆಂದರೆ ಏನೆಂಬುದನ್ನು ತಮ್ಮ ಸಹಜ ಸ್ವಾಭಾವಿಕ ಚರ್ಯೆಗಳ ಮೂಲಕ ತೋರಿಸಿಕೊಡುತ್ತವೆ.
ಇಲ್ಲಿನ ಕಥೆಗಳನ್ನು ಪ್ರತ್ಯೇಕವಾಗಿಯೂ ಓದಿಕೊಳ್ಳಬಹುದು.
ಜೊತೆಗೆ ಜೀವನವೇ ವಸ್ತುವಾಗುಳ್ಳ ಮಣ್ಣ ಪರಿಮಳದ ಕಾದಂಬರಿಯೊಂದರ ಅಧ್ಯಾಯಗಳಾಗಿಯೂ ಶೋಭಿಸುತ್ತವೆ. ಇವು ಕನ್ನಡಕ್ಕೆ ಅನುವಾದಗೊಂಡರೆ ಗೊರೂರು ಅವರ ನಮ್ಮ ಊರಿನ ರಸಿಕರು ಸಂಕಲನದ ಪ್ರಬಂಧ- ಕಥನಗಳಂತೆಯೋ, ಶಿವರಾಮ ಕಾರಂತರ ಹಳ್ಳಿಯ ಹತ್ತು ಸಮಸ್ತರು ಸಂಕಲನದ ವ್ಯಕ್ತಿಚಿತ್ರ-ಕಥನಗಳಂತೆಯೋ ಕಾಣಿಸಲಿಕ್ಕಿಲ್ಲವೆ- ಎಂಬ ಕುತೂಹಲವನ್ನೂ ಮೂಡಿಸುತ್ತವೆ. ಓದುಗರನ್ನು ಗ್ರಾಮೀಣ ಪ್ರಜ್ಞೆಯ ಕೊಳದಲ್ಲಿ ಈಜುವಂತೆ ಮಾಡುವ, ಹೃದಯವನ್ನು ಮುದಗೊಳಿಸಿ ಕಣ್ಣುಗಳನ್ನು ಒದ್ದೆಯಾಗಿಸುವ, ಅಲ್ಲಲ್ಲಿ ಅಂತಃಕರಣವನ್ನು ಮಿಡಿಯುವ ಪ್ರಸಂಗಗಳನ್ನೊಳಗೊಂಡ, ಕನ್ನಡದ ಸೊಗಡಿನ ನಿರೂಪಣೆಯಿಂದ ಇನ್ನಷ್ಟು ಆಪ್ತವಾಗುವ ಕೃತಿ ಇದು.
ಲೆಫ್ಟ್ ಫ್ರಂ ದ ನೇಮ್‌ಲೆಸ್ ಶಾಪ್ (ಕಥೆಗಳು)
ಲೇ.: ಅದಿತಿ ರಾವ್
ಪ್ರ.: ಹಾರ್ಪರ್ ಕಾಲಿನ್ಸ್ ಪಬ್ಲಿಷರ್, ಎ-75, ಸೆಕ್ಟರ್ 57, ನೋಯಿಡಾ, ಉತ್ತರಪ್ರದೇಶ-201301
ಮೊದಲ ಮುದ್ರಣ: 2019 ಬೆಲೆ: ರೂ. 399
–
ಜಕಾ