Advertisement

ಲೀಲಾವತಿ ಕೊಲೆ ಪ್ರಕರಣ: ಸೈನೈಡ್‌ ಮೋಹನ ಗಲ್ಲು ಶಿಕ್ಷೆಯಿಂದ ಪಾರು

07:31 AM Oct 25, 2017 | Team Udayavani |

ಬೆಂಗಳೂರು: ಕಳೆದ 12 ವರ್ಷಗಳ ಹಿಂದೆ ನಡೆದಿದ್ದ ಬಂಟ್ವಾಳ ತಾಲೂಕಿನ ವಾಮನಪಡ ವಿನ ಲೀಲಾವತಿ ಕೊಲೆ ಪ್ರಕರಣದ ಆರೋಪಿ ಸೈನೈಡ್‌ ಮೋಹನನಿಗೆ ಹೈಕೋರ್ಟ್‌ ಗಲ್ಲುಶಿಕ್ಷೆ ರದ್ದುಪಡಿಸಿದೆ.

Advertisement

ಪ್ರಕರಣ ಸಂಬಂಧ ಆರೋಪಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ಸ್‌ ಕೋರ್ಟ್‌ ವಿಧಿಸಿದ್ದ ಗಲ್ಲುಶಿಕ್ಷೆ ಖಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾ. ರವಿ ಮಳೀಮಠ ಹಾಗೂ ನ್ಯಾ. ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಮಹಿಳೆಯನ್ನು ಆರೋಪಿ ಕೊಲೈಗೈದಿದ್ದಾನೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರ ಒದಗಿಸುವಲ್ಲಿ ಪ್ರಾಸಿಕ್ಯೂಶನ್‌ ವಿಫ‌ಲವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ನ್ಯಾಯಪೀಠ, ಆರೋಪಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸಿದೆ. ಆದರೆ, ಮಹಿಳೆಯ ಮೇಲೆ ಅತ್ಯಾಚಾರ ಹಾಗೂ ಆಕೆಯ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 5 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಏನಿದು ಪ್ರಕರಣ?: ಬಂಟ್ವಾಳ ತಾಲೂಕಿನ ವಾಮನಪಡುವಿನ ನಿವಾಸಿ ಲೀಲಾವತಿಯ ಮೃತ  ದೇಹ 2005ರ ಸೆ.10ರಂದು ಮೈಸೂರು ಬಸ್‌ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಮಹಿಳೆಯ ಜತೆ ಸ್ನೇಹ ಸಂಪಾದಿಸಿದ್ದ ಸೈನೈಡ್‌ ಮೋಹನ ಆಕೆಯನ್ನು
ಸೆ.9ರಂದು ಮೈಸೂರಿಗೆ ಕರೆದೊಯ್ದು ಲಾಡ್ಜ್ನಲ್ಲಿ ಅತ್ಯಾಚಾರ ಎಸಗಿ ಬಳಿಕ ಸಾರ್ವಜನಿಕ ಶೌಚಾಲಯದಲ್ಲಿ ಸೈನೈಡ್‌ ತಿನ್ನಿಸಿ ಕೊಲೆಗೈದಿದ್ದ ಎಂಬ ಆರೋಪವಿತ್ತು. ಪ್ರಕರಣ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಸಲ್ಲಿಸಿದ್ದ ದೋಷಾರೋಪಪಟ್ಟಿ ಅನ್ವಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿ 2013ರ ಡಿಸೆಂಬರ್‌ 21ರಂದು ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಇನ್ನೊಂದು ಕೇಸು ಬಾಕಿ! 
ಅಧೀನ ನ್ಯಾಯಾಲಯ ಮೂವರು ಮಹಿಳೆಯರ ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ವಿಧಿಸಿದ್ದ ಗಲ್ಲುಶಿಕ್ಷೆ ಖಾಯಂಗೊಳಿಸುವ
ಸಂಬಂಧ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗಳ ಪೈಕಿ ಎರಡು ಪೂರ್ಣಗೊಂಡಿವೆ. ಕೆಲ ದಿನಗಳ ಹಿಂದಷ್ಟೇ 2009ರಲ್ಲಿ ನಡೆದಿದ್ದ ಅನಿತಾ ಬರಮಾರ್‌ ಕೊಲೆ ಪ್ರಕರಣದಲ್ಲಿ ಆರೋಪಿಗೆ ಗಲ್ಲುಶಿಕ್ಷೆಯನ್ನು ಪರಿವರ್ತಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೀಗ 2008ರ ಫೆ.11ರಂದು ನಡೆದಿದ್ದ ಸುನಂದಾ ಎಂಬಾಕೆಯ ಕೊಲೆ ಪ್ರಕರಣದ ವಿಚಾರಣೆ ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next