Advertisement
ಆ. 25ರಂದು ಸುಳ್ಯದ ರಂಗಮನೆಯಲ್ಲಿ ನಡೆಯುವ ಯಕ್ಷ ಸಂಭ್ರಮದ ಸಂದರ್ಭ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿಯು ಯಕ್ಷ ಸ್ಮರಣಿಕೆ, ಪ್ರಶಸ್ತಿ ಫಲಕ, 10,000 ರೂ. ನಗದು ಒಳ ಗೊಂಡಿರುತ್ತದೆ ಎಂದು ರಂಗಮನೆ ರೂವಾರಿ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.
ಮೂಢ ನಂಬಿಕೆಗಳ ಕಟ್ಟಳೆಯನ್ನೆಲ್ಲ ಮೆಟ್ಟಿ ನಿಂತು, ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತರಾಗಿ ಮೆರೆದ ಲೀಲಾವತಿ ಬೈಪಾಡಿತ್ತಾಯ, ಪ್ರಥಮ ವೃತ್ತಿಪರ ಮಹಿಳಾ ಭಾಗವತರು. ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಬಪ್ಪನಾಡು ಮೇಳ, ಕುಂಬಳೆ, ತಲಕಳ ಮೇಳ ಮುಂತಾದವುಗಳಲ್ಲಿ ಸತತ 20 ವರ್ಷಗಳ ಕಾಲ ಡೇರೆ ಹಾಗೂ ಬಯಲಾಟಗಳ ಪ್ರದರ್ಶನಗಳಲ್ಲಿ ಪತಿ ಹರಿ ನಾರಾಯಣ ಬೈಪಡಿತ್ತಾಯರೊಂದಿಗೆ ತಿರುಗಾಟ ನಡೆಸಿದ್ದಾರೆ. 80ರ ದಶಕದಲ್ಲಿ ಅರುವ ನಾರಾಯಣ ಶೆಟ್ಟರು ಕಟ್ಟಿದ ಅಳದಂಗಡಿ ಮೇಳದಲ್ಲಿ ಪ್ರಧಾನ ಭಾಗವತರಾಗಿ ಮೆರೆದರು. ಭಾಗವತಿಕೆಗೆ ಮಹಿಳೆಯ ಇಂಪಾದ ಕಂಠವೂ ಹೊಂದುತ್ತದೆ ಎನ್ನುವುದನ್ನು ತೋರಿಸಿಕೊಟ್ಟವರು. ಅನಿವಾರ್ಯ ಸಂದರ್ಭಗಳಲ್ಲಿ ಇಡೀ ರಾತ್ರಿ ಭಾಗವತಿಕೆ ಮಾಡಿದ ನಿದರ್ಶನಗಳೂ ಇವೆ. ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ, ಪುರಾಣ ಜ್ಞಾನ ಹಾಗೂ ಮಾಧುರ್ಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 45 ವರ್ಷಗಳ ಸುದೀರ್ಘ ಯಕ್ಷ ಪಯಣದಲ್ಲಿ ಹಲವು ಶಿಷ್ಯರನ್ನೂ ರೂಪಿಸಿ ಯಕ್ಷರಂಗಕ್ಕೆ ಕೊಡುಗೆ ನೀಡಿದ್ದಾರೆ. ಯಕ್ಷ ಸೇವೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಅಗರಿ ಭಾಗವತ ಪ್ರಶಸ್ತಿ, ಉಳ್ಳಾ ಲದ ರಾಣಿ ಅಬ್ಬಕ್ಕ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ, ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಶಸ್ತಿ ಸಂದಿವೆ.