Advertisement

ಮಹಾನಗರ ಪಾಲಿಕೆಯಿಂದಲೇ ಎಲ್‌ಇಡಿ ಬೀದಿದೀಪ

06:35 PM Aug 11, 2021 | Team Udayavani |

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆ ನೆಚ್ಚಿಕೊಂಡು ಮಹಾನಗರದಲ್ಲಿ ವಿದ್ಯುತ್‌ ದೀಪ ಅಳವಡಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಮುಂದಾಗಿರಲಿಲ್ಲ. ಆದರೆ ಬೀದಿದೀಪ ಇಲ್ಲದೆ ಕತ್ತಲಲ್ಲಿ ಓಡಾಡುತ್ತಿದ್ದ ಜನರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದರು. ಇದರಿಂದ ಎಚ್ಚೆತ್ತ ಪಾಲಿಕೆ ಸಮೀಕ್ಷೆ ನಡೆಸಿ ಎಲ್‌ಇಡಿ ವಿದ್ಯುತ್‌ ದೀಪ ಅಳವಡಿಸಲು ಮುಂದಾಗಿದೆ.

Advertisement

ಕಳೆದ ಎರಡು ವರ್ಷಗಳಿಂದ ದೀಪ ಕಾಣದ ಕಂಬಗಳು ಇದೀಗ ಬೆಳಗಲಿವೆ. ವಿದ್ಯುತ್‌ ಮಿತಬಳಕೆ ಕಾರಣ ಸ್ಮಾರ್ಟ್‌ಸಿಟಿ ಕಂಪನಿಯಿಂದ
ಮಹಾನಗರದ ಎಲ್ಲ ಬೀದಿಗಳನ್ನು ಬದಲಾಯಿಸಿ ಎಲ್‌ ಇಡಿ ದೀಪಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಎರಡು ವರ್ಷಗಳ ಹಿಂದೆಯೇ ಯೋಜನೆ ಅನುಷ್ಠಾನಗೊಳ್ಳಬೇಕಾಗಿತ್ತು. ಟೆಂಡರ್‌ ಪ್ರಕ್ರಿಯೆ, ಗುತ್ತಿಗೆದಾರನಿಗೆ ಕಾರ್ಯಾದೇಶ ಹೀಗೆ ತಾಂತ್ರಿಕ ಕಾರಣಗಳಿಂದಾಗಿ ಎರಡು ವರ್ಷ ಕಳೆದಿದೆ.

ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಗೊಳ್ಳುವ ನಿರೀಕ್ಷೆಯಲ್ಲಿ ಪಾಲಿಕೆ ಹೊಸ ದೀಪಗಳನ್ನು ಅಳವಡಿಸುವ ಗೋಜಿಗೆ ಹೋಗಿರಲಿಲ್ಲ. ಕೇವಲ
ದುರಸ್ತಿ ಕಾರ್ಯಕ್ಕೆ ಮಾತ್ರ ಒತ್ತು ನೀಡಿತ್ತು. ಇದರ ಪರಿಣಾಮ ಎರಡು ವರ್ಷಗಳಿಂದ ಪಾಲಿಕೆ ವ್ಯಾಪ್ತಿಯ ಕಂಬಗಳು ಹೊಸ ದೀಪ ಕಂಡಿರಲಿಲ್ಲ.
ಪಾಲಿಕೆಯ ಈ ಕ್ರಮಕ್ಕೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಅವಳಿ ಸಹೋದರಿಯರ ಅನನ್ಯ ಸಾಧನೆ; ನೋವಲ್ಲೂ ಪರೀಕ್ಷೆ ಬರೆದು ಶಾಲೆಗೆ ಪ್ರಥಮ

ವಲಯಗಳ ವ್ಯಾಪ್ತಿಯಲ್ಲಿ ಸಮೀಕ್ಷೆ: ಬೀದಿ ದೀಪಗಳಿಲ್ಲದ ಪರಿಣಾಮ ಸಾರ್ವಜನಿಕರು, ಸ್ಥಳೀಯ ಜನಪ್ರತಿನಿಧಿಗಳು ಪಾಲಿಕೆಗೆ ಸಾಕಷ್ಟು ಒತ್ತಡ
ಹಾಕಿದ್ದರು. ಪ್ರತಿ ಸಭೆಯಲ್ಲಿ ಬೀದಿ ದೀಪ ಸದ್ದು ಮಾಡುತ್ತಿತ್ತು. ಸ್ಮಾರ್ಟ್‌ಸಿಟಿ ಯೋಜನೆಗಾಗಿ ಕಾದು ಕುಳಿತರೆ ಜನರ ವಿರೋಧ ಎದುರಿಸಬೇಕಾಗುತ್ತದೆ ಎಂದು ಪಾಲಿಕೆ ಅಗತ್ಯವಿರುವೆಡೆ ಎಲ್‌ಇಡಿ ವಿದ್ಯುತ್‌ ದೀಪ ಅಳವಡಿಕೆಗೆ ಮುಂದಾಗಿದೆ.

Advertisement

ವಲಯವಾರು ಸಮೀಕ್ಷೆ ನಡೆಸಿದೆ. ದೀಪಗಳಿಲ್ಲದ ಹಾಗೂ ಬದಲಿಸಬೇಕಾದ ದೀಪದ ಕಂಬಗಳನ್ನು ಗುರುತಿಸಿದ್ದು ಇದರಲ್ಲಿ 2455 ಕಂಬಗಳಲ್ಲಿನ
ದೀಪಗಳು ದುರಸ್ತಿಯಿಲ್ಲ. 1475 ಕಂಬಗಳಲ್ಲಿ ದೀಪಗಳೇ ಇಲ್ಲ ಎಂಬುದನ್ನು ಗುರುತಿಸಲಾಗಿದೆ. 14ನೇ ಹಣಕಾಸಿನಲ್ಲಿ ವಿವಿಧ ಯೋಜನೆಗಳಲ್ಲಿ
ಉಳಿದಿರುವ ಸುಮಾರು 54 ಲಕ್ಷ ರೂ.ವನ್ನು ಇದಕ್ಕೆ ವಿನಿಯೋಗಿಸಲು ಪಾಲಿಕೆ ಮುಂದಾಗಿದೆ.

ದುರಸ್ತಿಯಾಗದ ಇಡೀ ಸೆಟ್‌ಅನ್ನು ಬದಲಿಸಲು ಮೊದಲ ಆದ್ಯತೆ ನೀಡಲಾಗಿದೆ. ಪಾಲಿಕೆಯಿಂದ ಸುಮಾರು 2000 ವಿದ್ಯುತ್‌ ದೀಪ ಅಳವಡಿಸಲು ಯೋಜನೆ ರೂಪಿಸಲಾಗಿದ್ದರೂ 54 ಲಕ್ಷ ರೂ.ದಲ್ಲಿ ಸುಮಾರು 1800 ವಿದ್ಯುತ್‌ ದೀಪ ಮಾತ್ರ ಬದಲಿಸಬಹುದಾಗಿದೆ. ಇನ್ನೂ ವಿದ್ಯುತ್‌ ದೀಪಗಳು ಇಲ್ಲದ 1475 ಕಂಬಗಳಿಗೆ ಸ್ಮಾರ್ಟ್‌ಸಿಟಿ  ಯೋಜನೆಯ ಮೂಲಕವೇ ದೀಪ ಅಳವಡಿಕೆಯಾಗಲಿದೆ.

ಬದಲಿಸದಂತೆ ಲಿಖಿತ ಆದೇಶ
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಹಾನಗರದ ಎಲ್ಲಾ ವಿದ್ಯುತ್‌ ದೀಪಗಳನ್ನು ಎಲ್‌ಇಡಿ ದೀಪಗಳಿಗೆ ಪರಿವರ್ತಿಸುವ ಯೋಜನೆಯಾಗಿದ್ದರಿಂದ ಪಾಲಿಕೆಯಿಂದ ದೀಪ ಬದಲಿತಕ್ಕದ್ದಲ್ಲ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಲಿಖೀತ ಆದೇಶವಿತ್ತು. ಹೀಗಾಗಿ ಕಳೆದ ಎರಡು ವರ್ಷಗಳಿಂದಲೂ ಸ್ಮಾರ್ಟ್‌ಸಿಟಿ ಯೋಜನೆಗಾಗಿ ಕಾದು ಕುಳಿತುಕೊಳ್ಳುವಂತಾಗಿತ್ತು. ಇದೀಗ ಸ್ಮಾರ್ಟ್‌ಸಿಟಿಯಿಂದ ಕಾರ್ಯಾದೇಶ ನೀಡಿ ಏಳೆಂಟು ತಿಂಗಳು ಕಳೆದರೂ ಗುತ್ತಿಗೆದಾರರು ಇತ್ತ ಸುಳಿಯದಿರುವ ಕಾರಣ ಸ್ಮಾರ್ಟ್‌ಸಿಟಿ ಯೋಜನೆಗೆ ಪೂರಕವಾಗಿಯೇ ಸುಮಾರು 2000 ಎಲ್‌ಇಡಿ ದೀಪ ಅಳವಡಿಸಲು ಪಾಲಿಕೆ ಮುಂದಾಗಿದೆ.

ದುರಸ್ತಿ, ನಿರ್ವಹಣೆ ಮಾತ್ರ
ಬೀದಿ ದೀಪದ ನಿರ್ವಹಣೆಗೆ ಪಾಲಿಕೆಯಿಂದ ಪ್ರತಿವರ್ಷ 4.18 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಬೀದಿ ದೀಪ ನಿರ್ವಹಣೆ ಕುರಿತು ಪ್ರತಿ ತಿಂಗಳು ಸರಾಸರಿ 3500 ದೂರುಗಳು ಬರುತ್ತಿದ್ದು, ಶೇ.40 ದೂರುಗಳು ಹೊಸ ದೀಪ ಅಳವಡಿಸುವ ಕುರಿತು ಆಗಿವೆ. ಪದೇ ಪದೇ ದೂರುಗಳು ಬರುತ್ತಿದ್ದಂತೆ ಹೆಲೋಜಿನ್‌ ಸೆಟ್‌ ಇರುವೆಡೆ ಟ್ಯೂಬ್‌ಲೈಟ್‌ ಅಳವಡಿಸಿ ಸಮಾಧಾನ ಪಡಿಸುವ ಕೆಲಸ ಆಗುತ್ತಿದೆ. ಇನ್ನೂ ಕೆಲವೆಡೆ ದೂರು ನೀಡಿ ಬೇಸತ್ತ ಸ್ಥಳೀಯರೇ ಹಣ ಸಂಗ್ರಹಿಸಿ ದೀಪ ಅಳವಡಿಸಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸುಧಾರಣೆಯತ್ತ ನಿರ್ವಹಣೆ
ಮಹಾನಗರದ ಬೀದಿದೀಪ ನಿರ್ವಹಣೆ ಪಾಲಿಕೆಗೆ ದೊಡ್ಡ ಸವಾಲಿನ ಕಾರ್ಯವಾಗಿತ್ತು. ಇದಕ್ಕಾಗಿ ಗುತ್ತಿಗೆ ವ್ಯವಸ್ಥೆಯನ್ನು ಬದಲಿಸಿ ಟೆಂಡರ್‌ ಕರೆದರೂ ಗುತ್ತಿಗೆದಾರರು ಬಂದಿರಲಿಲ್ಲ. ಆದರೆ ಇತ್ತೀಚೆಗೆ ನಡೆದ ಟೆಂಡರ್‌ನಲ್ಲಿ ಪ್ರತಿಷ್ಠಿತ ಕಂಪನಿ, ಗುತ್ತಿಗೆದಾರರಿಗೆ ವಲಯವಾರು ನಿರ್ವಹಣೆ ನೀಡಲಾಗಿದೆ. ಪಾಲಿಕೆ ಕಂಟ್ರೋಲ್‌ ರೂಂಗೆ ದೂರು ಬಂದ 24 ಗಂಟೆಯಲ್ಲಿ ನಿರ್ವಹಣೆ ಕಾರ್ಯ ಪೂರ್ಣಗೊಳಿಸಬೇಕು ಎನ್ನುವ ನಿಬಂಧನೆ ವಿಧಿಸಿರುವ ಕಾರಣ ಹಿಂದೆ ಶೇ.65ರಷ್ಟಿದ್ದ ನಿರ್ವಹಣಾ ಕಾರ್ಯ ಇದೀಗ ಶೇ.95ಕ್ಕೆ ಬಂದಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ

ಮಹಾನಗರ ವ್ಯಾಪ್ತಿಯಲ್ಲಿ ಸುಮಾರು 64 ಸಾವಿರ ವಿದ್ಯುತ್‌ ಕಂಬಗಳಿದ್ದು, ಸದ್ಯದ ನಿರ್ವಹಣೆ ಗುತ್ತಿಗೆಯಲ್ಲಿ ಬಲ್ಬ್ ಗಳು ಹೋದರೆ
ಬದಲಿಸುವುದು ಗುತ್ತಿಗೆದಾರರ ಕಾರ್ಯ. ಆದರೆ ಇದೀಗ ಗುರುತಿಸಿರುವ ಕಂಬಗಳಿಗೆ ಬಲ್ಬ್ ಬದಲಿಸುವ ಬದಲು ಇಡೀ ಸೆಟ್‌ ಹಾಕಬೇಕಾಗಿದೆ. ಇದಕ್ಕಾಗಿ ಟೆಂಡರ್‌ ಕರೆದು ಸುಮಾರು 2000 ಕಂಬಗಳಿಗೆ ದೀಪ ಅಳವಡಿಸುವ ಕೆಲಸ ಆಗಲಿದೆ.
-ಡಾ| ಸುರೇಶ ಇಟ್ನಾಳ,
ಆಯುಕ್ತ, ಮಹಾನಗರ ಪಾಲಿಕೆ

ಬೀದಿದೀಪಗಳುಹಿಂದಿಗಿಂತ ಉತ್ತಮವಾಗಿ ನಿರ್ವಹಣೆಯಾಗುತ್ತಿದೆ. 24 ಗಂಟೆಯಲ್ಲಿ ದೂರುಗಳ ಪರಿಹಾರಕ್ಕೆ ಒತ್ತು ನೀಡಲಾಗಿದೆ. ತಪ್ಪಿದರೆ ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗುತ್ತಿದೆ. ಇದೀಗ ದುರಸ್ತಿ ಸಾಧ್ಯವಾಗದ ದೀಪಗಳನ್ನು ಬದಲಿಸಿದರೆ ದೂರುಗಳ ಪ್ರಮಾಣ ಕಡಿಮೆಯಾಗಲಿದೆ.
-ಎಸ್‌.ಎನ್‌.ಗಣಾಚಾರಿ,
ಇಇ, ವಿದ್ಯುತ್‌ ವಿಭಾಗ

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next