Advertisement

ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ

12:05 PM Oct 27, 2021 | Team Udayavani |

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಕಾಪು ಪೇಟೆಯ ಎಲ್ಲಾ ಬೀದಿ ದೀಪಗಳನ್ನು ಪುರಸಭೆಗೆ ಯಾವುದೇ ರೀತಿಯ ಖರ್ಚಿಲ್ಲದೇ ಇ ಸ್ಮಾರ್ಟ್ ಎನರ್ಜಿ ಸೊಲ್ಯುಷನ್ಸ್ ಸಂಸ್ಥೆಯ ಸಹಯೋಗದಲ್ಲಿ ಸ್ಮಾರ್ಟ್ ಎಲ್‌ಇಡಿ ಲೈಟ್‌ಗಳನ್ನಾಗಿ ಪರಿವರ್ತಿಸುವ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಪ್ರಾಯೋಗಿಕ ಕಾರ್ಯಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಮಂಗಳವಾರ ಚಾಲನೆ ನೀಡಿದರು.

Advertisement

ಬಳಿಕ ಮಾತನಾಡಿದ ಅವರು ವಿದ್ಯುತ್ ಬಿಲ್‌ಗಳನ್ನು ಪಾವತಿಸುವುದಕ್ಕೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೆಚ್ಚಿನ ಹೊರೆಯಾಗುತ್ತಿದ್ದು ಇದಕ್ಕೆ ಪರಿಹಾರವಾಗಿ ಕೇಂದ್ರ ಸರಕಾರದ ಸಬ್ಸಿಡಿಯೊಂದಿಗೆ ಇ ಸ್ಮಾರ್ಟ್ ಎನರ್ಜಿ ಸೊಲ್ಯುಷನ್ಸ್ ಸಂಸ್ಥೆಯ ಮುಖ್ಯಸ್ಥ ಎರ್ಮಾಳು ಹರೀಶ್ ಶೆಟ್ಟಿಯವರ ಸಹಯೋಗದೊಂದಿಗೆ ಪುರಸಭೆ ವ್ಯಾಪ್ತಿಯ ಬೀದಿ ದೀಪಗಳಿಗೆ ಖರ್ಚಿಲ್ಲದೇ ಎಲ್‌ಇಡಿ ಬಲ್ಬ್‌ಗಳನ್ನು ಜೋಡಿಸುವ ಕಾರ್ಯಕ್ಕೆ ಕಾಪುವಿನಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಚಾಲನೆ ನೀಡಲಾಗುತ್ತಿದೆ. ಪ್ರಥಮ ಹಂತದಲ್ಲಿ ಕಾಪು ಪೇಟೆಯಲ್ಲಿ 100 ಬಲ್ಬ್‌ಗಳನ್ನು ಅಳವಡಿಸಲಾಗುತ್ತಿದ್ದು ಮುಂದೆ ಪುರಸಭೆಯ ಎಲ್ಲಾ ವಾರ್ಡ್‌ಗಳಲ್ಲಿ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಈ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.

ಕಾಪು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಅವರು ಪ್ರಸ್ತಾವನೆಗೈದು, ಕಾಪು ಪೇಟೆಯಲ್ಲಿ ಬೀದಿ ದೀಪಗಳನ್ನು ಎಲ್‌ಇಡಿ  ಲೈಟ್‌ಗಳನ್ನಾಗಿ ಪರಿವರ್ತಿಸುವ ಮೂಲಕ ಪುರಸಭೆ ಮಾದರಿ ಹೆಜ್ಜೆ ಇರಿಸಿದೆ. ಸರಕಾರದ ನಿಯಮಗಳಿಂದಾಗಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಹೊಸ ಬೀದಿ ದೀಪಗಳ ಅಳವಡಿಕೆ ಕೆಲಸ ನಡೆಸದೇ ಕೇವಲ ಬೀದಿ ದೀಪಗಳ ರಿಪೇರಿ ಮತ್ತು ನಿರ್ವಹಣೆಯನ್ನಷ್ಟೇ ಮಾಡಲಾಗುತ್ತಿತ್ತು. ಈ ಬಗ್ಗೆ ಪುರಸಭೆಯ ಕೌನ್ಸಿಲ್ ಸಭೆಗಳಲ್ಲೂ ಸಾಕಷ್ಟು ಚರ್ಚೆಗಳು ನಡೆಯುವಂತಾಗಿತ್ತು. ಶಾಸಕ ಲಾಲಾಜಿ ಆರ್. ಮೆಂಡನ್ ಅವರ ವಿಶೇಷ ಮುತುವರ್ಜಿಯಿಂದಾಗಿ ಕಾಪು ಪೇಟೆಯ 100 ರಷ್ಟು ಬೀದಿ ದೀಪಗಳು ಪುರಸಭೆಗೆ ಯಾವುದೇ ರೀತಿಯಲ್ಲಿ ಹೊರೆ ಇಲ್ಲದಂತೆ ಇ ಸ್ಮಾರ್ಟ್ ಎಲ್‌ಇಡಿ ಲೈಟ್‌ಗಳಾಗಿ ಪರಿವರ್ತನೆಗೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.

ಇ ಸ್ಮಾರ್ಟ್ ಎನರ್ಜಿ ಸೊಲ್ಯೂಷನ್ಸ್‌ನ ಮುಖ್ಯಸ್ಥ ಎರ್ಮಾಳು ಹರೀಶ್ ಶೆಟ್ಟಿ ಮಾತನಾಡಿ, ಇದು ಕೇಂದ್ರ ಸರಕಾರದ ಸಹಭಾಗಿತ್ವದ ಯೋಜನೆಯಾಗಿದ್ದು ಎಲ್‌ಇಡಿ ಬಲ್ಬ್‌ಗಳ ಅಳವಡಿಕೆಯಿಂದ ಶೇ. 80ರಷ್ಟು ವಿದ್ಯುತ್ ಉಳಿತಾಯವಾಗಲಿದೆ. ಕಾಪು ಪುರಸಭೆ ವ್ಯಾಪ್ತಿಯ ಪೇಟೆಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ 14 ಲಕ್ಷ ರೂಪಾಯಿ ವೆಚ್ಚದಲ್ಲಿ 100 ನೂರು ಎಲ್.ಇ.ಡಿ ಲೈಟ್‌ಗಳನ್ನು ಅಳವಡಿಸಲಾಗುತ್ತಿದೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲೂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಮುಂದೆ ಜಿಲ್ಲೆಯಾದ್ಯಂತ ಈ ಯೋಜನೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.

ಇದನ್ನೂ ಓದಿ : ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್

Advertisement

ವಿದ್ಯುತ್ ಸಬ್‌ಸ್ಟೇಷನ್, ಸರ್ವೀಸ್ ಸ್ಟೇಷನ್‌ಗೆ ಬೇಡಿಕೆ : ಸಮಾಜ ಸೇವಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ವಿದ್ಯುತ್‌ನ ಮಿತ ಬಳಕೆಯ ಬಗ್ಗೆ ಸರಕಾರ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸುತ್ತಿದ್ದು ಎಲ್‌ಇಡಿ ಲೈಟ್‌ಗಳನ್ನು ಅಳವಡಿಸಿ, ವಿದ್ಯುತ್ ಉಳಿತಾಯ ಮಾಡುವ ಎರ್ಮಾಳು ಹರೀಶ್ ಶೆಟ್ಟಿಯವರ ಪ್ರಯತ್ನ ಇದಕ್ಕೆ ಪೂರಕವಾಗಿದೆ. ಕಾಪು ತಾಲೂಕು ಬೆಳೆಯುತ್ತಿರುವ ಪ್ರದೇಶವಾಗಿದ್ದು ಇಲ್ಲಿಗೆ ಪ್ರತ್ಯೇಕ ವಿದ್ಯುತ್ ಸಬ್‌ಸ್ಟೇಷನ್, ವಿದ್ಯುತ್ ಕುರಿತಾದ ಸಂಪರ್ಕ ಮತ್ತು ಸಂವಹನಕ್ಕಾಗಿ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸರ್ವೀಸ್ ಸ್ಟೇಷನ್ ನಿರ್ಮಾಣಗೊಳ್ಳಬೇಕಿದ್ದು, ಈ ಬಗ್ಗೆಯೂ ಪ್ರಯತ್ನಗಳು ನಡೆಯಬೇಕಿವೆ ಎಂದರು.

ಕಾಪು ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭೆ ಮಾಜಿ ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ರಮೇಶ್ ಹೆಗ್ಡೆ ಕಲ್ಯ, ಅಬ್ದುಲ್ ಹಮೀದ್ ಮೂಳೂರು, ಶಾಂಭವಿ ಕುಲಾಲ್, ನಾಮ ನಿರ್ದೇಶಿತ ಸದಸ್ಯರಾದ ನವೀನ್ ಅಮೀನ್, ಪ್ರದೀಪ್ ಕುಮಾರ್, ನಿವೃತ್ತ ಕಮ್ ಅಽಕಾರಿ ಎರ್ಮಾಳು ರೋಹಿತ್ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಕಾಪು, ಗೋವಿಂದ ಶೆಟ್ಟಿ, ಕಾಪು ತಾ.ಪಂ. ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಉಡುಪಿ ಜಿ.ಪಂ. ಮಾಜಿ ಸದಸ್ಯರಾದ ಶಿಲ್ಪಾ ಜಿ. ಸುವರ್ಣ, ರೇಷ್ಮಾ ಯು. ಶೆಟ್ಟಿ, ಕಾಪು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮನೋಹರ್ ಶೆಟ್ಟಿ ಕಾಪು, ಇಲೆಕ್ಟ್ರಿಕಲ್ ಉದ್ಯಮಿ ಶ್ರೀಪತಿ ಭಟ್ ಉಚ್ಚಿಲ, ಗಣ್ಯರಾದ ಉದಯ್ ಕುಮಾರ್ ಶೆಟ್ಟಿ ಇನ್ನಾ, ಶಿವಪ್ರಸಾದ್ ಶೆಟ್ಟಿ ಎರ್ಮಾಳು, ಕೆ. ಲೀಲಾಧರ ಶೆಟ್ಟಿ, ನಾಗರಾಜ ಭಟ್ ಪಾಂಗಾಳ, ಕಿಶೋರ್ ಶೆಟ್ಟಿ ಎರ್ಮಾಳು, ಗೋಪಾಲ ಪೂಜಾರಿ, ಸುರೇಖಾ ಶೈಲೇಶ್, ಶೈಲೇಶ್ ಕುಮಾರ್, ಪುರಸಭೆಯ ಸಹಾಯಕ ಇಂಜಿನಿಯರ್ ಪ್ರತಿಮಾ, ಕಾಪು ಎಸ್ಸೈ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next