ಬೆಂಗಳೂರು: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರದ ಕೊರತೆ ಎದುರಿಸುತ್ತಿರುವ 44 ಉಪನ್ಯಾಸಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಲಾಖೆಯಿಂದ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ವರ್ಗಾವಣೆಯಾಗಲಿರುವ ಉಪನ್ಯಾಸಕರ ಹೆಸರುಗಳನ್ನು ಪ್ರಕಟಿಸಲಾಗಿದೆ. ಇಲಾಖೆಯ ಇಎಂಐಎಸ್ ತಂತ್ರಾಂಶದಲ್ಲಿ ಲಭ್ಯವಿರುವ ಅಭ್ಯರ್ಥಿಗಳ ಸೇವಾ ವಿವರಗಳನ್ನು ಪರಿಗಣಿಸಿ, ಕೌನ್ಸೆಲಿಂಗ್ ಮೂಲಕ ವರ್ಗಾಯಿಸಲಾಗುವುದು. ಈ ಮಾಹಿತಿಯಲ್ಲಿ ಬದಲಾವಣೆ / ಆಕ್ಷೇಪಣೆ ಇದ್ದಲ್ಲಿ ಏ.6ರ ಒಳಗೆ ಇಲಾಖೆಯ ಇ-ಮೇಲ್ dce.postshifting2022@gmail.com ಗೆ ಸಲ್ಲಿಸಬಹುದು ಎಂದಿದ್ದಾರೆ.
ಇದನ್ನು ಆಧರಿಸಿ, ಏ.7ರಂದು ಹುದ್ದೆ ಸ್ಥಳಾಂತರ ಮತ್ತು ಹೆಚ್ಚುವರಿ ಕಾರ್ಯಭಾರ ಲಭ್ಯವಿರುವ ಕಾಲೇಜುಗಳ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. ಮರುದಿನ, ಅಂದರೆ ಏ.8ರಂದು ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಜಾತ್ರೆಯಲ್ಲಿ ವೃದ್ಧೆಯ ಚಿನ್ನದ ಸರ ಕಳ್ಳತನ : ಪೊಲೀಸರಿಂದ ಕಾರ್ಯಾಚರಣೆ
ನಿಯಮಗಳ ಪ್ರಕಾರ, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ ಮತ್ತು ಭಾಷಾ ವಿಷಯಗಳ ಬೋಧಕರಿಗೆ ವಾರಕ್ಕೆ 16 ಗಂಟೆ ಮತ್ತು ಪ್ರಾಯೋಗಿಕ ತರಗತಿಗಳಿರುವ ವಿಷಯಗಳ ಬೋಧಕರಿಗೆ 20 ಗಂಟೆಗಳ ಕಾರ್ಯಭಾರ ಇರಬೇಕು ಎಂದು ಅವರು ವಿವರಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಟ್ಟಿಗೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಕಾಲೇಜಿರುವ ವಲಯದೊಳಗೇ ವರ್ಗಾವಣೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದ್ದಾರೆ.