Advertisement

ಉಪನ್ಯಾಸಕರಿಂದ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ

02:28 PM Feb 11, 2020 | Suhan S |

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ವೇತನ ತಾರತಮ್ಯ, ಬಡ್ತಿ ಮುಂತಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಲವಾರು ಬಾರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರಥಮ ಪಿಯುಸಿ ಪರೀಕ್ಷಾ  ಕಾರ್ಯ ಮಾಡುತ್ತಿದ್ದೇವೆ ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್‌. ಲಕ್ಷ್ಮಣ್‌ ತಿಳಿಸಿದರು.

Advertisement

ಸೋಮವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿ ಪ್ರಥಮ ಪಿಯುಸಿ ಪ್ರಶ್ನೆಪತ್ರಿಕೆ ಸ್ವೀಕಾರ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯದ ಹಿನ್ನೆಲೆಯಲ್ಲಿ ರಾಜ್ಯದ ಉಪನ್ಯಾಸಕರು ಪ್ರತಿಭಟನೆಯನ್ನು ಸೀಮಿತಗೊಳಿಸಿದ್ದಾರೆ. ಸರ್ಕಾರ ಕೂಡಲೇ ಉಪನ್ಯಾಸಕರ ಎಲ್ಲಾ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕಿದೆ. ಪರೀಕ್ಷಾ ಸಂದರ್ಭ ಹಿನ್ನೆಲೆಯಲ್ಲಿ ಪರೀಕ್ಷೆಗೆ ನಿಯುಕ್ತಿಗೊಳಿಸಿದ ಎಲ್ಲಾ ಉಪನ್ಯಾಸಕರು ಕಪ್ಪುಪಟ್ಟಿ ಧರಿಸಿ ಪರೀಕ್ಷಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರು.

ಮಾರ್ಚ್‌ ಮಾಹೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಲ್ಲಿ ಮೌಲ್ಯಮಾಪನ ಕಾರ್ಯವನ್ನು ಸಾರಾಸಗಟಾಗಿ ಬಹಿಷ್ಕರಿಸುವ ಕುರಿತು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎನ್‌. ವಸಂತಕುಮಾರ್‌, ಉಪನ್ಯಾಸಕರಾದ ಎಂ. ರವೀಶ್‌, ಭಾರತಿ, ಕರಿಯಪ್ಪ, ಕೆ.ವಿ. ವೆಂಕಟೇಶಮೂರ್ತಿ, ಅಂಜಿನಪ್ಪ, ನಾಗರಾಜ್‌, ಇರ್ಫಾನ್‌, ಮಲ್ಲಿಕಾರ್ಜುನ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next