Advertisement

ಐಟಿಐ ಕಾಲೇಜಿಗೆ ಬರುತ್ತಿಲ್ಲ ಉಪನ್ಯಾಸಕರು

01:09 PM Oct 14, 2018 | |

ಶಹಾಬಾದ: ಇಲ್ಲೊಂದು ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರವಿದೆ. ನಿತ್ಯ ವಿದ್ಯಾರ್ಥಿಗಳು ಬರುತ್ತಾರೆ. ಆದರೆ ಇವರಿಗೆ ಪಾಠ ಹೇಳ್ಳೋರು ಇಲ್ಲ, ಕಲಿಯಲು ಸಂಬಂಧಿಸಿದ ಸಾಮಗ್ರಿಗಳು ಇಲ್ಲಿಲ್ಲ, ಕುಡಿಯಲು ನೀರು, ಶೌಚಾಲಯ ವ್ಯವಸ್ಥೆ ಇಲ್ಲ, ಸ್ವತ್ಛತೆಯಂತೂ ಇಲ್ಲವೇ ಇಲ್ಲ.

Advertisement

ಕಳೆದ ಮೂರು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಈ ತರಬೇತಿ ಕೇಂದ್ರದಲ್ಲಿ ಫಿಟ್ಟರ್‌ ಹಾಗೂ ಇಲೆಕ್ಟ್ರಿಶಿಯನ್‌ ವಿಭಾಗ ನಡೆಯುತ್ತವೆ. ಇಲೆಕ್ಟ್ರಿಶಿಯನ್‌ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ 11, ದ್ವಿತೀಯ ವರ್ಷದಲ್ಲಿ 21 ವಿದ್ಯಾರ್ಥಿಗಳಿದ್ದಾರೆ. ಫಿಟ್ಟರ್‌ ವಿಭಾಗದಲ್ಲಿ ಪ್ರಥಮ ವರ್ಷದಲ್ಲಿ 21, ದ್ವಿತೀಯ ವರ್ಷದಲ್ಲಿ 11 ವಿದ್ಯಾರ್ಥಿಗಳಿದ್ದಾರೆ.

ಆದರೆ ಜವಾಬ್ದಾರಿ ಸ್ಥಾನದಲ್ಲಿರುವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಮಾತ್ರ ತಿಂಗಳಿಗೆ ಎರಡೂಮೂರು ಬಾರಿ ಮಾತ್ರ ಬಂದು ಹೋಗುತ್ತಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗುತ್ತಿದೆ ಎಂದು ವಿದ್ಯಾರ್ಥಿಗಳ ಪಾಲಕರು ದೂರಿದ್ದಾರೆ.

ಪ್ರಾಂಶುಪಾಲ ಶಿವಾಜಿ, ಉಪನ್ಯಾಸಕ ಮೌಲಾನಾ ಹಾಗೂ ಸಂಗೀತಾ ಕಾಯಂ ಹುದ್ದೆಯಲ್ಲಿ, ಶಿವಪುತ್ರ ಪಾಟೀಲ, ಅಭಿಷೇಕ, ಪಲ್ಲವಿ ಎನ್ನುವರು ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಾಂಶುಪಾಲ ಶಿವಾಜಿ ತಿಂಗಳಿಗೊಮ್ಮೆ ಬಂದು ಹೋಗುತ್ತಾರೆ.ಇಲ್ಲಿಯವರೆಗೆ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಯಾವ ಸಾಮಗ್ರಿಗಳನ್ನು ನೀಡಿಲ್ಲ. ಬಂದಂತಹ ಸಾಮಗ್ರಿಗಳನ್ನು ಸಂಗ್ರಹ ಕೊಠಡಿಯಲ್ಲೇ ಇಟ್ಟಿದ್ದಾರೆಯೇ ಹೊರತು ಹೊರಗೆ ತೆಗೆಯುತ್ತಿಲ್ಲ.

ಕಲಿಕೆಗಾಗಿ ಬಂದಿರುವ ಯಂತ್ರಗಳನ್ನು ಎರಡು ವರ್ಷವಾದರೂ ಹಿಂದಿನ ವಿದ್ಯಾರ್ಥಿಗಳಿಗೂ ಬಳಕೆ ಮಾಡಲು ಬಿಟ್ಟಿಲ್ಲ. ನಾನು ಕಾಲೇಜಿಗೆ ಸೇರಿ ಸುಮಾರು ನಾಲ್ಕು ತಿಂಗಳಾಗುತ್ತಾ ಬಂದಿದೆ. ಒಮ್ಮೆ ಮಾತ್ರ ಪ್ರಾಂಶುಪಾಲರನ್ನು ನೋಡಿದ್ದೇನೆ ಎನ್ನುತ್ತಾನೆ ಫಿಟ್ಟರ್‌ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಸಾಗರ. ಉಪನ್ಯಾಸಕ ಮೌಲಾನಾ ಎನ್ನುವರು ಯಾದಗಿರಿಯಿಂದ ವರ್ಗಾವಣೆಯಾಗಿ ಒಮ್ಮೆ ಮಾತ್ರ ಬಂದಿದ್ದು, ಮತ್ತೆ ಈ ಕಡೆ ತಲೆಹಾಕಿಲ್ಲ. ಉಪನ್ಯಾಸಕಿ ಸಂಗೀತಾ ಕಾಲೇಜಿಗೆ ಬರೋದೆ ಅಪರೂಪ. ಬಂದರೂ ಬೇಗನೆ ಹೋಗುತ್ತಾರೆ.

Advertisement

ಅವರ ಸಂಬಂಧಿಗಳಲ್ಲೊಬ್ಬರೂ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳಿದ್ದಾರೆ. ಆದ್ದರಿಂದ ಅವರ ವಿರುದ್ಧಯಾರೂ ಕ್ರಮ ಕೈಗೊಳ್ಳೊದಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಸರಕಾರದ ವತಿಯಿಂದ ಕಲಿಕೆ ಸಾಮಾನುಗಳು ಉಚಿತವಾಗಿ ಬಂದರೂ ಇಲ್ಲಿಯವರೆಗೆ ನೀಡಿಲ್ಲ.

ಕುಡಿಯುವ ನೀರನ್ನು ದೂರದಿಂದ ಹೊತ್ತುಕೊಂಡು ತರಬೇಕು. ಕಸವನ್ನು ನಾವೇ ತೆಗೆಯಬೇಕಾದ ಪರಿಸ್ಥಿತಿ ನಮಗೆ ಬಂದೊದಗಿದೆ ಎಂದು ವಿದ್ಯಾರ್ಥಿಗಳಾದ ಮ. ಶೋಯೆಲ್‌, ಮಲ್ಲೇಶಿ ಮಹಾದೇವ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ತಾತ್ಕಾಲಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಂದ ಈ ತರಬೇತಿ ಕೇಂದ್ರ ಉಳಿದಿದೆ. ಕೂಡಲೇ ಜಂಟಿ ನಿರ್ದೇಶಕರು ಗಮನಹರಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುತ್ತಿರುವ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವಿರುದ್ಧ ಕ್ರಮ ತೆಗೆದುಕೊಂಡು, ಕಾಲೇಜಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಮನವಿ ಮಾಡಿದ್ದಾರೆ.

ತರಬೇತಿ ಕೇಂದ್ರಕ್ಕೆ ಪ್ರಾಂಶುಪಾಲರು, ಉಪನ್ಯಾಸಕರು ಬರದೇ ಇದ್ದರೆ ವಿದ್ಯಾರ್ಥಿಗಳ ಭವಿಷ್ಯ ಹೇಗೆ? ಕೇಂದ್ರದಲ್ಲಿ ಹೋಗಿ ನೋಡಿದರೆ ಇಲೆಕ್ಟ್ರಿಶೀಯನ್‌ ವಿಭಾಗದ ವಿದ್ಯಾರ್ಥಿಗಳಿಗೆ ಯಾವುದೇ ಕಲಿಕಾ ಸಾಮಗ್ರಿಗಳಿಲ್ಲ. ಇದರಿಂದ
ವಿದ್ಯಾರ್ಥಿಗಳು ಕೇವಲ ಕಾಲೇಜಿಗೆ ಬಂದು ಮನೆಗೆ ಹೋಗುವಂತಾಗಿದೆ. ಕೂಡಲೇ ಜಂಟಿ ನಿರ್ದೇಶಕರು ಕ್ರಮ ಕೈಗೊಳ್ಳಬೇಕು. 
 ನಾಗಣ್ಣ ರಾಂಪೂರೆ, ಉಪಾಧ್ಯಕ್ಷರು, ಬಿಜೆಪಿ ಜಿಲ್ಲಾ ಯುವ ಮೋರ್ಚಾ

„ಮಲ್ಲಿನಾಥ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next