ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದಲ್ಲಿರುವ ಖಾಸಗಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಕಾಶಿನಾಥ ಶರಭಯ್ಯ ಪುರಾಣಿಕಮಠ (30) ಅವರ ಶವ ರಸ್ತೆ ಪಕ್ಕದ ಹೊಲವೊಂದರಲ್ಲಿ ದೊರಕಿದ್ದು ಇದೊಂದು ವ್ಯವಸ್ಥಿತ, ಪೂರ್ವ ನಿಯೋಜಿತ ಕೊಲೆ ಎನ್ನುವ ಶಂಕೆ ವ್ಯಕ್ತವಾಗಿದೆ.
ನಾಗರಬೆಟ್ಟದಿಂದ ಅಡವಿ ಸೋಮನಾಳ ಮಾರ್ಗವಾಗಿ ತಾಳಿಕೋಟೆಗೆ ಹೋಗುವ ಮುಖ್ಯ ರಸ್ತೆ ಪಕ್ಕದ ಮಲಗಲದಿನ್ನಿ ಕ್ರಾಸ್ ಸಮೀಪ ಈ ದುರ್ಘಟನೆ ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಉಪನ್ಯಾಸಕನ ಮೃತದೇಹ ಒಂದು ಕಡೆ, ಬೈಕ್ ಮತ್ತೊಂದು ಕಡೆ ಬಿದ್ದಿದ್ದು ಮೈಮೇಲೆ ಯಾವುದೇ ಗಂಭೀರ ಗಾಯಗಳು ಇಲ್ಲದಿರುವುದು, ಅಪಘಾತದ ಕುರುಹುಗಳು ಕಂಡು ಬರದಿರುವುದು ವ್ಯವಸ್ಥಿತ ಕೊಲೆ ಶಂಕೆಗೆ ಪುಷ್ಠಿ ನೀಡಿದೆ.
ನಾಗರಬೆಟ್ಟದ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಇವರು ನಿತ್ಯ ಬೆಳಿಗ್ಗೆ ತಾಳಿಕೋಟೆಯಿಂದ ಕಾಲೇಜಿಗೆ, ರಾತ್ರಿ ಕಾಲೇಜಿನಿಂದ ತಾಳಿಕೋಟಿ ತಮ್ಮ ಬೈಕನಲ್ಲಿ ಸಂಚರಿಸುತ್ತಿದ್ದರು. ಶುಕ್ರವಾರ ರಾತ್ರಿ 8.20 ಕ್ಕೆ ಕಾಲೇಜು ಮುಗಿಸಿಕೊಂಡು ಎಂದಿನಂತೆ ಮನೆಗೆ ಹೊರಟಿದ್ದರು.
ಮನೆಗೆ ಬಾರದೇ ಇದ್ದುದು, ಪಾಲಕರ ಕಳವಳಕ್ಕೆ ಕಾರಣವಾಗಿ, ಕಾಲೇಜಿನವರನ್ನು ವಿಚಾರಿಸಿದಾಗ ಅವರು ಊರಿಗೆ ತೆರಳಿದ್ದಾರೆ ಎಂದು ಕಾಲೇಜಿನವರು ಪಾಲಕರಿಗೆ ತಿಳಿಸಿದ್ದಾರೆ. ಗಾಬರಿಗೊಂಡ ಪಾಲಕರು ಎಲ್ಲೆಡೆ ವಿಚಾರಿಸಿದರೂ, ಹುಡುಕಾಡಿದರೂ ಇವರ ಪತ್ತೆ ಆಗಿರಲಿಲ್ಲ. ಬೆಳಗ್ಗೆ ರಸ್ತೆಯಲ್ಲಿ ಸಂಚರಿಸುವವರು ನೀಡಿದ ಮಾಹಿತಿಯಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಆಗಮಿಸಿದ ಪಾಲಕರು ಇದೊಂದು ಅನುಮಾನಾಸ್ಪದ ಸಾವು, ವ್ಯವಸ್ಥಿತವಾಗಿ ಸಂಚು ನಡೆಸಿ ಕೊಲೆ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಾಜಪೇಯಿ ಜನ್ಮದಿನ: ಪ್ರಧಾನಿ ಮೋದಿ ಅವರಿಂದ ಪುಷ್ಪಾಂಜಲಿ
ಕೇವಲ 3-4 ತಿಂಗಳ ಹಿಂದೆ ಯುವತಿಯೊಬ್ಬಳೊಂದಿಗೆ ಕಾಶಿನಾಥಗೆ ನಿಶ್ಚಿತಾರ್ಥ ಆಗಿತ್ತು. 3-4 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡ ಯುವತಿಯ ಕಡೆಯವರೆಂದು ಹೇಳಿಕೊಂಡು ಕಾಲೇಜಿಗೆ ಬಂದಿದ್ದ ಒಂದಿಬ್ಬರು ಅಪರಿಚಿತರು ಯುವತಿಯ ಸಹವಾಸಕ್ಕೆ ಬರದಂತೆ ಎಚ್ಚರಿಕೆ ನೀಡಿ ಹೋಗಿದ್ದರು ಎನ್ನುವ ಮಾತು ಕಾಶಿನಾಥನ ಸ್ನೇಹಿತರಿಂದ ಕೇಳಿ ಬರತೊಡಗಿರುವುದು ಕೊಲೆ ಶಂಕೆಗೆ ಪುಷ್ಟಿ ನೀಡುವಂತಾಗಿದೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.