ಧಾರವಾಡ: ನೆಚ್ಚಿನ ಟೀಚರ್ ವರ್ಗಾವಣೆ ಆಗಿದ್ದಕ್ಕೆ ಶಾಲಾ ಮಕ್ಕಳು ಕಣ್ಣೀರು ಹಾಕಿದ್ದಲ್ಲದೇ ಮಧ್ಯಾಹ್ನದ ಊಟ ತ್ಯಜಿಸಿದ ಅಪರೂಪದ ಘಟನೆ ತಾಲೂಕಿನ ನರೇಂದ್ರ ಗ್ರಾಮದ ಮಂಗಳವಾರ ನಡೆದಿದೆ.
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1998ರಿಂದ ರೇಣುಕಾ ಜಾಧವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಈಗ ಹಿರಿತನದ ಮೇಲೆ ಬಡ್ತಿ ಹೊಂದಿದ್ದಾರೆ. ಹೀಗಾಗಿ ಅವರು ಕೌನ್ಸೆಲಿಂಗ್‌ದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಹೋಗುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಶಾಲಾ ಮಕ್ಕಳು ಗೋಳಿಟ್ಟಿದ್ದಾರೆ. ನಮ್ಮನ್ನು ಬಿಟ್ಟು ಹೋಗದಂತೆ ಕಣ್ಣೀರು ಹಾಕುತ್ತಾ ಟೀಚರ್‌ಗೆ ಮನವಿ ಮಾಡಿದ ಮಕ್ಕಳು, ಶಾಲೆಗೆ ಬಂದ ಬಿಸಿಯೂಟವನ್ನೂ ಮಾಡಲಿಲ್ಲ.
ವಿದ್ಯಾರ್ಥಿಗಳ ಪ್ರೀತಿ ಕಂಡು ನೋವಿನಿಂದಲೇ ವಿದಾಯ ಹೇಳಿದ ರೇಣುಕಾ ಅವರ ಕಣ್ಣುಗಳೂ ಒದ್ದೆಯಾಗಿದ್ದು, ಮಕ್ಕಳ ನೋವು ಕಂಡ ಪೋಷಕರು ಹಾಗೂ ಗ್ರಾಮಸ್ಥರ ಕಣ್ಣಾವಲಿಗಳೂ ತುಂಬಿ ಬಂದಿದ್ದವು. ಮಕ್ಕಳ ವಿರೋಧದ ಮಧ್ಯೆಯೇ ಶಾಲಾ ಮೇಲುಸ್ತುವಾರಿ ಸಮಿತಿ ರೇಣುಕಾ ಅವರನ್ನು ಬೀಳ್ಕೊಟ್ಟಿತು.
ವರ್ಗಾವಣೆ ರದ್ದು: ಇದಾದ ಬಳಿಕ ಕೌನ್ಸೆಲಿಂಗ್‌ಗಾಗಿ ಧಾರವಾಡಕ್ಕೆ ಬಂದಿದ್ದ ರೇಣುಕಾ ಅವರಿಗೆ ಕೋಟೂರು ಹಾಗೂ ಲೋಕೂರು ಗ್ರಾಮಗಳ ಪೈಕಿ ಒಂದು ಗ್ರಾಮದ ಶಾಲೆ ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಇಷ್ಟರೊಳಗೆ ಡಿಡಿಪಿಐ ಅವರನ್ನು ಭೇಟಿ ಮಾಡಿದ ನರೇಂದ್ರ ಗ್ರಾಮಸ್ಥರು, ರೇಣುಕಾ ಅವರ ವರ್ಗಾವಣೆ ರದ್ದುಗೊಳಿಸಿ ಅಲ್ಲಿಯೇ ಉಳಿಸುವಂತೆ ಮನವಿ ಮಾಡಿದರು. ಕೊನೆಗೂ ಮಕ್ಕಳ ತೊಳಲಾಟ, ಗ್ರಾಮಸ್ಥರ ಮನವಿ ಪುರಸ್ಕರಿಸಿ ರೇಣುಕಾ ಅವರ ವರ್ಗಾವಣೆ ರದ್ದು ಮಾಡಲಾಗಿದೆ.