Advertisement

ಸೋಂಕಿನಿಂದ ಪಾರಾಗಲು ಊರನ್ನೇ ತೊರೆದರು!

07:29 AM Jul 18, 2020 | mahesh |

ಗದಗ: ಕೋವಿಡ್ ಸೋಂಕಿನಿಂದ ಭೀತರಾಗಿ ತಾಲೂಕಿನ ಶೀತಾಲಹರಿ ಗ್ರಾಮಸ್ಥರು ಊರನ್ನೇ ತೊರೆದು ಜಮೀನುಗಳಲ್ಲಿ ಟೆಂಟ್‌ ಕಟ್ಟಿ ವಾಸ್ತವ್ಯ ಹೂಡಿದ್ದಾರೆ.
ತಾಲೂಕಿನ ಶೀತಾಲಹರಿ ಗ್ರಾಮದಲ್ಲಿ ಜು. 8ರಂದು 52 ವರ್ಷ ಪ್ರಾಯದ ವ್ಯಕ್ತಿಯೊಬ್ಬರಿಗೆ ಕೆಮ್ಮು, ನೆಗಡಿ ಕಂಡು ಬಂದಿದ್ದರಿಂದ ಸ್ವಯಂಪ್ರೇರಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಜು. 9ರಂದು ತೀವ್ರ ಅನಾರೋಗ್ಯ ಆದಾಗ ಗ್ರಾಮಸ್ಥರು ಪ್ರಾಥಮಿಕ ಆರೈಕೆ ನೀಡಿದ್ದರು. ಬಳಿಕ ರೋಗಿ ಕೊನೆಯುಸಿರೆಳೆದಿದ್ದರಿಂದ ಅಂತ್ಯಸಂಸ್ಕಾರಕ್ಕೂ ಸಿದ್ಧತೆ ನಡೆಸಿದ್ದರು. ಈ ವೇಳೆಗೆ ಮೃತರಿಗೆ ಕೋವಿಡ್‌- 19 ಸೋಂಕು ದೃಢಪಟ್ಟಿತ್ತು.

Advertisement

ಅನಂತರ ಜು. 15ರಂದು 11 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 48 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿದೆ. ಅವರಲ್ಲಿ ಮತ್ತಿಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಸೋಂಕು ತಡೆಯುವ ಉದ್ದೇಶದೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಳೆದ ಮೂರು ದಿನಗಳಿಂದ ಸುಮಾರು 30ಕ್ಕೂ ಹೆಚ್ಚು ಕುಟುಂಬಗಳು ಹೊಲದಲ್ಲಿ ಟೆಂಟ್‌, ತಾತ್ಕಾಲಿಕ ಟಿನ್‌ ಶೆಡ್‌ ಹಾಕಿಕೊಂಡಿವೆ. ದಿನ ಕಳೆದಂತೆ ಜಮೀನುಗಳಲ್ಲಿ ವಾಸಕ್ಕೆ ಒಲವು ತೋರುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಬೇರೆ ಊರುಗಳಲ್ಲಿರುವ ಸಂಬಂ ಧಿಕರ ಮನೆ ಸೇರುತ್ತಿದ್ದಾರೆ. ಗ್ರಾಮದ ವಿವಿಧೆಡೆಗಳ 50ಕ್ಕೂ ಹೆಚ್ಚು ಮನೆಗಳಿಗೆ ಬೀಗ ಹಾಕಲಾಗಿದೆ.

ಪ್ಲೇಗ್‌ ನೆನಪಿಸಿದ ಕೋವಿಡ್ ಸೋಂಕು
ಪ್ಲೇಗ್‌ನಿಂದ ಪಾರಾಗಲು ಜನ ಊರು ತೊರೆದು ಕಾಡು-ಮೇಡುಗಳಲ್ಲಿ ಬಿಡಾರ ಹೂಡುತ್ತಿದ್ದರು. ಶೀತಾಲಹರಿ ಗ್ರಾಮಸ್ಥರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈಗಾಗಲೇ ಹತ್ತಾರು ಕುಟುಂಬಸ್ಥರು ಮಕ್ಕಳು, ಜಾನುವಾರುಗಳೊಂದಿಗೆ ಜಮೀನುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿದ್ಯುತ್‌, ಕುಡಿಯುವ ನೀರಿನ ಸೌಲಭ್ಯವಿಲ್ಲದಿದ್ದರೂ, ಜೀವ ಉಳಿದರೆ ಸಾಕಪ್ಪಾ ಎನ್ನುವಂತಾಗಿದೆ.

ಶೀತಾಲಹರಿ ಗ್ರಾಮದ ಸಮಸ್ಯೆಗಳ ನಿವಾರಣೆಗೆ ಸಂಬಂಧಿಸಿದ ತಹಶೀಲ್ದಾರ್‌ ಮತ್ತು ನೋಡಲ್‌ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು. 
 ಎಂ.ಸುಂದರೇಶ್‌ ಬಾಬು, ಜಿಲ್ಲಾಧಿಕಾರಿ

Advertisement

ಗ್ರಾಮದಲ್ಲಿ ಕೊರೊನಾ ವ್ಯಾಪಿಸಿದೆ ಎಂಬ ವದಂತಿಯಿಂದಾಗಿ ಖಾಸಗಿ ವೈದ್ಯರು ಚಿಕಿತ್ಸೆ ನಿರಾಕರಿಸುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದಲೂ ಚಿಕಿತ್ಸೆ ಒದಗಿಸದ
ಕಾರಣ ಜನರಲ್ಲಿ ಸೋಂಕಿನ ಭೀತಿ ಹೆಚ್ಚುತ್ತಿದೆ. ಜತೆಗೆ ಗ್ರಾಮದ ಕಂಟೈನ್ಮೆಂಟ್‌ ಪ್ರದೇಶಕ್ಕೆ ಒಳಪಟ್ಟ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ವಸ್ತು ಒದಗಿಸುತ್ತಿಲ್ಲ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಜನರು ತಾತ್ಕಾಲಿಕವಾಗಿ ಗ್ರಾಮ ತೊರೆಯುತ್ತಿದ್ದಾರೆ.
 ಸಿದ್ದು ವಡ್ಡರ್‌, ಗ್ರಾಮಸ್ಥ

●ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next