Advertisement

ಕೊಠಡಿಯಲ್ಲಿ ಒಂದು ಮಂಚ ಬಿಟ್ಟರೆ ಎಲ್ಲೆಲ್ಲೂ ಪುಸ್ತಕಗಳೇ

01:24 AM Jan 12, 2020 | Lakshmi GovindaRaj |

ಬೆಂಗಳೂರು: ಸಂಶೋಧನೆಗೆ ಸಾಕ್ಷಿಪ್ರಜ್ಞೆಯಾಗಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಮನೆ, ಮನದಲ್ಲಿ ಪುಸ್ತಕ, ಸಂಶೋಧನಾ ಕಡತಗಳನ್ನೇ ತುಂಬಿಕೊಂಡಿದ್ದು, ತಾವು ಮಲಗುವ ಕೊಠಡಿಯನ್ನು ಗ್ರಂಥಭಂಡಾರ ಮಾಡಿಕೊಂಡಿದ್ದರು.

Advertisement

ಮಲಗುವ ಕೊಠಡಿ, ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿ ಸಹಿತವಾಗಿ ಮನೆಯ ಬಹುತೇಕ ಭಾಗಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನ ಶ್ರೇಷ್ಠ ಗ್ರಂಥಗಳು, ಸಂಶೋಧನಾ ಕೃತಿಗಳು, ಸಂಶೋಧನೆಗೆ ಬೇಕಾಗಿದ್ದ ಆಯ್ದ ಗ್ರಂಥಮಾಲಿಕೆಗಳು ಹೀಗೆ ಜೀವನ ಪೂರ್ತಿ ಪುಸ್ತಕದ ಜತೆಗೆ ಜೀವಿಸಿ, ಮನೆಯೊಳಗೆ ದೊಡ್ಡ ಗ್ರಂಥಭಂಡಾರವನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.

ಒಂದಿಂಚು ಜಾಗವಿಲ್ಲದಷ್ಟು ಪುಸ್ತಕವನ್ನು ಓದಿ, ಸಂರಕ್ಷಿಸಿಟ್ಟಿದ್ದಾರೆ. ಈ ಮಧ್ಯೆ ಅವರ ತಂದೆ- ತಾಯಿ ಫೋಟೋ ಒಂದನ್ನು ನೇತು ಹಾಕಿ ಕೊಂಡಿದ್ದಾರೆ. ರನ್ನ, ಪೊನ್ನ, ಜನ್ನ, ಕುವೆಂಪು, ಬೇಂದ್ರೆ, ಮಾಸ್ತಿ ಸಹಿತ ನವ್ಯ, ನವೋದಯ, ಬಂಡಾಯ ಹಾಗೂ ಎಲ್ಲ ರೀತಿಯ ಸಾಹಿತ್ಯವನ್ನು ಓದುವ ಅಭಿರುಚಿ ಅವರಲ್ಲಿತ್ತು.

ಇಂಗ್ಲಿಷ್‌ನ ದೊಡ್ಡ ದೊಡ್ಡ ಕೃತಿಗಳು ಅವರ ಮನೆಯಲ್ಲಿದೆ. ಇಡೀ ಮನೆಯೇ ಗ್ರಂಥಾಲಯವಾಗಿದ್ದರೂ, ಹಂಪಿ ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಬಿಡುವು ಸಿಕ್ಕಾಗಲೆಲ್ಲಾ. ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಬೇಕಿರುವ ಪುಸ್ತಕವನ್ನು ಹುಡುಕಿ ಓದುತ್ತಿದ್ದ ಪ್ರವೃತ್ತಿ ಅವರದ್ದಾಗಿತ್ತು ಎಂದು ಒಡನಾಡಿಯೊಬ್ಬರು ಮಾಹಿತಿ ನೀಡಿದರು.

ಸಂಶೋಧನೆಗೆ ಓದು ಮೂಲವಾದರೆ ಸಂಶೋಧಕನಿಗೆ ಕ್ಷೇತ್ರ ಪರಿಚಯ ಅತಿಮುಖ್ಯ ಎಂಬಂತೆ, ಚಿದಾನಂದ ಮೂರ್ತಿಯವರು ತಾವು ಕೈಗೊಳ್ಳುವ ಯಾವುದೇ ಸಂಶೋಧನಾ ಕಾರ್ಯಕ್ಕಾಗಿ ಕ್ಷೇತ್ರ ಸರ್ವೆಗೆ ಹೋಗುವ ಮೊದಲು ಪುಸ್ತಕಾಧ್ಯಯನವನ್ನು ನಡೆಸುತ್ತಿದ್ದರು. ಸಂಶೋಧನೆಗೆ ಪೂರಕವಾದ ಎಲ್ಲ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಕಲೆ ಹಾಕುತ್ತಿದ್ದರು. ಸಂಶೋಧನೆಯ ನೂರಾರು ಕಡತಗಳು ಅವರ ಮನೆಯಲ್ಲಿವೆ.

Advertisement

ಅಗೆದರು ಕಡಿಮೆಯಾಗದಷ್ಟು ಚಿನ್ನದ ಗಣಿ(ಪುಸ್ತಕಭಂಡಾರ) ಬಿಟ್ಟು ಹೋಗಿದ್ದಾರೆ. ಬಿಡುವಿನ ವೇಳೆ ಏನಾದರೂ ಬರೆಯುತ್ತಿದ್ದರು. ಇನ್ನು ಫೋನಿನಲ್ಲಿ ಹೆಚ್ಚು ಸಂಶೋಧನೆ ಕುರಿತ ಚರ್ಚೆ, ಸಂವಾದ ಮಾಡುತ್ತಿದ್ದರು ಎಂದು ಚಿ.ಮೂ. ಅವರ ಮಗ ವಿನಯಕುಮಾರ್‌ ವಿವರಿಸಿದರು.

ಹಿಂದೂಪರ ಚಿಂತನೆ ಹಾಗೂ ಸಿದ್ಧಾಂತ ಮೈಗೂಡಿಸಿಕೊಂಡಿದ್ದರೂ, ಭಾರತೀಯತೇ ಅಂತಿಮವೆಂದು ಪರಿಪಾಲಿಸುತ್ತಿದ್ದರು. ಕೇವಲ ಸಾಹಿತ್ಯಾತ್ಮಕವಾಗಿ ಪರಿಚಯವಾಗಿರಬಹುದು. ಆದರೆ, ಭಾರತವನ್ನು ಸಾಹಿತ್ಯಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದರು.
-ವಿನಯಕುಮಾರ್‌, ಚಿ.ಮೂ. ಅವರ ಮಗ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next