ಶ್ರೀರಂಗಪಟ್ಟಣ: ನಾಲೆಗಳಿಗೆ ನೀರು ಹರಿಸದ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಿವಿಧ ರೈತಪರ ಸಂಘಟನೆಗಳಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕುವೆಂಪು ವೃತ್ತದಲ್ಲಿ ರೈತ ಮುಖಂಡ ಮಂಜೇಶ್‌ಗೌಡ ನೇತೃತ್ವದಲ್ಲಿ ಜಮಾಯಿಸಿದ ರೈತ ಸಂಘ, ದಲಿತ ಸಂಘಟನೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಮೈಸೂರು-ಬೆಂಗಳೂರು ಹೆದ್ಧಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತರ ಕಡೆಗಣನೆ: ನಾಲೆಗಳಿಗೆ ನೀರು ಹರಿಸಲು ಹಲವಾರು ದಿನಗಳಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿದರೂ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸದೆ, ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಯಾವುದೇ ಮಂತ್ರಿಗಳು, ಶಾಸಕರು ಆಗಮಿಸದೆ ರೈತರನ್ನು ಕಡೆಗಣಿಸಿದೆ. ರೈತರ ಬಗ್ಗೆ ಗಮನ ಹರಿಸದೆ ಕಟಾವಿಗೆ ಬಂದ ಕಬ್ಬು ಸೇರಿದಂತೆ ಇತರ ಬೆಳೆಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್ ಗೌಡ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ಮಲತಾಯಿ ಧೋರಣೆ: ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಜಿಲ್ಲೆಯ ಬಗ್ಗೆ ಅಪಾರ ಗೌರವವಿದ್ದ ಮುಖ್ಯಮಂತ್ರಿಗಳು ಲೋಕಸಭೆ ಚುನಾವಣೆ ಬಳಿಕ ಮಲತಾಯಿ ಧೋರಣೆ ಅನುಸರಿಸು ತ್ತಿದ್ದಾರೆ. ಕೂಡಲೆ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ದ್ವೇಷ ಬೇಡ, ನೀರು ಹರಿಸಿ: ತಾಲೂಕು ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಮುಖ್ಯಮಂತ್ರಿಗಳು ನಾಲೆಗಳಿಗೆ ನೀರು ಹರಿಸದೆ, ಕೇಂದ್ರ ಕಾವೇರಿ ನೀರು ನಿರ್ವಹಣಾ ಮಂಡಳಿಯತ್ತ ಕೈ ತೋರಿಸುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಘನತೆಗೆ ತಕ್ಕುದಲ್ಲ. ಅವರನ್ನು ಬೆಂಬಲಿಸಿ ಜಿಲ್ಲೆ 7 ಶಾಸಕರನ್ನು ಕೊಟ್ಟಿದೆ. ಆದರೆ, ಮಗನನ್ನು ಎಂಪಿ ಮಾಡಲಿಲ್ಲ ಎಂದು ಜಿಲ್ಲೆಯ ಜನರ ಬಗ್ಗೆ ಕ್ರೂರವಾಗಿ ಮಾತನಾಡುವುದು. ನಾಲೆಗಳಿಗೆ ನೀರು ಹರಿಸದಿರುವುದು ಸರಿಯಲ್ಲ ಎಂದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಎಂ.ಬಿ.ನಾಗಣ್ಣ, ರೈತ ಸಂಘದ ಕಾಯ್ನಾಧ್ಯಕ್ಷ ಸ್ವಾಮೀಗೌಡ, ಅಧ್ಯಕ್ಷ ಶ್ರೀಕಂಠಯ್ಯ, ಕರವೇ ಅಧ್ಯಕ್ಷ ಶಂಕರ್, ದಲಿತ ಸಂಘಟನೆಯ ಮುಖಂಡರಾದ ಕುಬೇರಪ್ಪ, ರವಿಚಂದ್ರ, ಪಿಎಸ್‌ಎಸ್ಕೆ ಮಾಜಿ ನಿರ್ದೇಶಕ ಪಾಂಡು, ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಕರವೇ ಹರೀಶ್, ಚಂದ್ರಶೇಖರ್, ಜಯರಾಮು, ವಿವಿಧ ಜನಪರ ಸಂಘಟನೆಗಳ ಕಾರ್ಯಕರ್ತರು ಅಪಾರ ಸಂಖ್ಯೆ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಸಂಚಾರ ಅಸ್ತವ್ಯಸ್ತ: ಒಂದು ಗಂಟೆಗೂ ಹೆಚ್ಚುಹೊತ್ತು ಹೆದ್ದಾರಿ ತಡೆ ಮಾಡಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿ ಕರು ಪರದಾಡುವಂತಾಗಿದೆ. ಬಳಿಕ ಸ್ಥಳಕ್ಕೆ ತಹಶೀಲ್ದಾರ್ ನಾಗೇಶ್ ಆಗಮಿಸಿ ಪ್ರತಿಭಟನಾ ಕಾರರ ಮನವೊಲಿಸಿದರು.