Advertisement

ವರಿ ಬಿಡಿ, ಆರಾಮಾಗಿ ಬಸ್‌ ಏರಿ

10:33 AM Feb 04, 2019 | |

ಚಿತ್ರದುರ್ಗ: ವಿಕಲಚೇತನರು ಬಸ್‌ ಹತ್ತಲು, ಇಳಿಯಲು ಪ್ರಯಾಸ ಪಡುತ್ತಿರುವುದನ್ನು ಮನಗಂಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿ ಗಾಲಿ ಕುರ್ಚಿ ಮತ್ತು ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ.

Advertisement

ವಿಮಾನ ನಿಲ್ದಾಣಗಳಲ್ಲಿರುವಂತೆ ಇಳಿಜಾರು ವ್ಯವಸ್ಥೆಯ ರ್‍ಯಾಂಪ್‌ ಸೌಲಭ್ಯ ಒದಗಿಸುವ ಮೂಲಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಕಲಚೇತನ ಸ್ನೇಹಿಯಾಗಿದೆ.

ಏಕೆ ಈ ವ್ಯವಸ್ಥೆ?: ದೇಶದ ಎಲ್ಲಾ ಬಸ್‌ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ವಿಕಲಚೇತನರು ಬಸ್‌ ಹತ್ತಿ ಇಳಿಯಲು ಗಾಲಿ ಕುರ್ಚಿ ವ್ಯವಸ್ಥೆ ಮಾಡುವಂತೆ ಸರ್ವೋಚ್ಛ ನ್ಯಾಯಾಲಯ 2015ರಲ್ಲಿ ಆದೇಶಿಸಿತ್ತು. ಈ ಆದೇಶ ಪಾಲಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ರಾಜ್ಯದ ಈಶಾನ್ಯ, ವಾಯವ್ಯ ಸಾರಿಗೆ ಸೇರಿದಂತೆ ಎಲ್ಲ ಘಟಕಗಳಿಗೆ ಕಳೆದ ಜನವರಿ ತಿಂಗಳಲ್ಲಿ ಸುತ್ತೋಲೆ ಹೊರಡಿಸಿತ್ತು. ಇದರ ಫಲವಾಗಿ ಆಯಾ ಸಾರಿಗೆ ಘಟಕಗಳು ಬಸ್‌ನಿಲ್ದಾಣಗಳಲ್ಲಿ ರ್‍ಯಾಂಪ್‌ ಸೌಲಭ್ಯ ಕಲ್ಪಿಸಿವೆ.

ಬಸ್‌ ಮೆಟ್ಟಿಲುಗಳು ಎತ್ತರದಲ್ಲಿರುವುದರಿಂದ ವಿಕಲಚೇತನರು, ವಯೋವೃದ್ಧರು, ಮಹಿಳೆಯರು, ಮಕ್ಕಳು ಬಸ್‌ ಹತ್ತಿ ಇಳಿಯಲು ಪ್ರಯಾಸಪಡುತ್ತಿದ್ದರು. ಹಾಗಾಗಿ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಹತ್ತಲು ಮತ್ತು ಇಳಿಯಲು ಇರುವ ರ್‍ಯಾಂಪ್‌ ವ್ಯವಸ್ಥೆಯನ್ನು ಸಾರಿಗೆ ಸಂಸ್ಥೆ ಮಾಡಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವಿಕಲಚೇತನ ಪ್ರಯಾಣಿಕರಿದ್ದಲ್ಲಿ ರ್‍ಯಾಂಪ್‌ ಅನ್ನು ಬಸ್‌ ಮೆಟ್ಟಿಲುಗಳ ಬಳಿ ತರಲಾಗುತ್ತದೆ. ಅಗತ್ಯ ಎನ್ನಿಸಿದರೆ ಗಾಲಿ ಕುರ್ಚಿಯೂ ಬರುತ್ತದೆ. ಇದರ ಸಹಾಯದಿಂದ ವಿಕಲಚೇತನರು ಬಸ್‌ ಹತ್ತಿ ಇಳಿಯಬಹುದು.

ಎಲ್ಲೆಲ್ಲಿ ಎಷ್ಟೆಷ್ಟು?: ಜಿಲ್ಲಾ ಕೇಂದ್ರದ ಸಾರಿಗೆ ಬಸ್‌ ನಿಲ್ದಾಣಗಳಲ್ಲಿ ಕನಿಷ್ಠ ಎರಡು ರ್‍ಯಾಂಪ್‌ ಮತ್ತು ಗಾಲಿ ಕುರ್ಚಿ, ತಾಲೂಕು ಕೇಂದ್ರದ ಬಸ್‌ ನಿಲ್ದಾಣಗಳಲ್ಲಿ ತಲಾ ಒಂದರಂತೆ ರ್‍ಯಾಂಪ್‌ ಮತ್ತು ಗಾಲಿ ಕುರ್ಚಿ ವ್ಯವಸ್ಥೆ ಮಾಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಸ್‌ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಸಿಬ್ಬಂದಿ, ವಿಕಲಚೇತನರು ಬೇಡಿಕೆ ಇಟ್ಟಲ್ಲಿ ಕೂಡಲೇ ಗಾಲಿ ಕುರ್ಚಿ ವ್ಯವಸ್ಥೆ ಮಾಡಬೇಕು. ಅಲ್ಲದೆ ಬಸ್‌ ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ರ್‍ಯಾಂಪ್‌ ಒದಗಿಸಬೇಕು. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಆಸನ ಸಂಖ್ಯೆ 24 ಮತ್ತು 25ನ್ನು ವಿಕಲಚೇತನರಿಗಾಗಿ ಮೀಸಲಿಡಲಾಗಿದೆ. ವಿಕಲಚೇತನರ ಆನಗಳಲ್ಲಿ ಬೇರೆ ಪ್ರಯಾಣಿಕರು ಕುಳಿತಿದ್ದರೆ ಬಸ್‌ ನಿರ್ವಾಹಕರು ಆ ಆಸನಗಳನ್ನು ವಿಕಚಲಚೇತನರಿಗೆ ಬಿಡಿಸಿಕೊಡಬೇಕು. ಸಂಚಾರ ಸಿಬ್ಬಂದಿ, ಬಸ್‌ ಚಾಲಕ ಮತ್ತು ನಿರ್ವಾಹಕರು ವಿಕಲಚೇತನರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಲಾಗಿದೆ.

Advertisement

ಬಸ್‌ ನಿಲ್ದಾಣಗಳ ಮುಖ್ಯ ದ್ವಾರದಲ್ಲಿ ಮತ್ತು ಬಸ್‌ ನಿರ್ಗಮನಗಳ ಅಂಕಣದಲ್ಲಿ ವಿಕಲಚೇತನರಿಗೆ ಗಾಲಿ ಕುರ್ಚಿ ಸೌಲಭ್ಯ ನೀಡಲಾಗಿದೆ. ಅರ್ಹ ಫಲಾನುಭವಿಗಳು ಈ ಸೌಲಭ್ಯ ಬಳಸಿಕೊಳ್ಳಲಿ ಎಂದು ನಾಮಫಲಕವನ್ನೂ ಹಾಕಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ವಿಕಲಚೇತನರಿಗೆ ಅಗತ್ಯ ಸೇವಾ ಸೌಲಭ್ಯಗಳನ್ನು ನೀಡಬೇಕು. ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸುವಂತೆ ತಿಳಿಸಲಾಗಿದೆ.

ಒಟ್ಟಿನಲ್ಲಿ ಸಾರಿಗೆ ಸಂಸ್ಥೆ ವಿಕಲಚೇತನರಿಗೆ ನೀಡುತ್ತಿರುವ ಸೇವಾ ಸೌಲಭ್ಯದಿಂದಾಗಿ ಬಸ್‌ ಹತ್ತುವ ಮತ್ತು ಇಳಿಯುವ ಸಂದರ್ಭದಲ್ಲಿ ಪಡುತ್ತಿದ್ದ ಯಾತನೆ ತಪ್ಪಲಿದೆ. ಹಾಗಾಗಿ ವಿಕಲಚೇತನ ಪ್ರಯಾಣಿಕರು ಸುಲಲಿತವಾಗಿ ಬಸ್‌ ಸೇವೆಯನ್ನು ಬಳಕೆ ಮಾಡಬಹುದಾಗಿದೆ.

ವಿಕಲಚೇತನರು ಬಸ್‌ ಹತ್ತಲು ಮತ್ತು ಇಳಿಯಲು ಅತ್ಯಾಧುನಿಕ ರ್‍ಯಾಂಪ್‌ ವ್ಯವಸ್ಥೆ ಕಲ್ಪಿಸಲಾಗಿದೆ. ರ್‍ಯಾಂಪ್‌ಗ್ಳನ್ನು ಬಸ್‌ ಘಟಕಗಳಲ್ಲಿರುವ ನಿರುಪಯುಕ್ತ ವಸ್ತುಗಳನ್ನು ಬಳಸಿ ಯಾವುದೇ ಖರ್ಚಿಲ್ಲದೆ ಸಿದ್ಧಪಡಿಸಲಾಗಿದೆ. ವಿಕಲಚೇತನರು ಬಸ್‌ ನಿಲ್ದಾಣಗಳಲ್ಲಿ ರ್‍ಯಾಂಪ್‌ ಮತ್ತು ಗಾಲಿ ಕುರ್ಚಿಗಳನ್ನು ಬಳಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.
• ಪ್ರಸನ್ನಕುಮಾರ್‌ ಬಾಲನಾಯ್ಕ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಿತ್ರದುರ್ಗ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next