Advertisement
ಅಲ್ಲಿಯ ತನಕ ಮಗಳ ಮದುವೆ ಬಗ್ಗೆ ಯೋಚಿಸದ ಹೆತ್ತವರಿಗೆ, ಈ ಪರಿಚಿತರೊಬ್ಬರು ತಲೆಗೆ ಹುಳ ಬಿಟ್ಟಹಾಗೆ, ಅಲ್ಲಿಂದ ಪ್ರಾರಂಭವಾಗುವ ಮದುವೆ ಜಪ. ತರಾತುರಿಯಲ್ಲಿ ಹುಡುಗ ಹುಡುಕಿ ಮಗಳಿಗೆ ಮದುವೆ ಮಾಡಿಬಿಡ್ತಾರೆ. ಅಲ್ಲಿಗೆ ಅವಳೂ ನಿರಾಳ, ಇವರುಗಳಿಗೂ ನೆಮ್ಮದಿ ಅನ್ನುವ ಭಾವನೆ. ಅಲ್ಲಿಗೆ ಮುಗಿಯುತ್ತಾ? ಅದೆಷ್ಟು ದಿನ ಹೀಗೆ ಶಾಂತಿಯಿಂದ ಬಾಳು ನಡೆಯುತ್ತೆ? ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಹತ್ತುಹಲವು ಜನರಿಂದ ಪುನಃ ಪ್ರಶ್ನೆಗಳ ಸುರಿಮಳೆ.
ಅವರಿಗೆ ಉತ್ತರಿಸುವಷ್ಟರಲ್ಲಿ ಮತ್ತೂಂದು ಕಡೆಯಿಂದ, “”ಅಜ್ಜ ಅಜ್ಜಿ ಆಗುವ ಸಂಭವವಿದೆಯ?” ಎಂಬ ಪ್ರಶ್ನೆ. ಇದು ಹೆತ್ತವರು ಎದುರಿಸುವ ಸಂಕಷ್ಟಗಳಾದರೆ, ಇನ್ನೊಂದೆಡೆ ಮದುವೆಯಾದ ಹೆಣ್ಣುಮಗಳದ್ದು ಇದಕ್ಕಿಂತ ವಿಭಿನ್ನ. ಕುಟುಂಬದ ಸಮಾರಂಭಗಳಿಗಾಗಲಿ, ಇಲ್ಲ ಮನೆಗೆ ಬಂದ ಅತಿಥಿಗಳಾಗಲಿ ಸುಮ್ಮನಿರುವುದಿಲ್ಲ. “”ಏನಮ್ಮ, ಯಾವಾಗ ಸಿಹಿ ಸುದ್ದಿ ಕೊಡ್ತೀಯ? ಇನ್ನೂ ಎಷ್ಟು ಸಮಯ ಇಬ್ಬರೇ ಜೀವನ? ನಾವುಗಳೆಲ್ಲ ನಿನ್ನ ಮಗುವನ್ನು ಆಡಿಸುವುದು ಯಾವಾಗ?” ಎಂಬಂತೆಲ್ಲ ಬೆಂಬಿಡದೆ ಬೇತಾಳವಾಗುವ ಮಾತುಗಳು. ಹೆಣ್ಣುಮಗಳು ಡಿಗ್ರಿ ಗಳಿಸಿ, ಉದ್ಯೋಗ ಅರಸಿ, ತನ್ನ ಕಾಲಮೇಲೆ ತಾನು ನಿಂತಾಗ ಅವಳ ಜೀವನವೇ ಒಂದು ಮಹತ್ವದ ಘಟ್ಟಕ್ಕೆ ಬಂದು ತಲುಪಿದಂತೆ. ಚಿಗರೆಯಂತೆ ಆರಾಮದಿಂದ ಇದ್ದವಳಿಗೆ ಕೆರಿಯರ್ ಅನ್ನುವ ಬಹುದೊಡ್ಡ ಕನಸು, ಕುತೂಹಲ ಇನ್ನೂ ಏನೇನೋ ಸಮ್ಮಿಶ್ರ ಭಾವಗಳು. ಅದರೊಟ್ಟಿಗೆ ಜೊತೆಯಾಗುವ ಮದುವೆಯೆನ್ನುವ ಸುಮಧುರ ಬಾಂಧವ್ಯ. ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಸಮತೂಕದಿಂದ ಸಂಭಾಳಿಸಿಕೊಂಡು ಹೋಗುವ ಗುರುತರವಾದ ಜವಾಬ್ದಾರಿ. ಆಗತಾನೆ ಚಿಗುರೊಡೆದ ಹೊಸತೊಂದು ಬಾಳನ್ನು ಹೊಂದಿಸಿಕೊಂಡು ಸಾಗುವಾಗ, ಮೊದಲು ಅದು ಸಮಸ್ಥಿತಿಗೆ ಬರಬೇಕು, ತದನಂತರ ಅಲ್ಲವೇ ಮಗದೊಂದು ಹೊಣೆಗಾರಿಕೆ ಹೊರಲು ಸಾಧ್ಯ? ಮದುವೆಯಾದ ಒಂದೆರಡು ವರ್ಷಗಳಾದರೂ ಅಗತ್ಯವಿದೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು. ಇಬ್ಬರಲ್ಲೂ ಕನಸುಗಳಿರುತ್ತವೆ, ಜೊತೆಯಾಗಿ ಅಲೆದಾಡಬೇಕೆಂಬ ಹಂಬಲವಿರುತ್ತದೆ, ಎಲ್ಲದಕ್ಕೂ ಸಮಯ, ಮನೆಯವರ ಸಹಕಾರ ಅತ್ಯಗತ್ಯ!
Related Articles
ಮದುವೆಯಾದ ಪ್ರತಿಯೊಬ್ಬ ಹೆಣ್ಣುಮಗಳಿಗೂ ತನ್ನವರ ಭಾವನೆಗಳು ಅರ್ಥವಾಗುತ್ತದೆ. ಅಪ್ಪ -ಅಮ್ಮ, ಅತ್ತೆ-ಮಾವ, ಅಜ್ಜ-ಅಜ್ಜಿಯರಾಗಬೇಕೆಂದೂ, ತನ್ನಜ್ಜ-ಅಜ್ಜಿ ,ಮುತ್ತಜ್ಜ- ಮುತ್ತಜ್ಜಿಯರೆಲ್ಲ ತನ್ನ ಮಗುವನ್ನು ಅವರುಗಳು ಲಾಲನೆ-ಪಾಲನೆ ಮಾಡಬೇಕೆಂದೂ ಬಯಸುತ್ತಾಳೆ. ಹಾಗೆಂದ ಮಾತ್ರಕ್ಕೆ ಮದುವೆಯಾದ ತಕ್ಷಣವೇ ಮಗುವನ್ನು ಹೆರಬೇಕೆಂದು ಬಯಸುವುದು ಎಷ್ಟರಮಟ್ಟಿಗೆ ಸರಿ? ಕಷ್ಟಪಟ್ಟು ಉತ್ತಮ ಅಂಕ ಗಳಿಸಿ, ಉದ್ಯೋಗಿ ಮಹಿಳೆಯಾಗಿ, ಅಷ್ಟು ಬೇಗನೇ ಕೆಲಸಕ್ಕೆ ಬ್ರೇಕ್ ಕೊಟ್ಟರೆ, ಅವಳು ಡಿಗ್ರಿ ಸಂಪಾದಿಸಿದ್ದು ವ್ಯರ್ಥವಾಗುವುದಿಲ್ಲವೇ? ಕಣ್ಣಲ್ಲಿ ಕಣ್ಣಿಟ್ಟು ಮಗುವನ್ನು ನೋಡಿಕೊಂಡು, ಅದಕ್ಕೆ ಎರಡು-ಮೂರು ವರ್ಷವಾಗುವವರೆಗೂ ಕಾದು, ಅದು ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರವೇ, ತಾಯಿಯಾದವಳಿಗೆ ಕೆಲಸಕ್ಕೆ ವಾಪಸ್ ಮರಳಲು ಸಾಧ್ಯವಾಗುವುದು. ಎಲ್ಲರಿಗೂ ತಿಳಿದಂತೆ ಈಗಿನದ್ದು ಸ್ಪರ್ಧಾತ್ಮಕ ಯುಗ. ಯಾರೂ ಕೂಡ “ನಮ್ಮ ಕಂಪೆನಿಗೆ ಬಾಮ್ಮ, ಒಳ್ಳೆಯ ಕೆಲಸ ಕೊಡಿಸುತ್ತೇವೆ’ ಎಂದು ಕಾದು ಕೂತಿರುವುದಿಲ್ಲ. ತುಕ್ಕು ಹಿಡಿದ ತನ್ನ ಸ್ಕಿಲ್ ಸೆಟ್ ಅನ್ನು ಉಜ್ಜಿ, ಒಂದು ಹದಕ್ಕೆ ತಂದ ನಂತರ ಕೆಲಸಕ್ಕಾಗಿ ಅಲೆದಾಟ ನಡೆಸಬೇಕು. ಇವೆಲ್ಲ ಯಾಕೆ ಅರ್ಥವಾಗೋಲ್ಲ?
Advertisement
ಹೆಣ್ಣುಮಗಳೇ, ಕೇಳುನಿನಗೆ ನೀನು ಏನು ಮಾಡುತ್ತಿದ್ದೀಯ, ಏನಾಗಬೇಕೆಂದು ತಿಳಿದಿದೆ. ಇಲ್ಲಸಲ್ಲದ ಮಾತುಕತೆಗಳಿಗೆ ಕಿವಿಯೊಡ್ಡಬೇಡ, ಕೆಲವರು ಬೇಕೆಂದೇ ಪ್ರಶ್ನೆಗಳನ್ನು ಕೇಳಿ ಸತಾಯಿಸುವವರಿದ್ದಾರೆ. ಅವರಿಗೆ ನಾಲಿಗೆಗೊಂದು ಕೆಲಸ ಬೇಕು, ಕೆಟ್ಟ ಕುತೂಹಲಕ್ಕೆ ಮದ್ದು ಬೇಕು. ಇದಕ್ಕೆಂದೇ ವ್ಯಂಗ್ಯ, ಚುಚ್ಚುಮಾತುಗಳಿಂದ ಮನನೋಯಿಸಲು ತಯಾರಿರುತ್ತಾರೆ. ನಿನಗೂ ತಾಯ್ತನದ ಆಸೆ, ಆಕಾಂಕ್ಷೆಗಳಿವೆ, ನೀನೂ ಅದನ್ನು ಮನಃಪೂರ್ವಕವಾಗಿ ಅನುಭವಿಸಬೇಕೆಂದು ಬಯಕೆಯಿದೆ. ಉದ್ದೇಶಪೂರ್ವಕವಾಗಿ ಅಮ್ಮನಾಗುವುದನ್ನು ಯಾರು ಮುಂದೂಡುತ್ತಾರೆ ಅಲ್ಲವೇ? ಹೀಗೆ ಕೊಂಕು ಮಾತಾಡುವವರ ಬಳಿ ಸುಮ್ಮನಿದ್ದು ಬಿಡು, ನಾವೇನೆಂದು ನಮಗೆ ಗೊತ್ತು. ಚೆನ್ನಾಗಿ ತಿನ್ನು, ದೇಶ ಸುತ್ತು, ಹವ್ಯಾಸಗಳನ್ನು ಬೆಳೆಸು, ಉಳಿಸು, ಒಟ್ಟಾರೆ ಖುಷಿ ಖುಷಿಯಾಗಿರು. ಸಮಯ ಬಂದಾಗ, ಒಂದು ದಿನ ಸರಿಯಾದ ಸಮಯಕ್ಕೆ ನೀನೂ ತಾಯಿಯಾದಾಗ ಅವರೆಲ್ಲರ ಬಾಯಿಮುಚ್ಚಿಸು ! ಹಿರಿಯರೇ, ತಾಳ್ಮೆಯಿರಲಿ
ಕ್ಷುಲ್ಲಕ ಕಾರಣಕ್ಕೆ ಮದುವೆಯಿಂದ ತಪ್ಪಿಸಿಕೊಳ್ಳುವ, ಮುಂದೆ ಹಾಕುವ ಈಗಿನ ಹೆಣ್ಣುಮಕ್ಕಳ ನಡುವೆ, ನಿಮ್ಮ ಮನೆ ಮಗಳು ಮದುವೆಗೆ ಒಪ್ಪಿಕೊಂಡಳೆಂದರೆ ಅದು ಸಂತಸದ ಸಂಗತಿ ಎಂದರೆ ತಪ್ಪಾಗಲಾರದು. ಹಾಗಿದ್ದಲ್ಲಿ ಅವಳಿಗೆ ಬೆಂಬಲವಾಗಿ ನಿಲ್ಲಬೇಕಾದದ್ದು ನಿಮ್ಮಗಳ ಕರ್ತವ್ಯ. ನೀವುಗಳೇ ಹೇಳುವಿರಿ ಎಲ್ಲದಕ್ಕೂ ಕಾಲಕೂಡಿ ಬರಬೇಕು, ಹಾಗಾದರೆ, ಈ ವಿಷಯಕ್ಕೂ ಅದು ಅನ್ವಯಿಸುತ್ತದೆ. ಏನಂತೀರ? ಇನ್ನೂ ಮಗುವಾಗಿಲ್ಲ ಏಕೆ ಎಂದು ನೀವುಗಳು ಪ್ರಶ್ನಿಸಿದರೆ ಅವಳು ಕುಗ್ಗಿಹೋಗುತ್ತಾಳೆ. ಅದರ ಬದಲು ಅಂತಹ ಸನ್ನಿವೇಶಗಳು ಎದುರಾದಾಗ ನಿಮಗೆ ತಾಳ್ಮೆಯಿರಬೇಕು. ಅವಳ ಮೇಲೆ ಒತ್ತಡ ಹೇರಿ, ಮಾನಸಿಕ, ದೈಹಿಕ ಅನಾರೋಗ್ಯಕ್ಕೆ ಕಾರಣರಾಗಬೇಡಿ. ಸುಪ್ರೀತಾ ವೆಂಕಟ್