ಚಿತ್ರದುರ್ಗ: ಕಟ್ಟಡ ಕಾರ್ಮಿಕರಿಗೆ ಮಾರಕವಾಗಲಿರುವ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ಸ್ಟೇಟ್ ಕನ್ಸ್‌ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್, ಕರ್ನಾಟಕ ರಾಜ್ಯ ಕಾರ್ಮಿಕರ ಕೇಂದ್ರ ಸಂಘದ ಜಿಲ್ಲಾ ಸಮಿತಿ ಹಾಗೂ ಎಐಟಿಯುಸಿ ನೇತೃತ್ವದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಹಾಗೂ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ದ್ವಿಮುಖ ನೀತಿ ಹಾಗೂ ಕಾರ್ಮಿಕ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಸ್ಟೇಟ್ ಕನ್ಸ್‌ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾಧ್ಯಕ್ಷ ವೈ. ಸತ್ಯಪ್ಪ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತರಲಿರುವ ಹೊಸ ಕಾಯ್ದೆ ಮಾರಕವಾಗಿದೆ. ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸಂಕೇತ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಕರಡು ಸಂಕೇತಗಳನ್ನು ತಕ್ಷಣವೇ ಕೈಬಿಡಬೇಕು. ಇಲ್ಲದಿದ್ದರೆ ಕಟ್ಟಡ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತದೆ. ಅದಕ್ಕಾಗಿ ಫೆ. 7 ರಂದು ಸಂಸತ್‌ಗೆ ಮುತ್ತಿಗೆ ಹಾಕಲಾಗುವುದು ಎಂದರು.
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವೈ. ತಿಪ್ಪೇಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋ ಧೋರಣೆ ಅನುಸರಿಸುತ್ತಿದೆ. ಅಲ್ಲದೆ ಆ ಎರಡು ವರ್ಗಗಳನ್ನು ತುಳಿಯಲು ಹೊರಟಿದೆ. ಕಾರ್ಮಿಕರಿಗಾಗಿಯೇ ಇರುವ ಕಾನೂನು ಕಾಯ್ದೆಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ಕೇಂದ್ರ ಜಾರಿಗೆ ತರಬೇಕು. ಇಲ್ಲವಾದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು. ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ. ಶಿವರುದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರ ದೇಶದ ಎಂಭತ್ತು ಶ್ರೀಮಂತ ಕುಟುಂಬಗಳಿಗೆ ಮಾತ್ರ ಆಡಳಿತ ಮಾಡುತ್ತಿದೆ. 130 ಕೋಟಿ ಜನರನ್ನು ನಿರ್ಲಕ್ಷಿಸಿದೆ.
ಕಾರ್ಪೋರೆಟ್ ಕಂಪನಿಗಳ ಪರ ಆಡಳಿತ ಮಾಡುತ್ತಿರುವ ಪ್ರಧಾನಿ ಮೋದಿ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಹುನ್ನಾರ ನಡೆಸುತ್ತಿದ್ದಾರೆ. 2006ರಲ್ಲಿ ರಾಜ್ಯದಲ್ಲಿ ಕಾರ್ಮಿಕ ಕಾಯ್ದೆ ಜಾರಿಗೆ ಬಂದಿತು. ಅಸಂಘಟಿತ ಕಾರ್ಮಿಕರಿಂದ ಕೋಟಿಗಟ್ಟಲೆ ಸೆಸ್ ಸರ್ಕಾರಕ್ಕೆ ಪಾವತಿಯಾಗುತ್ತಿದೆ. ವಿವಿಧ ವಿಭಾಗದ 34 ಬಗೆಯ ಕಾರ್ಮಿಕರು ಸೇರಿದಾಗ ಮಾತ್ರ ಸುಂದರ ಕಟ್ಟಡ ನಿರ್ಮಾಣವಾಗಲು ಸಾಧ್ಯ. ತಮಿಳುನಾಡು, ಕೇರಳ, ಪಂಜಾಜ್, ಪಶ್ಚಿವ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಕಟ್ಟಡ ಕಾರ್ಮಿಕರು ಅನೇಕ ರೀತಿಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಕರ್ನಾಟಕದಲ್ಲಿ ಯಾವುದೇ ಸೌಲಭ್ಯ ಕಾರ್ಮಿಕರಿಗೆ ಸಿಗುತ್ತಿಲ್ಲ. ಇರುವ ಸವಲತ್ತುಗಳನ್ನು ಕಸಿದುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು. ಕೆ.ಕೆ.ಎನ್.ಎಸ್.ಎಸ್ ಜಿಲ್ಲಾಧ್ಯಕ್ಷ ಗಣೇಶ್ ಮಾತನಾಡಿ, ಕೇಂದ್ರ ಸರ್ಕಾರದ ಹೊಸ ಕಾಯ್ದೆ ಜಾರಿಯಾದರೆ ಕಟ್ಟಡ ಕಾರ್ಮಿಕರು 13 ಸೌಲಭ್ಯಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಉದ್ಯಮಿ, ಬಂಡವಾಳಶಾಹಿಗಳನ್ನು ಓಲೈಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿಯವರು ಅಸಂಘಟಿತ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ಅಂಜಿನಪ್ಪ, ಎಂ.ಸಿ. ಮಚ್ಚೇಂದ್ರಪ್ಪ, ಕೆ.ಇ. ಸತ್ಯಕೀರ್ತಿ, ರಿಜ್ವಾನ್ ಸಾಬ್, ತಿಪ್ಪೇಸ್ವಾಮಿ, ಡಿ. ಲಕ್ಷ್ಮೀ, ಟಿ.ಪ್ರಸನ್ನ ಮತ್ತಿತರರು ಇದ್ದರು.
ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳು
ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಶೇ. 3 ರಷ್ಟು ಹಣ ಮೀಸಲಿಡಬೇಕು. ಕಟ್ಟಡ ಕಾರ್ಮಿಕರ ನೋಂದಣಿ, ನವೀಕರಣ ಹಾಗೂ ಸೌಲಭ್ಯಗಳನ್ನು ಕೊಡಿಸುವಲ್ಲಿ ಕಾರ್ಮಿಕ ಸಂಘಗಳ ಪಾತ್ರ ಈಗಿನಂತೆಯೇ ಮುಂದುವರೆಯಬೇಕು. ನೋಂದಾಯಿತ ಕಟ್ಟಡ ಕಾರ್ಮಿಕರ ಪತ್ನಿಯರಿಗೆ ಹೆರಿಗೆ ಸಂದರ್ಭದಲ್ಲಿ ಹೆರಿಗೆ ಸೌಲಭ್ಯಗಳನ್ನು ನೀಡಬೇಕು.ಮಂಡಳಿಯಲ್ಲಿ ಈಗಾಗಲೇ ನೀಡುತ್ತಿರುವ ಎಲ್ಲಾ ಸವಲತ್ತುಗಳನ್ನು ತ್ವರಿತಗತಿಯಲ್ಲಿ ವಿಲೇಪಡಿಸಬೇಕು. ಚಿತ್ರದುರ್ಗ ಜಿಲ್ಲೆಗೆ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಕೂಡಲೇ ನೇಮಕ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.