Advertisement

ನೌಕರಿ ಬಿಟ್ಟು ಹಳ್ಳಿ ಚುನಾವಣೆಗೆ ಸ್ಪರ್ಧೆ!

01:46 PM Dec 26, 2020 | Adarsha |

ಬಾಗಲಕೋಟೆ: ಎಂಜಿನಿಯರಿಂಗ್‌, ಎಂಬಿಎ ಪರೀಕ್ಷೆಯಲ್ಲಿ ಪಾಸಾಗಿ ಉತ್ತಮ ಅಂಕ ಪಡೆದು, ಡಬಲ್‌ ಡಿಗ್ರಿಯನ್ನೂ ಮುಗಿಸಿ, ಖಾಸಗಿ ಕಂಪನಿಯಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದ ಯುವಕರೀಗ ಗ್ರಾಪಂ ಚುನಾವಣೆಗೆ ಸ್ಪರ್ಧೆ ಮಾಡಿದ್ದು, ತಮ್ಮೂರಿನ ಗ್ರಾಮಸ್ಥರ ಮತವೆಂಬ ಅಂಕ ಪಡೆಯಲು ಮುಂದಾಗಿದ್ದಾರೆ.

Advertisement

ಹೌದು, ಬಾಗಲಕೋಟೆ ತಾಲೂಕಿನ ಯಡಹಳ್ಳಿ ಗ್ರಾಪಂನ ಆನದಿನ್ನಿ ಕ್ರಾಸ್‌ನ ಸಾಮಾನ್ಯ ಸ್ಥಾನಕ್ಕೆ ಬಿಕಾಂ, ಎಂಬಿಎ ಪದವಿ ಪಡೆದ ಸಂತೋಷ ಬಜೆಟ್ಟಿ ಸ್ಪರ್ಧೆ ಮಾಡಿದ್ದಾರೆ. ಇನ್ನು ತಾಲೂಕಿನ ಭಗವತಿ ಗ್ರಾ.ಪಂ.ನ ಕಿರಸೂರ ಗ್ರಾಮದ ವಾರ್ಡ್‌ ನಂ.1ಕ್ಕೆ ಪ್ರವೀಣಕುಮಾರ ಮುದ್ದಪ್ಪ ಸಿಂದಗಿ ಎಂಬ ಯುವಕ ಸ್ಪರ್ಧೆ ಮಾಡಿದ್ದು, ಈತ ಕೂಡ ಬಿ.ಇ ಮತ್ತು ಎಂಟೆಕ್‌ ಪದವಿ ಮುಗಿಸಿ, ಬೆಂಗಳೂರು ಹಾಗೂ ಹೈದ್ರಾಬಾದ್‌ನ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಗ್ರಾಪಂ ಚುನಾವಣೆಯಲ್ಲಿ ಬಹುತೇಕ ಕಡೆ ನೋಟ್‌ ಫಾರ್‌ ವೋಟ್‌ ಎಂಬ ಲಾಜಿಕ್‌ನದ್ದೇ ಸದ್ದು. ಆದರೆ, ಈ ಯುವಕರು ಅದನ್ನು ತಿರಸ್ಕೃತಿ, ಮಾದರಿ ಗ್ರಾಮದ ಅಭಿವೃದ್ಧಿಯ ಕನಸು ಹೊತ್ತು ಚುನಾವಣೆ ಸ್ಪರ್ಧೆ ಮಾಡಿದ್ದಾರೆ. ಪ್ರವೀಣಕುಮಾರ, ಬೆಂಗಳೂರಿನ ಶಿವಕುಮಾರ ಕಾಲೇಜ್‌ ಹಾಗೂ ಹೈದ್ರಾಬಾದ್‌ನ ನರಸಿಂಹರಡ್ಡಿ ಕಾಲೇಜಿನಲ್ಲಿ ಉಪನ್ಯಾಸಕ (ತಾತ್ಕಾಲಿಕ)ರಾಗಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಊರಿಗೆ ಬಂದಿರುವಅವರು, ತಮ್ಮೂರಿನ ಸ್ಥಿತಿ ನೋಡಿ, ತಾವೇ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಇದನ್ನೂ ಓದಿ:ಬ್ರಿಟನ್ ನಿಂದ ಮೈಸೂರಿಗೆ ಬಂದ ಒಬ್ಬರಲ್ಲಿ ಕೋವಿಡ್ ಸೋಂಕು ಪತ್ತೆ: ರೋಹಿಣಿ ಸಿಂಧೂರಿ

ಇನ್ನು ಆನದಿನ್ನಿ ಕ್ರಾಸ್‌, ಈ ಭಾಗ ದೊಡ್ಡ ಗ್ರಾಮ. ರಾಯಚೂರು-ಬೆಳಗಾವಿ, ಹುಬ್ಬಳ್ಳಿ ಸೊಲ್ಲಾಪುರ ಎಂಬ ಎರಡು ರಾಷ್ಟ್ರೀಯ ಹೆದ್ದಾರಿ ಕೂಡುವ ಪ್ರಮುಖ ವಾಣಿಜ್ಯ ಕೇಂದ್ರವೂ ಹೌದು. ಇಲ್ಲಿನ ಅವ್ಯವಸ್ಥೆ ಸರಿಪಡಿಸಿ, ಮಾದರಿ ಗ್ರಾಮ ಮಾಡಬೇಕೆಂಬ ಕನಸಿನೊಂದಿಗೆ ಸಂತೋಷ ಯಲ್ಲಪ್ಪ ಬಜೆಟ್ಟಿ ಸ್ಪರ್ಧೆಗಿಳಿದಿದ್ದಾರೆ. ಕಾಲೇಜು ಪರೀಕ್ಷೆಯಲ್ಲಿ ಪಾಸಾದವರೀಗ, ಗ್ರಾಮದ ಮತದಾರರ ಪರೀಕ್ಷೆಯಲ್ಲೂ ಪಾಸಾಗಬೇಕಿದೆ.

Advertisement

1380 ಸ್ಥಾನಕ್ಕೆ ಚುನಾವಣೆ: ಜಿಲ್ಲೆಯ ಬಾಗಲಕೋಟೆ, ಹುನಗುಂದ, ಬಾದಾಮಿ, ಇಳಕಲ್ಲ ಹಾಗೂ ಗುಳೇದಗುಡ್ಡ ತಾಲೂಕಿನ ಒಟ್ಟು 102 ಗ್ರಾಪಂಗಳ 1547 ಸ್ಥಾನಕ್ಕೆ 2ನೇ ಹಂತದ ಚುನಾವಣೆ ನಡೆಯಲಿದೆ. ಆದರೆ, ಹುನಗುಂದ ತಾಲೂಕಿನ 2 ಹಾಗೂ ಬಾದಾಮಿ ತಾಲೂಕಿನ 7 ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.

ಇನ್ನು ಬಾಗಲಕೋಟೆ-37, ಹುನಗುಂದ-13, ಬಾದಾಮಿ-51, ಇಳಕಲ್ಲ-25, ಗುಳೇದಗುಡ್ಡ-32 ಸ್ಥಾನಗಳು ಅವಿರೋಧ ಆಯ್ಕೆಯಾಗಿವೆ. ಇನ್ನುಳಿದ 1380 ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು, ಒಟ್ಟು 3756 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಹ್ಯಾಟ್ರಿಕ್‌ ಕನಸಿಗೆ 2ನೇ ಸ್ಥಾನಕ್ಕೆ ಸ್ಪರ್ಧೆ: ಬಾಗಲಕೋಟೆ ತಾಲೂಕಿನ ಬೇವೂರ ಗ್ರಾಮ ಪಂಚಾಯತ ಚುನಾವಣೆಗೆ 3ನೇ ಬಾರಿ ಸ್ಪರ್ಧೆ ಮಾಡಿರುವ ಶರಣಬಸಪ್ಪ ಜಿ. ಮಾಗನೂರ ವಾರ್ಡ ನಂ.1 ಮತ್ತು 4ರಲ್ಲಿ ಸ್ಪರ್ಧೆ ಮಾಡಿದ್ದಾರೆ.

ಈ ಬಾರಿಯೂ ಗೆದ್ದು ಹ್ಯಾಟ್ರಿಕ್‌ ಸಾಧಿಸಬೇಕೆಂಬ ಗುರಿ ಅವರದು. ಬೇಗೂರ ಗ್ರಾಪಂ ವ್ಯಾಪ್ತಿಯ ಚೌಡಾಪುರದಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ ನಾಲ್ಕು ಸ್ಥಾನ ಹಾಗೂ ಬೇವೂರಿನ 15 ಸ್ಥಾನ ಸೇರಿ ಒಟ್ಟು ಈ ಗ್ರಾ.ಪಂ.ನ 19 ಸ್ಥಾನಕ್ಕೆ ತುರುಶಿನ ಚುನಾವಣೆ ನಡೆಯುತ್ತಿದೆ.ಬಾಗಲಕೋಟೆ ತಾಲೂಕಿನ ರಾಂಪುರ, ಬೇವೂರ, ಹಳ್ಳೂರ, ಬೋಡನಾಯಕನದಿನ್ನಿ, ಡೋಮನಾಳ, ಸಿಮೀಕೇರಿ, ಶಿಗಿಕೇರಿ ಸೇರಿದಂತೆ ಹಲವು ಗ್ರಾಮಗಳು, ಗ್ರಾ.ಪಂ. ಚುನಾವಣೆಯಲ್ಲಿ ಸೂಕ್ಷ್ಮ ಗ್ರಾಮಗಳಾಗಿದ್ದು, ಪ್ರತಿಷ್ಠೆಯ ಚುನಾವಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next