Advertisement
ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ಅವರಿಗೆ ಸರಿಯಾದ ಸೇವೆ ದೊರಕುತ್ತಿಲ್ಲ, ಅವರನ್ನು ಯಾರೂ ಕೇರ್ ಮಾಡುವುದಿಲ್ಲ ಎನ್ನುವ ಆರೋಪ ಲಾಗಾಯ್ತಿನಿಂದ ಇದೆ. ಇದರ ಸತ್ಯಾಸತ್ಯತೆಯೇ ಬೇರೆ. ಕೆಲವು ಅಪವಾದಗಳು ಇರಬಹುದಾದರೂ, ಬ್ಯಾಂಕುಗಳಲ್ಲಿ ಕೆಲವು ಇನ್ನಿತರ ಇಲಾಖೆಗಳಿಗಿಂತ ಹಿರಿಯನಾಗರಿಕರನ್ನುಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದಾರೆ ಅನ್ನೋದು ಸುಳ್ಳಲ್ಲ. ಅವರಿಗೆ ನೀಡುವ ಸೇವೆಯಲ್ಲಿ ಲೋಪದೋಷಗಳು ಇವೆ ಅನ್ನೋದನ್ನು ತಳ್ಳಿ ಹಾಕಲಾಗದು. ಅವರು ಬ್ಯಾಂಕ್‌ನಲ್ಲಿ ಇಡುವ ಇಡುಗಂಟಿಗೆ ಇನ್ನಿತರ ಠೇವಣಿ ಧಾರರಿಗಿಂತ ಸ್ವಲ್ಪ ಹೆಚ್ಚು ಬಡ್ಡಿಯನ್ನು ನೀಡಲಾಗುತ್ತದೆ. ಇದು ಶೇ.0.50 ಹೆಚ್ಚಿಗೆ ಇರುತ್ತದೆ. ಕೆಲವು ಬ್ಯಾಂಕುಗಳಲ್ಲಿ ಅವರಿಗಾಗಿ ಪ್ರತ್ಯೇಕ ಕೌಂಟರ್ ಇದೆ. ಕೆಲವು ಬ್ಯಾಂಕುಗಳಲ್ಲಿ ಇದು ಸಾಧ್ಯವಾಗದಿದ್ದಾಗ, ಅವರಿಗೆ out of que ಸೌಲಭ್ಯವಿದೆ. ಯಾವುದೇ ಶುಲ್ಕವಿಲ್ಲದೆ 25 ಚೆಕ್‌ಬುಕ್ ಅನ್ನು ಉಚಿತವಾಗಿ ಕೊಡಲಾಗುತ್ತದೆ. ಇದಕ್ಕಾಗಿ ಬ್ಯಾಂಕಿಗೆ ಎಡತಾಕುವ ಅವಶ್ಯಕತೆಯೂ ಅವರಿಗಿಲ್ಲ. ಅಂಚೆ ಮೂಲಕ ಕಳಿಸಿಕೊಡು ವ್ಯವಸ್ಥೆ ಇದೆ.
Related Articles
Advertisement
ಹಿರಿಯನಾಗರಿಕರ ಮನೆಯಿಂದ ನಗದು ಪಡೆದು ಅವರ ಖಾತೆಗೆ ಜಮಾ ಮಾಡುವುದು, ಅವರಿಂದ ಚೆಕ್, ಡ್ರಾಫ್ಟ್ ಮುಂತಾದವುಗಳನ್ನು ಕಲೆಕ್ಟ್ ಮಾಡುವುದು, ಅವರ ಖಾತೆಯಿಂದ ಹಣ ಡ್ರಾ ಮಾಡಿ ಅವರಿಗೆ ತಲುಪಿಸುವುದು, ಬ್ಯಾಂಕ್ ಸ್ಟೇಟ್ ಮೆಂಟ್, ಚೆಕ್‌ಬುಕ್ ಮತ್ತು ಪಾಸ್‌ಬುಕ್‌ಗಳನ್ನು ಅವರ ಮನೆಗೆ ತಲುಪಿಸುವುದು ಮುಂತಾದ ಬೇಸಿಕ್ ಬ್ಯಾಂಕಿಂಗ್ ಸೇವೆಯನ್ನು ಅವರ ಮನೆಗೇ ತಲುಪಿಸುವ ವ್ಯವಸ್ಥೆಯೂ ಇದೆ.
ಈ ಸೇವೆ ಪಟ್ಟಣ- ನಗರಗಳಿಗೆ ಸೀಮಿತವೋ ಅಥವಾ ಗ್ರಾಮಾಂತರ ಪ್ರದೇಶಗಳಲ್ಲೂ ಲಭ್ಯವಿದೆಯೋ ಅನ್ನೋದು ಖಚಿತವಾಗಿಲ್ಲ. ಮೈಲಿಗೊಂದು ಮನೆ ಇರುವ ಹಳ್ಳಿಗಳಲ್ಲಿ ಇದು ಸಾಧ್ಯವೇ? ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರ ಸಂಖ್ಯೆ ಗಣನೀಯವಾಗಿಲ್ಲ .ದಿನಕ್ಕೆ ಒಂದಿಬ್ಬರಿಗೆ ಇಂಥ ಸೇವೆ ಕೊಡ ಹೊರಟರೂ , ಬ್ಯಾಂಕಿನ ಕೆಲಸಗಳಿಗೆ ಅಡಚಣೆ ಯಾಗಬಹುದು ಎನ್ನುವ ಮಾತು ಬ್ಯಾಂಕಿಂಗ್ ವಲಯದಲ್ಲಿ ಕೇಳಿಬರುತ್ತಿದೆ.
ಇಷ್ಟಾದರೂ, ಬ್ಯಾಂಕ್ ಸಿಬ್ಬಂದಿ ಹಿರಿಯನಾಗರಿಕರ ವಿಚಾರವಾಗಿ ಆರ್‌ಬಿಐ ನಿರ್ದೇಶನವನ್ನು ಪಾಲಿಸುತ್ತಿದ್ದಾರೆ. ಹಿರಿಯನಾಗರಿಕರು ಕೂಡ ಈ ಸೇವೆಯನ್ನು ದೊಡ್ಡಪ್ರಮಾಣದಲ್ಲಿ ಬಳಸಲು ಶುರು ಮಾಡಿದಾಗ, ಸಮಸ್ಯೆಯ ಆಳ, ಉದ್ದ ಮತ್ತು ಅಗಲದ ವ್ಯಾಪ್ತಿ ಗೊತ್ತಾಗುತ್ತದೆ.
ರಮಾನಂದ ಶರ್ಮಾ