Advertisement

ಮಕ್ಕಳನ್ನು ಮುಕ್ತವಾಗಿರಲು ಬಿಡಿ

09:38 AM Jan 19, 2019 | Team Udayavani |

ಚಿತ್ರದುರ್ಗ: ಮಕ್ಕಳ ಹಕ್ಕುಗಳು ಯಾವವು ಎನ್ನುವ ವಿಚಾರವನ್ನು ಪೋಷಕರು ಮತ್ತು ಮಕ್ಕಳಿಗೆ ತಿಳಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು. ಮಕ್ಕಳನ್ನು ನಾವು ರಕ್ಷಿಸುತ್ತೇವೆಂದು ಮನೆಯೊಳಗಡೆ ಕೂಡಿ ಹಾಕುವಂತಿಲ್ಲ. ಮಕ್ಕಳನ್ನು ಮುಕ್ತ ಇರಲು ಬಿಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಇಲ್ಲಿನ ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿಗೆ ಸಂಬಂಧಿಸಿದಂತೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಾಸ್ಟೆಲ್‌, ಶಾಲೆಗಳಲ್ಲಿ ಮಕ್ಕಳೊಂದಿಗೆ ಅನುಚಿತವಾಗಿ ವರ್ತಿಸಿ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದರು.

ಹಾಸ್ಟೆಲ್‌ಗ‌ಳಲ್ಲಿ ವಾರ್ಡನ್‌ಗಳು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುವುದು ಬೆಳಕಿಗೆ ಬರುತ್ತಿವೆ. ನಿಲಯ ಪಾಲಕರು, ಶಿಕ್ಷಕರು ಮಕ್ಕಳೊಂದಿಗೆ ಯಾವುದೇ ಕಾರಣಕ್ಕೂ ಅನುಚಿತವಾಗಿ ವರ್ತಿಸುವಂತಿಲ್ಲ. ಮಕ್ಕಳು ಮನೆಯಲ್ಲಿ ಹೇಗೆ ಇರುತ್ತವೆಯೋ ಅದೇ ರೀತಿ ಹಾಸ್ಟೆಲ್‌ ಗಳಲ್ಲೂ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಬಿ. ರೂಪಾನಾಯ್ಕ ಮಾತನಾಡಿ, ಮಕ್ಕಳ ಹಕ್ಕುಗಳ ಸುರಕ್ಷಾ ನೀತಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕು. ಮಕ್ಕಳ ಹಕ್ಕುಗಳ ಪಾಲನೆ ಮತ್ತು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಹಾಸ್ಟೆಲ್‌ಗ‌ಳು ಮನೆಗಳಂತಿರಬೇಕು. ಎಸ್ಸಿ, ಎಸ್ಟಿ ಇತರೆ ಹಾಸ್ಟೆಲ್‌ ಗಳು ನೋಡಲು ಹೈಟೆಕ್‌ ಕಟ್ಟಡಗಳಂತೆ ಕಾಣುತ್ತವೆ. ಆದರೆ ಒಳಗಡೆ ಯಾವುದು ಸರಿ ಇರುವುದಿಲ್ಲ. ಪೌಷ್ಟಿಕ ಆಹಾರ ನೀಡುವುದಿಲ್ಲ, ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತೆ, ಯಾವುದೇ ಮೂಲಭೂತ ಸೌಲಭ್ಯಗಳನ್ನು ನೀಡುತ್ತಿಲ್ಲ, ಬಿಸಿ ನೀರು ನೀಡುವುದಿಲ್ಲ, ಸ್ವಚ್ಛತೆ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

Advertisement

ಹೊಳಲ್ಕೆರೆ ತಾಲೂಕಿನ ರಾಮಗಿರಿ ಮೊರಾರ್ಜಿ ಶಾಲೆಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ ಇದ್ದ. ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದಲ್ಲೂ ಮಕ್ಕಳ ಸಂಖ್ಯೆ ಕಡಿಮೆ ಇದೆ. ಸರ್ಕಾರಿ ಲೆಕ್ಕದಲ್ಲಿರುವ ಮಕ್ಕಳು ಮಿಸ್ಸಿಂಗ್‌ ಆದರೆ, ಅಥವಾ ಎಲ್ಲಿ ಹೋದರು ಎನ್ನುವುದರ ತನಿಖೆ ಮಾಡಬೇಕು. ಮಕ್ಕಳು ಕಡಿಮೆ ದಾಖಲು ಹೊಂದಿದ್ದರೂ ಉಳಿಕೆ ಸೀಟುಗಳನ್ನು ಬೇರೆ ಮಕ್ಕಳಿಗೆ ಭರ್ತಿ ಮಾಡಿಕೊಳ್ಳುವುದಿಲ್ಲ. ಆದರೂ ಶೇ.ನೂರರಷ್ಟು ಮಕ್ಕಳಿಗೆ ಅನುದಾನ ಪಡೆಯಲಾಗುತ್ತಿದೆ. ಕೂಡಲೇ ತನಿಖೆ ಮಾಡಿ ವರದಿ ನೀಡುವುದರ ಜೊತೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

ಹಾಸ್ಟೆಲ್‌ಗ‌ಳಲ್ಲಿ ಮಕ್ಕಳ ಹಕ್ಕುಗಳ ಕುರಿತು ಕಾರ್ಯಾಗಾರ ನಡೆಯುತ್ತಿದ್ದರೂ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾಗಲಿ, ಆರು ತಾಲೂಕುಗಳಲ್ಲಿನ ತಾಲೂಕು ಕಲ್ಯಾಣಾಧಿಕಾರಿಗಳಾಗಲಿ ಕಾರ್ಯಾಗಾರಕ್ಕೆ ಬಂದಿಲ್ಲ. ಹಾಗಾದರೆ ಮಕ್ಕಳ ಹಕ್ಕುಗಳ ಅನುಷ್ಚಾನ ಮಾಡುವವರು ಯಾರು ಎಂದು ಪ್ರಶ್ನಿಸಿ ಇಷ್ಟೊಂದು ಊದಾಸೀನ ಬೇಡ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಕೆ. ಅರುಣ್‌ ಮಾತನಾಡಿ, ಪೊಲೀಸ್‌ ಇಲಾಖೆ ಹಾಸ್ಟೆಲ್‌ಗ‌ಳ ಮೇಲೆ ನಿಗಾ ಇಡಲಿದೆ. ಪೊಲೀಸ್‌ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತದೆ ಎಂದರು.

ಜಿಪಂ ಸಿಇಒ ಪಿ.ಎನ್‌.ರವೀಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಪ್ರಭಾಕರ್‌, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್, ಡಿಡಿ ರಾಜಾನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜೆ. ವೈಶಾಲಿ, ಎಸ್ಟಿ ಕಲ್ಯಾಣಾಧಿಕಾರಿ ಜೆ.ರಾಜು, ಅಲ್ಪಸಂಖ್ಯಾತ ಇಲಾಖೆ ರೇಖಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next