ಬೆಂಗಳೂರು: ನಾಯಕರ ಹಿಂದೆ ಸುತ್ತುವುದು ಅಥವಾ ಕೆಪಿಸಿಸಿ ಕಚೇರಿಗೆ ಅಲೆಯುವುದನ್ನು ಬಿಟ್ಟು ನಿಮ್ಮ ವಾರ್ಡ್‌ಗಳಲ್ಲಿ ಓಡಾಡಿ. ಜನರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಅಲ್ಲಿನ ಅಧಿಕಾರಿಗಳ ನೆರವಿನಿಂದ ಬಗೆಹರಿಸಿ. ಪಕ್ಷದಲ್ಲಿ ನಿಷ್ಕ್ರಿಯರಾಗಿರುವವರ ಬದಲಿಗೆ ಹೊಸಬರನ್ನು ನೇಮಿಸಿ. ಲೋಕಸಭೆ ಫಲಿತಾಂಶವನ್ನು ಪಕ್ಕಕ್ಕಿಟ್ಟು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ವಿವಿಧ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಬೆಂಗಳೂರಿನ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಮಾತ ನಾಡಿದ ಅವರು, ಯಾವುದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆ ಬರಬಹುದು. ಅದಕ್ಕೆ ಈಗಿನಿಂದಲೇ ಸಜ್ಜಾಗಬೇಕು. ಲೋಕಸಭಾ ಚುನಾ ವಣೆಯಲ್ಲಿ ಹಿನ್ನಡೆಯಾಗಿದೆ ಎಂದು ಆತಂಕಪಡಬೇಡಿ.
ಲೋಕಸಭಾ ಚುನಾವಣೆಯೇ ಬೇರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಬೇರೆ. ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಸಾಧಿಸಬೇಕಿದೆ ಎಂದು ಹೇಳಿದರು ಎನ್ನಲಾಗಿದೆ.
ನಿಮ್ಮ ಸ್ಥಾನ ಭದ್ರವಾಗಿರುವುದಿಲ್ಲ
ಬಿಬಿಎಂಪಿಯ 225 ವಾರ್ಡ್ ಗಳನ್ನು ಮಾಡಬೇಕು, ಐದು ಭಾಗ ಗಳನ್ನಾಗಿ ವಿಂಗಡಿಸಬೇಕು ಎನ್ನುವುದು ಸಹಿತ ಹಲವು ರೀತಿಯ ಚರ್ಚೆಗಳು ಅಥವಾ ವಾದಗಳಿವೆ.
ಹೈಕೋರ್ಟ್ ಸೂಚನೆಯಂತೆ ಚುನಾ ವಣೆ ನಡೆಸಲಾಗುವುದು. ಯಾವಾಗ ಬೇಕಾದರೂ ಚುನಾವಣೆ ಎದುರಾಗ ಬಹುದು. ವಾರ್ಡ್‌ವಾರು ಯಾರು ಉತ್ತಮ ಆಕಾಂಕ್ಷಿಗಳಿದ್ದಾರೋ ಅವರ ಪಟ್ಟಿ ಕೊಡಿ. ಮುಂದೆ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ನಾವು ತೀರ್ಮಾನಿಸುತ್ತೇವೆ. ಒಂದು ವೇಳೆ ವಾರ್ಡ್‌ವಾರು ನೀವು ಪಕ್ಷ ಸಂಘಟನೆ ಮಾಡದೆ ಹೋದರೆ, ನಿಮ್ಮ ಸ್ಥಾನಗಳು ಭದ್ರವಾಗಿರುವುದಿಲ್ಲ. ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತದೆ ಎಂದು ಎಚ್ಚರಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಸಕ್ರಿಯರಲ್ಲದವರ ಬದಲು
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಪಾಲಿಕೆ ಚುನಾವಣೆಗಾಗಿ ಶೀಘ್ರದಲ್ಲೇ ಪಕ್ಷವನ್ನು ಸಜ್ಜುಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಬ್ಲಾಕ್ ಅಧ್ಯಕ್ಷರ ಸಭೆ ನಡೆಸಲಾಗಿದ್ದು, ಯಾರು ಸಕ್ರಿಯರಾಗಿಲ್ಲವೋ ಅಂತಹವರನ್ನು ಬದಲಾಯಿಸಲು ತೀರ್ಮಾನಿಸಲಾಗಿದೆ. ಒಂದು ತಿಂಗಳ ಒಳಗೆ ಬದಲಾವಣೆಗೆ ಸಿದ್ಧತೆ ಮಾಡಲಾಗುವುದು ಎಂದು ಹೇಳಿದರು.