ಕಲಬುರಗಿ: ಬಯೋಮೆಟ್ರಿಕ್ ಹಾಜರಾತಿ ಮಾದರಿಯಲ್ಲಿ ರಜೆ ಪಡೆಯುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್, ಚಾಲಕರು ಹಾಗೂ ಸಿಬ್ಬಂದಿ ವರ್ಗದವರು ಇನ್ಮುಂದೆ ತಮ್ಮ ಮೊಬೈಲ್ದಿಂದಲೇ ರಜೆ ಮಂಜೂರಾತಿ ಪಡೆಯುವ ಪದ್ಧತಿ ಜಾರಿಗೆ ತರಲು ಸಂಸ್ಥೆ ಮುಂದಾಗಿದೆ.
ಹೊಸ ಪದ್ಧತಿ ಕಾರ್ಯಾನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಸ್ಥೆಯ ಇಲ್ಲಿನ ಕಲಬುರಗಿ ಘಟಕ-2ರಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿದ್ದು, ಈಗಾಗಲೇ ಘಟಕದ ಸಿಬ್ಬಂದಿಗಳ ಮಾಹಿತಿ ಹಾಗೂ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಲಾಗುತ್ತಿದೆ.
ಸಂಸ್ಥೆಯಲ್ಲಿ ಈ ಹಿಂದೆ ಬಸ್ ನಿರ್ವಾಹಕರು, ಚಾಲಕರು ರಜೆ ಕೋರಿ ಅಧಿಕಾರಿಗಳ ಮುಂದೆ ದಹನೀಯವಾಗಿ ನಿಂತು ರಜೆ ಮಂಜೂರಿ ಪಡೆಯುವುದು ಹಾಗೂ ಇದಕ್ಕೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಟ್ಟು ರಜೆ ನೀಡುವ ಪದ್ಧತಿಗೆ ತಿಲಾಂಜಲಿ ಹಾಡಲಾಗುತ್ತಿದೆ. 2013ರ ಸೆಪ್ಟೆಂಬರ್ ತಿಂಗಳಲ್ಲಿ ಬಯೋಮೆಟ್ರಿಕ್ ಯಂತ್ರ ಅಳವಡಿಸಿ ಅದರ ಮೂಲಕ ರಜೆ ನಿರ್ವಹಣೆ ಪದ್ಧತಿಯನ್ನು ಆಗಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎನ್. ಶಿವಮೂರ್ತಿ ಅವರ ಆಸಕ್ತಿ ಮೇರೆಗೆ ಜಾರಿ ತರಲಾಗಿತ್ತು. ಆದರೆ ಇದಕ್ಕೆ ಈಗ ಗುಡ್ ಬೈ ಹೇಳಲಾಗುತ್ತಿದೆ.
ರಾಷ್ಟ್ರದಲ್ಲೇ ಪ್ರಥಮ: ರಾಷ್ಟ್ರದಲ್ಲಿಯೇ ಪ್ರಥಮ ಹಾಗೂ ಮಾದರಿ ಎನ್ನುವ ಹಾಗೆ ಎನ್‌ಇಕೆಆರ್‌ಟಿಸಿಯಲ್ಲಿ ಬಯೋಮೆಟ್ರಿಕ್ ಪದ್ಧತಿ ಕಾರ್ಯಾನುಷ್ಠಾನಗೊಳಿಸಲಾಗಿತ್ತು. ಇದನ್ನು ಪುಣೆಯ ವೃತ್ತಿ ಸಂಸ್ಥೆಗೆ 2013ರಲ್ಲಿ ಐದು ವರ್ಷದ ಗುತ್ತಿಗೆ ನೀಡಲಾಗಿತ್ತು. ಈಗ ಐದು ವರ್ಷದ ಗುತ್ತಿಗೆ ಮುಗಿದಿದ್ದರಿಂದ ಅವರಿಗೆ ಗುತ್ತಿಗೆ ಮುಂದುವರಿಸದೇ ನಿಗಮದಿಂದ ಹೊಸ್ ತಂತ್ರ ಮೊಬೈಲ್ದಿಂದ ನಿರ್ವಹಿಸುವ ವ್ಯವಸ್ಥೆ ಕಾರ್ಯಾನುಷ್ಠಾನಕ್ಕೆ ಮುಂದಾಗಲಾಗಿದೆ.
ಗುತ್ತಿಗೆ ರದ್ದತಿ ಏಕೆ?: ಪುಣೆಯ ವೃತ್ತಿ ಸಂಸ್ಥೆಗೆ ನೀಡಲಾಗಿರುವ ಎನ್‌ಇಕೆಎಸ್‌ಆರ್‌ಟಿಸಿ ನೌಕರರ ರಜೆ ನಿರ್ವಹಣಾ ಗುತ್ತಿಗೆಯನ್ನು ಈಗಲೂ ಸಂಸ್ಥೆಗೆ ಗುತ್ತಿಗೆ ಮುಂದುವರಿಸಬಹುದಿತ್ತು. ಆದರೆ ನಿರ್ವಹಣೆ ವೆಚ್ಚ ವೃತ್ತಿ ಸಂಸ್ಥೆ ಈಗ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸಿರುವುದರಿಂದ ಸಾರಿಗೆ ಸಂಸ್ಥೆ ಮೇಲೆ ಭಾರಿ ಆರ್ಥಿಕ ಹೊರೆ ಬೀಳುತ್ತಿರುವುದರಿಂದ ಗುತ್ತಿಗೆಯಿಂದ ಹಿಂದೆ ಸರಿಯಲಾಗಿದೆ. ಹೀಗಾಗಿ ಹೊಸ ಪದ್ಧತಿಗೆ ನಿರ್ಧರಿಸಲಾಗಿದೆ.
ಕುಳಿತ್ತಲ್ಲಿಂದಲೇ ರಜೆ: ಈಗಿನ ಪದ್ಧತಿಯಲ್ಲಿ ಡಿಪೋಗೆ ಬಂದೇ ಬಯೋಮೆಟ್ರಿಕ್‌ನಲ್ಲಿ ತಮ್ಮ ಬೆರಳು ಒತ್ತಿ ಹೆಸರು ಹಾಗೂ ರಜೆಯ ವಿಧಗಳ ಕುರಿತಾಗಿ ಮಾಹಿತಿ ಸಲ್ಲಿಸದ ನಂತರವಷ್ಟೇ ರಜೆ ಪಡೆಯಬಹುದಾಗಿರುತ್ತದೆ. ಆದರೆ ಮೊಬೈಲ್ ಮೂಲಕ ರಜೆ ಪಡೆಯುವ ವಿನೂತನ ಪದ್ಧತಿಯಡಿ ಸಾರಿಗೆ ನೌಕರರು ಕುಳಿತ್ತಲ್ಲೇ ತಮ್ಮ ಮೊಬೈಲ್ದಿಂದ ಸಂದೇಶವೊಂದು ಕಳುಹಿಸಿದರೆ ಸಾಕು. ರಜೆ ಮಂಜೂರಾತಿ ದೊರಕಿದ ಸಂದೇಶ ಬರುತ್ತದೆ. ರಜೆ ಇದ್ದಲ್ಲಿ ಮಾತ್ರ ಮಂಜೂರಾತಿ ದೊರಕುತ್ತದೆ. ಬಹು ಮುಖ್ಯವಾಗಿ ಒಂದೇ ದಿನ ಶೇ.10ರಕ್ಕಿಂತ ಹೆಚ್ಚಿನ ನೌಕರರು ರಜೆ ಪಡೆಯುವಂತಿಲ್ಲ. ಆ ದಿನ ಬೆಳಗ್ಗೆಯಿಂದ ಬಂದ ರಜೆ ಸಂದೇಶಗಳನ್ನು ಅವಲೋಕಿಸಿ ಸಂಜೆ ಮಂಜೂರಾತಿ ನೀಡುವ ಪದ್ಧತಿ ಹೊಸದರಲ್ಲಿ ಅಡಕಗೊಳಿಸಲು ಉದ್ದೇಶಿಸಲಾಗಿದೆ.
ಎನ್‌ಇಕೆಆರ್‌ಟಿಸಿ ವ್ಯಾಪ್ತಿಯಲ್ಲಿ 52 ಸಾರಿಗೆ ನಿಯಂತ್ರಣಾ ಘಟಕಗಳಿವೆ. ಈಗ ಕಲಬುರಗಿ ಘಟಕ 2ರಲ್ಲಿ ಯಶಸ್ವಿಯಾಗಿ ಕಾರ್ಯಾನುಷ್ಠಾನಗೊಂಡ ನಂತರ ಹಂತ-ಹಂತವಾಗಿ ಉಳಿದ ಘಟಕಗಳಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸಾರಿಗೆ ನೌಕರರಲ್ಲದೇ ನೌಕರ ಕುಟುಂಬ ವರ್ಗದವರೂ ನೌಕರರ ಮೊಬೈಲ್ ಬಳಸಿ ರಜೆ ಮಂಜೂರಾತಿ ಪಡೆಯಲು ಅವಕಾಶವಿದೆ.
•ಹಣಮಂತರಾವ ಭೈರಾಮಡಗಿ