ಕೋಲಾರ: ಸರ್ಕಾರಿ ಶಾಲೆಗಳಲ್ಲಿ ವಿವಿಧ ಕಂಪನಿ ಹಾಗೂ ದಾನಿಗಳ ನೆರವಿನಿಂದ ಹೈಟೆಕ್ ಸ್ಪರ್ಶದೊಂದಿಗೆ ಕಲಿಕಾ ಸೌಲಭ್ಯ ಒದಗಿಸಲಾಗಿದ್ದು, ಖಾಸಗಿ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲು ಮಾಡಿ ಎಂದು ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಮನವಿ ಮಾಡಿದರು.
ಅರಾಭಿಕೊತ್ತನೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದಾಖಲಾತಿ ಅಭಿಯಾನ ನಡೆಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ಎಸ್ಸೆಸ್ಸೆಲ್ಸಿ ಫಲಿತಾಂಶವೇ ಸಾಕ್ಷಿ. ಜಿಲ್ಲೆಯಲ್ಲಿ 26 ಸರ್ಕಾರಿ ಪ್ರೌಢಶಾಲೆಗಳಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಹೇಳಿದರು.
ಸಾವಿರಾರು ರೂ. ಡೊನೇಷನ್ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸುವ ಆಲೋಚನೆ ಕೈಡಿ, ಸರ್ಕಾರ ಉಚಿತ ಶಿಕ್ಷಣ ನೀಡಲು ಕ್ರಮವಹಿಸಿದೆ, ಮಕ್ಕಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಶೂ, ಬಿಸಿಯೂಟ, ಕ್ಷೀರಭಾಗ್ಯ ಮತ್ತಿತರ ಸೌಲಭ್ಯ ನೀಡಿದ್ದು, ಇದರ ಜತೆಗೆ ದಾನಿಗಳಿಂದ ಮಕ್ಕಳಿಗೆ ಉಚಿತ ನೋಟ್ಪುಸ್ತಕ, ಸಮವಸ್ತ್ರ, ಕಲಿಕಾ ಸಾಮಗ್ರಿಗಳನ್ನು ಕೊಡಿಸುವ ಪ್ರಯತ್ನದಲ್ಲಿಯೂ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಸ್ಮಾರ್ಟ್ ಕ್ಲಾಸ್ ಸೌಲಭ್ಯ: ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ದಾನಿಗಳ ನೆರವನಿಂದ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. 80ಕ್ಕೂ ಹೆಚ್ಚು ಲೈವ್ ವಿಜ್ಞಾನ ಸಲಕರಣೆಗಳಿರುವ ಸುಸಜ್ಜಿತ ಪ್ರಯೋಗಾಲಯ ಇದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಶಾಲೆಯಲ್ಲಿ ಸಮಾಜವಿಜ್ಞಾನ ಪ್ರಯೋಗಾಲಯ ಆರಂಭಿಸಿದ್ದೇವೆ, ಮಕ್ಕಳಿಗೆ ಕುಡಿಯಲು ಮತ್ತು ಅಡುಗೆಗೂ ಫಿಲ್ಟರ್ ನೀರನ್ನೇ ಬಳಸಲಾಗುತ್ತಿದೆ ಎಂದು ತಿಳಿಸಿದರು. ಮಕ್ಕಳಲ್ಲಿ ಕ್ರೀಡಾಸಕ್ತಿ, ಸಾಂಸ್ಕೃತಿಕ, ಸಾಮಾನ್ಯ ಜ್ಞಾನ ವೃದ್ದಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಮಕ್ಕಳ ಸುರಕ್ಷತೆಗೆ ಶಾಲೆಗೆ ಸುಸಜ್ಜಿತ ಕಾಂಪೌಂಡ್, ತಂತಿ ಬೇಲಿ ಸೌಲಭ್ಯವೂ ಇದೆ ಎಂದು ತಿಳಿಸಿದರು.
ಆಂಗ್ಲ, ಕನ್ನಡ ಮಾಧ್ಯಮ: ಶಾಲೆಯಲ್ಲಿ ಎಲ್ಲಾ ಪಠ್ಯ ವಿಷಯಗಳಿಗೂ ನುರಿತ ಅನುಭವಿ ಶಿಕ್ಷಕರಿದ್ದು, ಮಕ್ಕಳ ಕಲಿಕಾ ಕಾರ್ಯಕ್ಕೆ ನಿರಂತರವಾಗಿ ಒತ್ತು ನೀಡುವ ಮೂಲಕ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗೆ ಸೇರಿಸಿ: ಶಾಲೆಯಲ್ಲಿ ಆಂಗ್ಲಮಾಧ್ಯಮ ಮತ್ತು ಕನ್ನಡ ಮಾಧ್ಯಮಗಳೆರಡೂ ಇದ್ದು, ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಆಂಗ್ಲ ಮಾಧ್ಯಮದಲ್ಲಿ ಶೇ.100 ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಪೋಷಕರು ಖಾಸಗಿ ಶಾಲೆಗೆ ಸೇರಿಸಿ ಸಾವಿರಾರು ರೂ. ಹಣ ಕಳೆದುಕೊಳ್ಳದೇ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಗುಣಮಟ್ಟದ ಶಿಕ್ಷಣ ಪಡೆಯಲು ಸಹಕರಿಸಿ ಎಂದು ಕೋರಿದರು.
ಅರಾಭಿಕೊತ್ತನೂರು, ಚಿಕ್ಕಅಯ್ಯೂರು, ವೆಂಕಟಾಪುರ, ಕೆಂದಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪೋಷಕರಿಗೆ ಶಾಲೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮನವರಿಕೆ ಮಾಡಿಕೊಡಲಾಯಿತು. ಎಸ್‌ಡಿಎಂಸಿ ಸದಸ್ಯೆ ಪಾರ್ವತಿ, ಶಾಲೆಯ ಶಿಕ್ಷಕರಾದ ಭವಾನಿ, ಸಿ.ಎಲ್.ಶ್ರೀನಿವಾಸಲು, ಸುಗುಣಾ, ವೆಂಕಟರೆಡ್ಡಿ, ಡಿ.ಚಂದ್ರಶೇಖರ್, ನೇತ್ರಾವತಿ, ದಾಕ್ಷಾಯಿಣಮ್ಮ ಮತ್ತಿತರರಿದ್ದರು.