ಚಿಂತಾಮಣಿ: ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಪರಿಶಿಷ್ಟರ ವಿರೋಧಿ ಆಗಿದ್ದು, ಕೂಡಲೇ ಸಂಪುಟದಿಂದ ಕೈಬಿಡಬೇಕು ಹಾಗೂ ನ್ಯಾ.ಎ.ಜೆ. ಸದಾಶಿವ ಆಯೋಗ ಸಲ್ಲಿಸಿದ ವರದಿ ಅಧಿವೇಶನದಲ್ಲಿ ಅಂಗೀಕರಿಸಲು ಒತ್ತಾಯಿಸಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟಿಸಿತು.
ಈ ವೇಳೆ ಉಪವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ಡಿ.ಹನುಮಂತ ರಾಯಪ್ಪ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಈ ವೇಳೆ ದಂಡೋರ ಜಿಲ್ಲಾಧ್ಯಕ್ಷ ಎಂ.ವಿ.ರಾಮಪ್ಪ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡದವರಿಗೆ ಸಂವಿಧಾನಾತ್ಮಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ಎಲ್ಲಾ ರಂಗದಲ್ಲೂ ಸಮಾನ ಅವಕಾಶ ಒದಗಿಸಬೇಕು, ಪರಿಶಿಷ್ಟ ಜಾತಿಯಲ್ಲಿ ನೂರ ಒಂದು ಜಾತಿಗಳಿವೆ, ರಾಜಕೀಯ, ಶೈಕ್ಷಣಿಕವಾಗಿ ಸಮಾನ ಹಕ್ಕುಗಳು ಬರಬೇಕು ಎಂದು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ 2012ರಲ್ಲಿ ಸಲ್ಲಿಕೆ ಆಗಿದೆ, ಇದುವರೆಗೂ ಜಾರಿ ಮಾಡದೆ ಆಡಳಿತ ಸರ್ಕಾರಗಳು ಮೀನಮೇಷ ಎಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಲಾಭ ಪಡೆಯುತ್ತಿರುವ ಕೆಲವು ಸಚಿವರು, ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವಹೇಳನಕಾರಿ ಹೇಳಿಕೆ ನೀಡಿ ಸರ್ಕಾರ ಮತ್ತು ಸಾರ್ವಜನಿಕವಾಗಿ ಪರಿಶಿಷ್ಟರನ್ನು ಅವಮಾನ ಮಾಡುತ್ತಿದ್ದಾರೆ. ಸದಾಶಿವ ಆಯೋಗದ ವರದಿ ಅಂಗೀಕಾರ ಮಾಡಲು ಅಡ್ಡಿ ಮಾಡುತ್ತಿದ್ದಾರೆ ಎಂದು ಹೇಳಿದರು. ಇವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡದೇ ಇದ್ದರೆ ಮುಂದಿನ ದಿನಗಳಲ್ಲಿ ಮಾದಿಗ ದಂಡೋರ ರಾಜ್ಯಾದ್ಯಂತ ಹೋರಾಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಪಿ.ಎಂ.ನರಸಿಂಹ ಯ್ಯ, ತಾಲೂಕಾಧ್ಯಕ್ಷ ಕೆ.ಗುರುಪ್ರಸಾದ್, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲೂಕು ಉಪಾಧ್ಯಕ್ಷ ಸೂಲದೇನಹಳ್ಳಿ ವೆಂಕಟಾರಾಯಪ್ಪ, ಅಫರ್ ಪಾಷ, ಕೃಷ್ಣಪ್ಪ, ಮುನಿಸ್ವಾಮಿ, ರಮೇಶ್ ಕೊತ್ತೂರು ಇತರರಿದ್ದರು.