ಸರಿಸುಮಾರು ಮೂರು ತಿಂಗಳ ಕಾಲ ಏಳು ಹಂತದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಮಾಮೂಲಿಯಂತೆ ಒಂದಷ್ಟು ಅಪಸ್ವರಗಳು, ಆಕ್ಷೇಪಗಳು ಕೇಳಿ ಬಂದಿವೆ. ಏ.11ರಿಂದ ತೊಡಗಿ ಮೇ 19ರ ತನಕ ಮತದಾನ ನಡೆಯಲಿದೆ. ಈ ಸುದೀರ್ಘ ಅವಧಿಯ ನಡುವೆ ಹಬ್ಬಹರಿದಿನಗಳು, ಪರೀಕ್ಷೆ, ರಜೆಗಳು ಇತ್ಯಾದಿ ಬರುವುದು ಸಹಜ. ಇವುಗಳೆಲ್ಲವನ್ನು ಸರಿಹೊಂದಿಸಿಕೊಂಡು ದಿನಾಂಕ ನಿಗದಿಗೊಳಿಸುವುದು ಕಷ್ಟಸಾಧ್ಯ. ಅದಾಗ್ಯೂ ಚುನಾವಣಾ ಆಯೋಗ ಸಾಧ್ಯವಾದಷ್ಟು ಚುನಾವಣೆ ದಿನಾಂಕಗಳನ್ನು ಎಲ್ಲರಿಗೂ ಅನುಕೂಲಕರವಾಗುವ ರೀತಿಯಲ್ಲಿ ನಿಗದಿ ಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಚುನಾವಣೆ ಅವಧಿಯಲ್ಲೇ ರಮ್ಜಾನ್ ಉಪವಾಸವೂ ಬರುತ್ತದೆ. ಇದಕ್ಕೆ ಕೆಲವು ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಾರದೆಂಬ ಕಾರಣಕ್ಕೆ ರಮ್ಜಾನ್ ರೋಜಾ ಸಮಯದಲ್ಲಿ ಚುನಾವಣೆ ನಡೆಸಲಾಗುತ್ತಿದೆ ಎಂದಿರುವುದು ತರ್ಕ ರಹಿತ ಆರೋಪ. ರಮ್ಜಾನ್ ಉಪವಾಸ ಒಂದು ತಿಂಗಳ ಕಾಲ ಇರುತ್ತದೆ. ಅಷ್ಟು ಸಮಯ ಚುನಾವಣೆ ಪ್ರಕ್ರಿಯೆಯನ್ನು ಮುಂದೂಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ವಿವೇಚ ನಾಯುಕ್ತ ವಾದ ಹೇಳಿಕೆ ನೀಡಿದ್ದಾರೆ. ರಮ್ಜಾನ್ ಮಾಸದಲ್ಲಿ ಚುನಾವಣೆ ನಡೆಯುವುದನ್ನು ರಾಜಕೀಯ ಪಕ್ಷಗಳು ವಿವಾದ ಮಾಡಬಾರದು. ರಮ್ಜಾನ್ ಉಪವಾಸ ಮಾಡುತ್ತಲೇ ಮುಸ್ಲಿಮರು ತಮ್ಮ ಎಂದಿನ ಕೆಲಸಗಳನ್ನು ಮಾಡುತ್ತಾರೆ. ಮತದಾನ ಮಾಡುವುದು ಅವರಿಗೆ ಹೊರೆಯಾಗುವುದಿಲ್ಲ ಎಂದಿದ್ದಾರೆ ಓವೈಸಿ.
ಇನ್ನು ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮತದಾನದ ದಿನವನ್ನೂ ಸೇರಿಸಿಕೊಂಡು ಸರಣಿ ರಜೆಗಳು ಬರುವುದರಿಂದ ಮತದಾನದ ಪ್ರಮಾಣ ಕಡಿಮೆಯಾಗುವ ಆತಂಕವಿದೆ. ಕರ್ನಾಟಕದಲ್ಲಿ ಏ. 18ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಇದರ ಹಿಂದುಮುಂದಿನ ದಿನಗಳಲ್ಲಿ ರಜೆಯಿರುವುದರಿಂದ ನಿರ್ದಿಷ್ಟವಾಗಿ ನಗರ ಭಾಗದ ಮತದಾರರ ಮತದಾನದಿಂದ ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತದೆ. ಹಿಂದಿನ ಚುನಾವಣೆ ಸಂದರ್ಭಗಳಲ್ಲಿ ಹೀಗಾಗಿರುವುದನ್ನು ನೋಡಿದ್ದೇವೆ. ನಮ್ಮ ದೇಶದಲ್ಲಿ ಮತದಾನ ವನ್ನು ಕಡ್ಡಾಯಮಾಡಲಾಗಿಲ್ಲ ನಿಜ. ಆದರೆ ಮತದಾನ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯ. ಈ ಕರ್ತವ್ಯಚ್ಯುತಿ ಎಸಗಿದ ಬಳಿಕ ಸರಕಾರ ಸರಿ ಇಲ್ಲ, ವ್ಯವಸ್ಥೆಯಲ್ಲಿ ಲೋಪವಿದೆ ಎಂದೆಲ್ಲ ದೂರುವ ನೈತಿಕತೆಯೂ ನಮಗಿರುವುದಿಲ್ಲ. ಹೀಗಿರುವಾಗ ಎಷ್ಟೇ ರಜೆ ಬಂದರೂ ಮತದಾನ ಮಾಡಲೇ ಬೇಕು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಇದೇ ಮೊದಲ ಬಾರಿ ಚುನಾವಣಾ ಆಯೋಗ ಸಾಮಾಜಿಕ ಮಾಧ್ಯಮ ಗಳ ಮೂಲಕ ನಡೆಯುವ ಪ್ರಚಾರಕ್ಕೆ ಕಟ್ಟುನಿಟ್ಟಿನ ನಿಯಮಾ ವಳಿಗಳನ್ನು ರಚಿಸಿರು ವುದು ಸ್ವಾಗತಾರ್ಹ ಬೆಳವಣಿಗೆ.ಡಿಜಿಟಲ್ ಕ್ರಾಂತಿಯ ಪರಿಣಾಮ ವಾಗಿ ಸಾಮಾಜಿಕ ಮಾಧ್ಯಮಗಳು ಬಹಳ ಜನಪ್ರಿಯಗೊಂಡಿವೆ. 2014ರ ಲೋಕಸಭಾ ಚುನಾವಣೆಯಲ್ಲೇ ಸಾಮಾಜಿಕ ಮಾಧ್ಯಮ ಫಲಿತಾಂಶ ನಿರ್ಧರಿಸುವಲ್ಲಿ ತನ್ನ ಅಗಾಧ ಸಾಧ್ಯತೆಯನ್ನು ತೋರಿಸಿತ್ತು. ಈಗ ಚುನಾ ವಣೆ ಸಮರ ನಡೆಯುವುದೇ ಸಾಮಾಜಿಕ ಮಾಧ್ಯಮಗಳಲ್ಲಿ. ಹೀಗಾಗಿ ಈ ಸಶಕ್ತ ಮಾಧ್ಯಮಕ್ಕೆ ಒಂದಿಷ್ಟು ಲಗಾಮು ಹಾಕುವುದು ಅನಿವಾರ್ಯವೂ ಆಗಿತ್ತು.
ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆದುಕೊಳ್ಳಬೇಕು. ಪ್ರಮಾಣೀಕರಿಸದ ಜಾಹೀರಾತು ಗಳನ್ನು ಗೂಗಲ್, ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಪ್ರಕಟಿಸ ಬಾರದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಪ್ರಚಾರಕ್ಕೆ ವ್ಯಯಿ ಸಿದ ಹಣವೂ ಅಭ್ಯರ್ಥಿಯ ಖರ್ಚಿನ ಲೆಕ್ಕಕ್ಕೆ ಸೇರುತ್ತದೆ ಎನ್ನುವುದು ಉತ್ತಮ ವಾದ ನಿಯಮ. ಇದರಿಂದ ಸೋಷಿಯಲ್ ಮೀಡಿಯಾಗಳಲ್ಲಿ ಯದ್ವಾತದ್ವಾ ಜಾಹೀರಾತು ನೀಡುವ ಪ್ರವೃತ್ತಿಗೆ ಕಡಿವಾಣ ಬೀಳಲಿದೆ. ಆದರೆ ಸಾಮಾಜಿಕ ಮಾಧ್ಯಮಗಳನ್ನು ಉಲ್ಲೇಖೀಸುವಾಗ ಚುನಾವಣಾ ಆಯೋಗ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸ್‌ಆ್ಯಪ್‌ಗೆ ತುಸು ವಿನಾಯಿತಿ ನೀಡಿರುವುದು ಆಶ್ಚರ್ಯವುಂಟು ಮಾಡಿದೆ. ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರು ವಾಟ್ಸ್‌ಆ್ಯಪ್ ಬಳಸುತ್ತಿದ್ದಾರೆ ಮತ್ತು ಅತ್ಯಧಿಕ ಸಂದೇಶಗಳು ವಿನಿಮಯವಾಗುವುದು ಈ ಮಾಧ್ಯಮದ ಮೂಲಕ. ಹೀಗಾಗಿ ವಾಟ್ಸ್‌ಆ್ಯಪ್‌ಗ್ೂ ಈ ನಿಯಮಗಳನ್ನು ಅನ್ವಯಿಸಿದ್ದರೆ ಇನ್ನೂ ಪರಿಣಾಮಕಾರಿಯಾಗುತ್ತಿತ್ತು.
ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳನ್ನು ಮಾಧ್ಯಮ ಪ್ರಮಾಣಪತ್ರ ಮತ್ತು ಕಣ್ಗಾವಲು ಸಮಿತಿಯ ವ್ಯಾಪ್ತಿಗೆ ತಂದಿರುವುದರಿಂದ ಇವುಗಳ ಮೇಲೆ ನಿಗಾ ಇಡುವ ಉತ್ತರದಾಯಿ ವ್ಯವಸ್ಥೆಯೊಂದು ಇದೆ ಎಂದಾಗಿದೆ. ಹಾಗೆಂದು ಸಾಮಾಜಿಕ ಮಾಧ್ಯಮಗಳಿಗೆ ಲಗಾಮು ಹಾಕುವ ನಿಯಮಾವಳಿಗಳು ಜನಸಾಮಾನ್ಯರಿಗೆ ಕಿರಿಕಿರಿ ಎಂದೆನಿಸಬಾರದು.