Advertisement

ಹೋಮ-ಹವನ ಬಿಟ್ಟು ಬರ ನಿರ್ವಹಣೆಗೆ ಆದ್ಯತೆ ನೀಡಿ: ಶೆಟ್ಟರ್‌

11:16 PM May 07, 2019 | Team Udayavani |

ಹುಬ್ಬಳ್ಳಿ: “ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರನ ಗೆಲುವಿಗಾಗಿ ಗುಡಿ-ಮಠ ಭೇಟಿ ಹಾಗೂ ಹೋಮ-ಹವನ ಮಾಡುವುದನ್ನು ಬಿಟ್ಟು ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡಲಿ’ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಈಗಾಗಲೇ ಜನರು ಮತದಾನ ಮಾಡಿದ್ದಾರೆ.

Advertisement

ಎಲ್ಲರ ಮತಗಳು ಮತಯಂತ್ರ ಸೇರಿವೆ. ಈಗ ಗುಡಿ-ಮಠ ಅಡ್ಡಾಡಿದರೆ ಮತಗಳು ಬದಲಾಗುತ್ತವೆಯೇ’ ಎಂದು ಪ್ರಶ್ನಿಸಿದರು. ಸಿಎಂ ರೈತರಿಗಾಗಿ ಸ್ವಲ್ಪ ಸಮಯ ನೀಡಲಿ. ಅವರ ಸಮಸ್ಯೆಗಳಿಗೆ ಸ್ಪಂದಿಸಲಿ. ಉತ್ತರ ಕರ್ನಾಟಕದಲ್ಲಿ ಉದ್ಯೋಗವಿಲ್ಲದೆ ಜನರು ವಲಸೆ ಹೋಗುತ್ತಿದ್ದಾರೆ. ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.

ಇದಕ್ಕೆಲ್ಲ ಜವಾಬ್ದಾರಿ ಯಾರು ಎಂಬುದೇ ಗೊತ್ತಾಗುತ್ತಿಲ್ಲ. ಜನರು ತೊಂದರೆ ಅನುಭವಿಸುತ್ತಿದ್ದರೆ, ಸಿಎಂ ಕುಮಾರಸ್ವಾಮಿ ತಮ್ಮ ಪುತ್ರ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕೆಂದು ಮಠ-ಮಂದಿರಗಳಿಗೆ ಓಡಾಡುತ್ತಿದ್ದಾರೆ. ಸರಕಾರ ಜನರ ಪಾಲಿಗೆ ಇದ್ದೂ ಸತ್ತಂತಾಗಿದೆ. ಮಗ ಚುನಾವಣೆಯಲ್ಲಿ ಗೆಲ್ತಾನೋ ಇಲ್ಲವೋ? ಸಿದ್ದರಾಮಯ್ಯ ಸರಕಾರ ಬೀಳಿಸಲು ಏನು ತಂತ್ರ ರೂಪಿಸುತ್ತಿದ್ದಾರೆ ಎಂಬುದೇ ಕುಮಾರಸ್ವಾಮಿಗೆ ಚಿಂತೆಯಾಗಿದೆ ಎಂದರು.

ಈಗ ಏನು ಹೇಳುತ್ತಾರೆ ವಿನಯ?: ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತರೆಲ್ಲ ಒಂದಾಗಿ ಲಿಂಗಾಯತ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು ಪ್ರಚಾರ ಮಾಡಿದ ಕಾಂಗ್ರೆಸ್‌ ಮುಖಂಡ ವಿನಯ ಕುಲಕರ್ಣಿ ಕುಂದಗೋಳ ಕ್ಷೇತ್ರದಲ್ಲಿ ಲಿಂಗಾಯತ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಲಿಂಗಾಯತರಿಗೆ ಕೇಳುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

ಕಾಂಗ್ರೆಸ್‌ ಮುಖಂಡರು ಜಾತಿ ರಾಜಕಾರಣ ಮಾಡಿದ್ದಾರೆ. ಲಿಂಗಾಯತರ ಮತ ಕೇಳಿದ್ದಾರೆ. ಆದರೆ ಬಿಜೆಪಿ ಜಾತಿಯಾಧಾರಿತ ಮತಯಾಚನೆ ಮಾಡಿಲ್ಲ. ರಾಷ್ಟ್ರೀಯತೆ ಗಮನದಲ್ಲಿಟ್ಟುಕೊಂಡು ಎಲ್ಲ ಜಾತಿಯವರ ಮತಗಳನ್ನು ಯಾಚಿಸಿದೆ ಎಂದರು.

Advertisement

ವ್ಯವಸ್ಥಿತ ಪ್ರಚಾರ: ಕುಂದಗೋಳದಲ್ಲಿ ಬುಧವಾರದಿಂದ ಇನ್ನಷ್ಟು ವ್ಯವಸ್ಥಿತವಾಗಿ ಪ್ರಚಾರ ನಡೆಸಲಾಗುವುದು. ಮಾಜಿ ಸಚಿವ ಶ್ರೀರಾಮುಲು ಆಗಮಿಸಿ ಪ್ರಚಾರ ಕೈಗೊಳ್ಳಲಿದ್ದಾರೆ. ಅಲ್ಲದೇ ಪಕ್ಷದ ಶಾಸಕರು ಹಾಗೂ ಮುಖಂಡರು ಪ್ರಚಾರದಲ್ಲಿ ತೊಡಗಲಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಲಿದ್ದೇವೆ ಎಂದರು.

ಯಾರೂ ಆಸಕ್ತಿ ತೋರುತ್ತಿಲ್ಲ: ನಮ್ಮ ಭಾಗದಲ್ಲಿ ನೀರಿನ ಸೌಲಭ್ಯ ಒದಗಿಸುವ ದಿಸೆಯಲ್ಲಿ 10-15 ಕೊಳವೆ ಬಾವಿಗಳನ್ನು ಕೊರೆಸುವಂತೆ 15 ದಿನಗಳ ಹಿಂದೆಯೇ ಜಿಲ್ಲಾಧಿಕಾರಿಗೆ, ಪಾಲಿಕೆ ಆಯುಕ್ತರಿಗೆ, ಜಲಮಂಡಳಿ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ. ಅದರೆ ಒಂದೂ ಕೊಳವೆಬಾವಿ ಕೊರೆಸಲು ಮುಂದಾಗಿಲ್ಲ. ಶಾಸಕರ ಅಧ್ಯಕ್ಷತೆಯ ಟಾಸ್ಕ್ಫೋರ್ಸ್‌ಗೆ ಹಣ ಬಿಡುಗಡೆ ಮಾಡಿಲ್ಲ.

ಪ್ರಗತಿ ಪರಿಶೀಲನಾ ಸಭೆ ಕರೆದಿಲ್ಲ. ಚುನಾವಣಾ ನೀತಿಸಂಹಿತೆ ಕಾರಣ ನೀಡುತ್ತಿದ್ದಾರೆ. ಬರದ ಸಂದರ್ಭದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳಲು, ಸಭೆ ನಡೆಸಲು, ಹಣ ಬಿಡುಗಡೆ ಮಾಡಲು ನೀತಿ ಸಂಹಿತೆಯಲ್ಲಿ ನಿರ್ಬಂಧವಿಲ್ಲ. ಇಲ್ಲಸಲ್ಲದ ಸಬೂಬು ಹೇಳಿಕೊಂಡು ನಿರ್ಲಕ್ಷಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸುತ್ತಿಲ್ಲ. ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.

ಡಿ.ಕೆ. ಶಿವಕುಮಾರ ಅವರಿಗೆ ಸಾಮಾನ್ಯ ಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ. ಜಗದೀಶ ಶೆಟ್ಟರ ಅವರು ಸಿ.ಎಸ್‌. ಶಿವಳ್ಳಿ ಅವರನ್ನು ಹೊಗಳಿದ್ದಾರೆ ಎಂದು ಹೇಳಿದ್ದಾರೆ. ನಾನು ಶಿವಳ್ಳಿ ಅವರ ಒಳ್ಳೆಯ ಕಾರ್ಯಗಳನ್ನು ಶ್ಲಾಘಿಸಿದ್ದೇನೆ. ಒಬ್ಬ ವ್ಯಕ್ತಿ ಮೃತಪಟ್ಟಾಗ ಅವರು ಮಾಡಿದ ಸತ್ಕಾರ್ಯಗಳನ್ನು ಸ್ಮರಿಸುವುದು ಹಿಂದೂ ಸಂಸ್ಕೃತಿ. ಇದನ್ನು ಡಿ.ಕೆ. ಶಿವಕುಮಾರ ಅರಿಯಬೇಕು.
-ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next