ಪಣಂಬೂರು: ಪಣಂಬೂರು ತಣ್ಣೀರುಬಾವಿ ರಸ್ತೆಯಲ್ಲಿ ಕೃಷ್ಣಮೃಗದ ಚರ್ಮವನ್ನು ಹೊಂದಿದ್ದ ಇಬ್ಬರನ್ನು ಪಣಂಬೂರು ರೌಡಿ ನಿಗ್ರಹ ದಳ ಪೊಲೀಸರು ಹಾಗೂ ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ. ಇಂಡಿ ತಾಲೂಕು ನಿವಾಸಿಗಳಾದ ರಮೇಶ್ ಮಲ್ಲಪ್ಪ ಯಾದವಾಡ್ (51) ಹಾಗೂ ರಾಜು ಬಿರಾದಾರ್ (47) ಬಂಧಿತರು. ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ವಿವರ
ತಣ್ಣೀರು ಬಾವಿಯ ಬಳಿಯಲ್ಲಿ ಕಸಬಾ ಬೆಂಗ್ರೆ ಕಡೆಗೆ ಹೋಗುವ ಕುದುರೆ ಮುಖ ಜಂಕ್ಷನ್ ಬಳಿಯ ಮೋರಿ ಸಮೀಪ ಇಬ್ಬರು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಯಾವುದೋ ವಸ್ತುವನ್ನು ಹಿಡಿದುಕೊಂಡು ನಿಂತು ಕೊಂಡಿದ್ದರು. ಅವರು ಆ ದಾರಿಯಲ್ಲಿ ಬಂದ ಪೊಲೀಸ್ ಜೀಪನ್ನು ಕಂಡು ಚೀಲವನ್ನು ತೊರೆದು ಪರಾರಿ ಯಾಗಲೆತ್ನಿಸಿದ್ದರು. ಅನುಮಾನಗೊಂಡ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಕ್ಕಿಯ ನಡುವೆ ಹುದುಗಿಸಿದ್ದ ಕೃಷ್ಣಮೃಗದ ಚರ್ಮ ಪತ್ತೆಯಾಯಿತು.
ಮಂಗಳೂರು ನಗರ ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ್ ಆರ್. ಗೌಡ ನೇತೃತ್ವದ ರೌಡಿ ನಿಗ್ರಹ ದಳ, ಪಣಂಬೂರು ಠಾಣಾ ಧಿಕಾರಿ ಸತ್ಯನಾರಾಯಣ, ರೌಡಿ ನಿಗ್ರಹ ದಳದ ಎಎಸ್‌ಐ ಮಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಹಾಗೂ ಮಂಗಳೂರು ಅರಣ್ಯ ವಲಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗ ವಹಿಸಿದ್ದರು.