ಬೆಂಗಳೂರು: ನಿಯಮಿತ ವೇತನ ಬಿಡುಗಡೆಗೆ ಒತ್ತಾಯಿಸಿ ಬಿಬಿಎಂಪಿ ವ್ಯಾಪ್ತಿಯ ಶಾಲಾ-ಕಾಲೇಜುಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮಂಗಳವಾರ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ 10-12 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ನೂರಾರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ನಿಯಮಾವಳಿ ರೂಪಿಸಿ ಕಾಯಂಗೊಳಿಸುವಂತೆ ಹೈಕೋರ್ಟ್ ಸೂಚಿಸಿದ್ದರೂ, ಈ ಆದೇಶ ಪಾಲನೆ ಆಗುತ್ತಿಲ್ಲ. ಜತೆಗೆ ನಿಯಮಿತ ವೇತನವನ್ನೂ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಶಿಕ್ಷಕರ ಜೀವನ ನಿರ್ವಹಣೆ ಕಷ್ಟವಾಗಿದ್ದು, ಅಕ್ಷರಶಃ ಬೀದಿಗೆ ಬಂದಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಿಕ್ಷಕ ನಿಂಗರಾಜ್ ಸಿದ್ದೇಗೌಡ, ಸುಮಾರು ಮೂರು ತಿಂಗಳಿಂದ ವೇತನ ಬಿಡುಗಡೆ ಮಾಡಿಲ್ಲ. ಇದು ಈ ಸಲದ ಸಮಸ್ಯೆ ಅಲ್ಲ; ಪ್ರತಿ ಮೂರ್‍ನಾಲ್ಕು ತಿಂಗಳಿಗೊಮ್ಮೆ ಇದೇ ಗೋಳಾಗಿದೆ.
ಮರ್ಯಾದೆ ಬೀದಿಪಾಲಾಗುತ್ತಿರುವುದರಿಂದ ಮನನೊಂದು ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ಸೋಮವಾರ ಮತ್ತಿಬ್ಬರು ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೂ ಪಾಲಿಕೆಯ ಮನಸ್ಸು ಕರಗುತ್ತಿಲ್ಲ. ಅಲ್ಲದೆ ಶಾಲಾ-ಕಾಲೇಜುಗಳ ಶಿಕ್ಷಕರ ಹೊರಗುತ್ತಿಗೆ ಏಕ ವ್ಯಕ್ತಿಗೆ ನೀಡುತ್ತಿರುವ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ 78 ಪ್ರಾಥಮಿಕ, ತಲಾ 34 ಪ್ರೌಢ ಮತ್ತು ನರ್ಸರಿ ಶಾಲೆಗಳು, 14 ಪದವಿ ಪೂರ್ವ ಮತ್ತು 4 ಪದವಿ ಕಾಲೇಜುಗಳಿದ್ದು, ಇದರಲ್ಲಿ 480-490 ಶಿಕ್ಷಕರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಶೇಷ ನಿಯಮಾವಳಿ ರೂಪಿಸಿ, ಕಾಯಂಗೊಳಿಸಬೇಕು ಎಂದು ಹೈಕೋರ್ಟ್ 2016ರ ನವೆಂಬರ್‌ನಲ್ಲೇ ಆದೇಶಿಸಿದೆ. ಆದರೂ ಕಾಯಂಗೊಳಿಸುತ್ತಿಲ್ಲ ಎಂದು ದೂರಿದರು.