ದಾವಣಗೆರೆ: ಕೋವಿಡ್‌ನಿಂದಾಗಿ ಎರಡು ವರ್ಷ ಶಾಲೆಗಳಲ್ಲಿ ವ್ಯವಸ್ಥಿತ ಬೋಧನೆ ಹಾಗೂ ಕಲಿಕಾ ಪ್ರಕ್ರಿಯೆ ನಡೆಯದೆ ಉಂಟಾಗಿರುವ ಕಲಿಕಾ ಅಂತರ ಸರಿದೂಗಿಸಲು ಶಿಕ್ಷಣ ಇಲಾಖೆ, ಪ್ರಸಕ್ತ ವರ್ಷ ಕೈಗೊಂಡ “ಕಲಿಕಾ ಚೇತರಿಕೆ’ವಿಶೇಷ ಕಾರ್ಯಕ್ರಮ ಆರು ಜಿಲ್ಲೆ ಹೊರತುಪಡಿಸಿ, ಉಳಿದೆಡೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ.
ಈ ವರ್ಷವನ್ನು “ಕಲಿಕಾ ಚೇತರಿಕೆ’ ವರ್ಷ ವೆಂದು ಘೋಷಿಸಿದ್ದು ತರಗತಿ ಆರಂಭವಾಗಿ 4 ತಿಂಗಳುಗಳಾಗಿದ್ದು, ಕಾರ್ಯಕ್ರಮದ ಉಪಕ್ರಮಗಳ ಅನುಷ್ಠಾನ ಪರಿಶೀಲನೆಗಾಗಿ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಧಿಕಾರಿಗಳ ತಂಡ ಎಲ್ಲ ಶೈಕ್ಷಣಿಕ ಜಿಲ್ಲೆಗಳಿಗೆ ಭೇಟಿ ನೀಡಿದೆ. ಆಗ ಬಹುತೇಕ ಜಿಲ್ಲೆಗಳಲ್ಲಿ ಅನುಷ್ಠಾನವಾಗದಿರುವುದು ಗಮನಕ್ಕೆ ಬಂದಿದೆ. ಹಲವು ಜಿಲ್ಲೆಗಳಲ್ಲಿ ಇದಕ್ಕೋಸ್ಕರ ಸೂಚಿಸಿದ್ದ ಸಹಾಯವಾಣಿ ಯನ್ನೂ ಸರಿಯಾಗಿ ನಿರ್ವ ಹಿಸುತ್ತಿಲ್ಲ ಎಂಬ ಅಂಶವೂ ಬೆಳಕಿಗೆ ಬಂದಿದೆ ಎಂದು ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲಾ ಹಾಗೂ ಬ್ಲಾಕ್ ಹಂತದಲ್ಲಿ ಸೂಕ್ತ ದಾಖಲೆ ನಿರ್ವಹಿಸಬೇಕು. ಪ್ರತಿ 15 ದಿನಗಳಿ ಗೊಮ್ಮೆ ಸ್ವೀಕರಿಸುವ ಪ್ರಶ್ನೆಗಳಿಗೆ ಪರಿಹಾರ ನೀಡಿ, ಅವುಗಳನ್ನು ಡಯಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ನಿಗದಿತ ವೇಳೆ ಪ್ರಗತಿ ಪರಿಶೀಲನೆ ಸಭೆಗಳನ್ನು ನಡೆಸಬೇಕು. ಶಾಲೆಗಳಿಗೆ ನೇರ ಭೇಟಿ ನೀಡಿ ಕಲಿಕಾ ಚೇತರಿಕೆ ಉಪಕ್ರಮ ನಿರ್ವಹಣೆ ಪರಿಶೀಲಿಸಬೇಕು ಸಹಿತ ಹಲವು ಸೂಚನೆಗಳನ್ನು ಡಯಟ್ ಪ್ರಾಂಶುಪಾಲರು, ಉಪನಿರ್ದೇಶಕರಿಗೆ ನೀಡಲಾಗಿದೆ.
6 ಜಿಲ್ಲೆಗಳಲ್ಲಷ್ಟೇ ಉತ್ತಮ ನಿರ್ವಹಣೆ :
ಗದಗ, ದಾವಣಗೆರೆ, ಶಿವಮೊಗ್ಗ, ತುಮಕೂರು, ಹಾಸನ ಹಾಗೂ ಚಿಕ್ಕೋಡಿ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ತಕ್ಕ ಮಟ್ಟಿಗೆ ಉತ್ತಮ ರೀತಿಯಲ್ಲಿ ನಿರ್ವಹಿಸಲಾಗುತ್ತಿದೆ ಎಂಬ ಅಭಿಪ್ರಾಯ ಪರಿಶೀಲನೆಯಲ್ಲಿ ವ್ಯಕ್ತವಾಗಿದೆ.
“ಇಲ್ಲ’ಗಳ ಸುತ್ತ :
- ಸಿಆರ್‌ಪಿಗಳ ಪ್ರಗತಿ ಪರಿಶೀಲನ ಸಭೆ ಜಿಲ್ಲಾ ಹಂತದಲ್ಲಿ 15 ದಿನಗಳಿಗೊಮ್ಮೆ ನಡೆಯುತ್ತಿಲ್ಲ
- ತಾಲೂಕು ಹಂತದಲ್ಲಿ ಬಿಇಒ, ಬಿಆರ್‌ಸಿ ಗಳು ಹಾಗೂ ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು (ಆಡಳಿತ ಹಾಗೂ ಅಭಿ ವೃದ್ಧಿ) ಸರಿಯಾಗಿ ಸಭೆ ನಡೆಸುತ್ತಿಲ್ಲ.
- ಪ್ರೌಢಶಾಲೆಗಳಲ್ಲಿ ಕಲಿಕಾ ಚೇತರಿಕೆ ತರಗತಿ ಪ್ರಕ್ರಿಯೆ, ಕೃತಿ ಸಂಪುಟಗಳ ನಿರ್ವ ಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ.
- ದತ್ತು ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಭೇಟಿ ನೀಡಿದ ಕೆಲವರೂ ಸೂಕ್ತ ಅನುಪಾಲನೆ ಮಾಡುತ್ತಿಲ್ಲ
ಅಧಿಕಾರಿಗಳು, ಅನುಷ್ಠಾನಾಧಿಕಾರಿಗಳು, ಶಿಕ್ಷಕರು ಕಲಿಕಾ ಚೇತರಿಕೆ ಕಾರ್ಯಕ್ರಮದ ಉಪಕ್ರಮಗಳ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳಿಗೆ ಆಯಾ ಜಿಲ್ಲೆಗಳ ಆಡಳಿತ ಹಾಗೂ ಅಭಿವೃದ್ಧಿ ವಿಭಾಗಗಳ ಉಪ ನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
– ಸುಮಂಗಲಾ ವಿ., ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶಕರು
-ಎಚ್.ಕೆ. ನಟರಾಜ