Advertisement

ವಿದೇಶಗಳಿಂದ ಒಳ್ಳೆಯ ವಿಷಯ ಕಲಿಕೆ ಅಗತ್ಯ

01:35 PM Dec 26, 2017 | |

ಬೆಂಗಳೂರು: ಶತಮಾನಗಳ ಕಾಲ ಎಲ್ಲ ಕ್ಷೇತ್ರಗಳಲ್ಲೂ ಪ್ರಪಂಚದ ಉಳಿದೆಲ್ಲ ದೇಶಗಳಿಗಿಂತ ಭಾರತ ಉತ್ತಮ ಸ್ಥಾನದಲ್ಲಿತ್ತು ಎನ್ನುವುದು ದಿಟ ವಾಸ್ತವ. ಆದರೆ, ಇಂದಿಗೂ ಅದೇ ಭ್ರಮೆಯಲ್ಲಿ ಇದ್ದರೆ, ಅದೊಂದು ಬಹಳ ದೊಡ್ಡ ಮೂರ್ಖತನವಾದೀತು. ಭ್ರಮೆಯಿಂದ ಹೊರಬಂದು ಬೇರೆಯವರಿಂದ ಒಳ್ಳೆಯ ವಿಷಯಗಳನ್ನು ಕಲಿಯಲು ನಾವು ಮುಂದಾಗಬೇಕು ಎಂದು ಇನ್ಫೋಸಿಸ್‌ ಸಂಸ್ಥೆಯ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಹೇಳಿದ್ದಾರೆ.

Advertisement

ನಗರದ ಗಾಂಧೀಭವನದಲ್ಲಿ ಸೋಮವಾರ “ಸಮಾಜಮುಖೀ’ ಮಾಸಪತ್ರಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಉತ್ತಮ ವಿಷಯಗಳನ್ನು ಬೇರೆಯವರಿಂದ ಕಲಿಯುವುದಿಲ್ಲ ಎನ್ನುವುದು ಬಾಲಿಶ ಆಲೋಚನೆ ಎಂದು ಹೇಳಿದರು.

ಸ್ವೀಕರಿಸುವ ಗುಣ ಬೇಕು: ನಮ್ಮ ದೇಶಕ್ಕೆ ಸಹಸ್ರ ವರ್ಷಗಳ ಇತಿಹಾಸವಿದೆ. ಎಲ್ಲ ಕ್ಷೇತ್ರಗಳಲ್ಲೂ ನಾವು ಬೇರೆ ದೇಶಗಳಿಗೆ ದಿಕ್ಸೂಚಿಯಾಗಿದ್ದೆವು. ಎಲ್ಲ ಮಾದರಿಯ ಆಡಳಿತ ವ್ಯವಸ್ಥೆಯನ್ನೂ ಈ ದೇಶ ಕಂಡಿದೆ. ಈಗ ನಮ್ಮದು ಸರ್ವತಂತ್ರ ಸ್ವಾತಂತ್ರ್ಯ ದೇಶ. ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದಿವೆ. ದುರಂತದ ಸಂಗತಿ ಎಂದರೆ, ಅಪೌಷ್ಠಿಕತೆ, ಶುದ್ಧ ನೀರಿನ ಕೊರತೆ, ಆರೋಗ್ಯ ಹಾಗೂ ಶಿಕ್ಷಣ ಸಮಸ್ಯೆ ಇಂದಿಗೂ ಬಿಟ್ಟುಬಿಡದೇ ನಮ್ಮನ್ನು ಕಾಡುತ್ತಿದೆ.

ಹೀಗಿದ್ದಾಗಲೂ ಬೇರೆ ದೇಶಗಳ ಪ್ರಗತಿಪೂರಕ ಉತ್ತಮ ವಿಷಯಗಳನ್ನು ನಾವು ಕಲಿಯುವುದಿಲ್ಲ, ಅಳವಡಿಸಕೊಳ್ಳುವುದಿಲ್ಲ ಎಂದರೆ ಅದು ಮೂರ್ಖತನೇ ಸರಿ. ಉತ್ತಮ ವಿಚಾರಗಳು ಎಲ್ಲಿಂದ, ಯಾರಿಂದ ಬಂದರೂ ಸ್ವೀಕರಿಸಿವ ವಿಶಾಲ ಗುಣ ಬೆಳೆಸಿಕೊಳ್ಳಬೇಕು ಎಂದು ನಾರಾಯಣಮೂರ್ತಿ ತೀಕ್ಷ್ಣವಾಗಿ ಹೇಳಿದರು.

ಇನ್ನೂ ಬಡತನ ಕಾಡುತ್ತಿದೆ: ನಮ್ಮ ದೇಶದಲ್ಲಿ ಹಸಿರುಕ್ರಾಂತಿ, ಕೈಗಾರಿಕಾ ಕ್ರಾಂತಿ, ಐಟಿ-ಬಿಟಿ ಕ್ಷೇತ್ರದ ಅವಿಷ್ಕಾರಗಳು ನಡೆದಿದ್ದು ಒಂದಡೆಯಾದರೆ ಮತ್ತೂಂದು ಕಡೆ ಬಡತನ ನಮ್ಮನ್ನು ಕಾಡುತ್ತಿದೆ. ಅಪೌಷ್ಠಿಕ ಮಕ್ಕಳ ಸಂಖ್ಯೆ ಉಳಿದ ದೇಶಗಳಿಗಿಂತ ನಮ್ಮಲ್ಲಿ ಹೆಚ್ಚಾಗಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಸಮರ್ಪಕವಾಗಿಲ್ಲ.

Advertisement

ಗಂಗಾ, ಕಾವೇರಿ, ಕೃಷ್ಣೆ ಸೇರಿದಂತೆ ಬಹುತೇಕ ಎಲ್ಲ ಜೀವನದಿಗಳು ತಮ್ಮ ಪಾವಿತ್ರ್ಯತೆಯನ್ನು ಉಳಿಸಿಕೊಂಡಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಸಣ್ಣ ದೇಶಗಳಿಗಿಂತಲೂ ನಾವು ಬಹಳ ಹಿಂದೆ ಇದ್ದೇವೆ. ಈ ಪರಿಸ್ಥಿತಿಯಿಂದ ದೇಶವನ್ನು ಮೇಲಕ್ಕೆ ತರಲು ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಮಾತನಾಡಿ, ನಾರಾಯಣಮೂರ್ತಿ ಒಬ್ಬ ಮಾರ್ಗದರ್ಶಕರು. ಕರ್ನಾಟಕವನ್ನು ಮುನ್ನಡೆಸಲು ಅವರ ಮಾರ್ಗದರ್ಶನ ಬೇಕು. ಇಪ್ಪತ್ತು ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ನಾನು ಆಗ ಹೇಳಿದ್ದೆ. ಈ ಮಾತನ್ನು ಯಾಕೆ ಹೇಳಿದ್ದೆ ಅನ್ನುವುದು ಜನರಿಗೆ ಈಗ ಅರ್ಥವಾಗುತ್ತಿದೆ ಎಂದು ಕರ್ನಾಟಕಕ್ಕೆ ಐಟಿ ಕ್ಷೇತ್ರವನ್ನು ಪರಿಚಯಿಸಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

ಚಿಂತನೆ ಕೊಲ್ಲುವ ಕಾಲ: ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಮಾತನಾಡಿ, ಸಮಾಜಮುಖೀ ಚಿಂತನೆ ಮಾಡುವವರನ್ನು ಕೊಲೆ ಮಾಡುವ ಕಾಲದಲ್ಲಿ ನಾವಿದ್ದೇವೆ. ಸಮಾಜಮುಖೀ ಪದಕ್ಕೆ ಇಂದು ಅರ್ಥವೇ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜಮುಖೀ ಎಂಬ ಹೆಸರಲ್ಲಿ ಪತ್ರಿಕೆ ತರುತ್ತಿರುವುದು ಶ್ಲಾಘನೀಯ. ಸಮಾಜಮುಖೀ ಪತ್ರಿಕೆ ಮನುಜಮುಖೀಯಾಗಿ ಕೆಲಸ ಮಾಡಲಿ.

ಕನ್ನಡದ ಜತೆಗೆ ತಂತ್ರಜ್ಞಾನ ಸೇರಿದರೆ ಕನ್ನಡವು ಅನ್ನದ ಭಾಷೆಯಾಗುತ್ತದೆ. ಇದನ್ನು ಸಾಧಿಸಿ ತೋರಿಸಿದವರು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ  ಹಾಗೂ ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜಮುಖೀ ಮಾಸಪತ್ರಿಕೆ ಸಂಪಾದಕ ಚಂದ್ರಕಾಂತ್‌ ವಡ್ಡು, ಸಂಪಾದಕೀಯ ಸಲಹೆಗಾರ ಪೃಥ್ವಿದತ್ತ ಚಂದ್ರಶೋಭಿ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next