ಸುಳ್ಯ: ಎಷ್ಟೋ ಶಾಲೆಗಳಲ್ಲಿ ಕನ್ನಡವೂ ಕಲಿಯಲ್ಲ ಇಂಗ್ಲಿಷ್ ಕೂಡ ಬರಲ್ಲ ಎಂಬ ಪರಿಸ್ಥಿತಿ ಇದೆ. ಆದರೆ ಸ್ನೇಹ ಶಾಲೆಯ ಕನ್ನಡದಲ್ಲೇ ಕಲಿಯಿರಿ ಇಂಗ್ಲಿಷನ್ನೂ ಕಲಿಯಿರಿ ಎಂಬ ಧ್ಯೇಯ ವಾಕ್ಯ ಉತ್ತಮವಾಗಿದ್ದು ಇತರರಿಗೂ ಮಾದರಿಯಾಗುವಂತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಸ್ನೇಹ ಶಾಲೆಯ ಬೆಳ್ಳಿಹಬ್ಬ ಮತ್ತು ಚಂದ್ರಶೇಖರ ದಾಮ್ಲೆ ಅವರ ಸಮ್ಮಾನ ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಚಿವ ಎಸ್. ಅಂಗಾರ ಅವರು ಡಾ| ಚಂದ್ರಶೇಖರ ದಾಮ್ಲೆ ಅವರನನ್ನು ಸಮ್ಮಾನಿಸಿ, ನೆಲದ ನಂಟು ಎಂಬ ದಾಮ್ಲೆ ಅವರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸ್ನೇಹ ಸಂಸ್ಥೆಯಂಥ ಅನೇಕ ಶಿಕ್ಷಣ ಸಂಸ್ಥೆಗಳ ನಿರ್ಮಾಣದ ಅಗತ್ಯ ಇದೆ ಎಂದರು.
ಚಂದ್ರಶೇಖರ ದಾಮ್ಲೆ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಕಲಿತರೆ ಜೀವನ ದಲ್ಲಿ ಸೋಲುತ್ತಾರೆ ಎಂಬುದು ಸರಿಯಲ್ಲ ಎಂದು ಹೇಳಿದರು.
ಡಾ| ನರೇಂದ್ರ ರೈ ದೇರ್ಲ ಅಭಿನಂದನ ಭಾಷಣ ಮಾಡಿದರು. ದಾಮ್ಲೆ ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಸುಧಾಕರ ರೈ ಮಾತನಾಡಿದರು. ವಿಶ್ರಾಂತ ಪ್ರಾಂಶುಪಾಲ ಪ್ರೊ| ಎಂ. ಬಾಲಚಂದ್ರ ಗೌಡ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ಪುರಸ್ಕೃತ ಡಾ| ಗಿರೀಶ್ ಭಾರದ್ವಾಜ್, ನ.ಪಂ. ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ , ಡಾ| ವಿದ್ಯಾಶಾಂಭವ, ಡಿ.ಡಿ.ಪಿ.ಐ. ಮಲ್ಲೇಸ್ವಾಮಿ ಮತ್ತಿತರರಿದ್ದರು. ರಂಗನಾಥ ರಾವ್ ಸ್ವಾಗತಿಸಿದರು.
ಅಭಿನಂದನ ಗ್ರಂಥ
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿ, ಖಾಸಗಿ ಶಿಕ್ಷಣ ಕ್ಷೇತ್ರಕ್ಕೆ ಕೋಟಿ ಕೋಟಿ ರೂ. ಬಂಡವಾಳ ಹೂಡುವವರು ಕನ್ನಡ ಮಾಧ್ಯಮದ ಶಾಲೆ ತೆರೆಯುವ ಮನಸ್ಸು ಮಾಡಬೇಕು ಎಂದರು.