ಕೊಪ್ಪಳ: ರಾಜ್ಯ ಸರ್ಕಾರ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮೊದಲ ಬಾರಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಉದ್ದೇಶಿಸಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಜಿಲ್ಲೆಯಲ್ಲಿ 20 ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿದೆ. ಅದೇ ಶಾಲೆಯ ಶಿಕ್ಷಕರಿಗೂ ಆಂಗ್ಲ ಬೋಧನೆ ತರಬೇತಿ ಕೊಡಿಸಿದ್ದು, ವಿದ್ಯಾರ್ಥಿಗಳನ್ನು ಶಾಲೆಗಳತ್ತ ಸೆಳೆಯುವ ಪ್ರಯತ್ನಕ್ಕೆ ಸಿದ್ಧತೆ ನಡೆಸಿದೆ. ಇದು ಕೆಲ ಪಾಲಕರಲ್ಲಿ ಖುಷಿ ತಂದಿದ್ದರೆ, ಸಾಹಿತಿ, ಕನ್ನಡಾಭಿಮಾನಿಗಳಲ್ಲಿ ಕಸವಿಸಿಯಾಗುವಂತೆ ಮಾಡಿದೆ.
ಹೌದು, ರಾಜ್ಯದಲ್ಲಿ ಒಂದೆಡೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಅವನತಿಯತ್ತ ಸಾಗುತ್ತಿವೆ. ಪಾಲಕರೂ ಸಹಿತ ಆಂಗ್ಲ ಮಾಧ್ಯಮದ ವ್ಯಾಮೋಹಕ್ಕೆ ಒಳಗಾಗಿ ದುಬಾರಿ ಶುಲ್ಕ ನೀಡಿ ಮಕ್ಕಳಿಗೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಸರ್ಕಾರವು ಹಲವು ಯೋಜನೆ ಜಾರಿ ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯುವ ಪ್ರಯತ್ನ ನಡೆಸಿದರೂ ಸಫಲತೆ ದೊರೆಯುತ್ತಿಲ್ಲ. ಜೊತೆಗೆ ಶ್ರೀಮಂತ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದಂತೆ, ಬಡ ಮಕ್ಕಳೂ ಸರ್ಕಾರಿ ಶಾಲೆಗಳಲ್ಲಿಯೇ ಆಂಗ್ಲ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾಯೋಗಿಕವಾಗಿ 1ನೇ ತರಗತಿ ಆರಂಭಿಸಲು ಸಿದ್ಧತೆ ನಡೆಸಿದೆ. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ 20 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ 1ನೇ ತರಗತಿಗೆ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಿದ್ಧತೆ ಭರ್ಜರಿಯಾಗಿದೆ. ಪ್ರಾಯೋಗಿಕವಾಗಿ ಆಯ್ಕೆಯಾದ ಶಾಲೆಗಳ ಬಗ್ಗೆ ಬಿಇಒ ಹೆಚ್ಚಿನ ಗಮನ ನೀಡಿದ್ದಾರೆ.
ಯಾವ ಶಾಲೆ ಆಯ್ಕೆ?: ಜಿಲ್ಲೆಯ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಗಲ್, ಸ.ಹಿ.ಪ್ರಾ ಶಾಲೆ ಮುಕ್ಕುಂಪಿ, ಸ.ಹಿ.ಪ್ರಾ ಶಾಲೆ ಗೌರಿಪುರ, ಸ.ಹಿ.ಪ್ರಾ ಶಾಲೆ ಚಿಕ್ಕಮಾದಿನಾಳ, ಬಾಲಕಿಯರ ಸ.ಹಿ.ಪ್ರಾ. ಶಾಲೆ ಕನಕಗಿರಿ, ಸ.ಮಾ.ಹಿ.ಪ್ರಾ ಶಾಲೆ ಕಾರಟಗಿ, ಸ.ಹಿ.ಪ್ರಾ ಶಾಲೆ ಹಾಲವರ್ತಿ, ಸ.ಮಾ.ಹಿ.ಪ್ರಾ ಶಾಲೆ ಹಿರೇಸಿಂದೋಗಿ, ಸ.ಹಿ.ಪ್ರಾ ಶಾಲೆ ಇಂದರಗಿ, ಸ.ಹಿ.ಪ್ರಾ ಶಾಲೆ ಗಾಂನಗರ ಕೊಪ್ಪಳ, ಸ.ಹಿ.ಪ್ರಾ ಶಾಲೆ ಹೊಸಳ್ಳಿ (ಎಲ್), ಸ.ಹಿ.ಪ್ರಾ ಶಾಲೆ ಇರಕಲ್ಗಡಾ, ಬಾಲಕರ ಸ.ಹಿ.ಪ್ರಾ ಶಾಲೆ ಹನುಮಸಾಗರ, ಸ.ಮಾ.ಹಿ.ಪ್ರಾ ಶಾಲೆ ತಾವರಗೇರಾ, ಸ.ಮಾ.ಹಿ.ಪ್ರಾ ಶಾಲೆ ಕಂದಕೂರು, ಸ.ಹಿ.ಪ್ರಾ ಶಾಲೆ ಮೂಗನೂರು, ಸ.ಹಿ.ಪ್ರಾ ಶಾಲೆ ಕುದರಿಮೋತಿ, ಸ.ಹಿ.ಪ್ರಾ ಶಾಲೆ ಯಲಬುರ್ಗಾ 01 ಶಾಲೆ, ಸ.ಮಾ.ಹಿ.ಪ್ರಾ ಶಾಲೆ ಮಂಗಳೂರು, ಸ.ಹಿ.ಪ್ರಾ ಶಾಲೆ ಬಂಡಿ ಗ್ರಾಮದ ಶಾಲೆಗಳು ಆಯ್ಕೆಯಾಗಿವೆ.
25 ಶಿಕ್ಷಕರಿಗೆ ವಿಶೇಷ ತರಬೇತಿ: ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಪಠ್ಯ-ಪುಸ್ತಕಕ್ಕೆ ತಕ್ಕಂತೆ ಬೋಧನೆ ಮಾಡಲು ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ಮೈಸೂರಿನಲ್ಲಿ ವಿಶೇಷ ತರಬೇತಿ ನೀಡಲಾಗಿದೆ. ಪ್ರತಿ ಶಾಲೆಯಲ್ಲಿ 1ನೇ ತರಗತಿಗೆ 30 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಅವಕಾಶವಿದ್ದು, ಮೊದಲು ಬಂದು ದಾಖಲಾತಿ ಮಾಡಿಕೊಂಡವರಿಗೆ ಸೀಟು ಲಭ್ಯವಿದೆ. ಯಾವುದೇ ಶುಲ್ಕದ ಹೊರೆಯಿಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿರುವ ಸರ್ಕಾರವು, ಬಡ ಮಕ್ಕಳಿಗೆ ಆಂಗ್ಲ ಶಿಕ್ಷಣ ದೊರೆಯಲಿ ಉದ್ದೇಶದಿಂದ ಆರಂಭಿಸಿದೆ. ನುರಿತ ಶಿಕ್ಷಕರು ಬೋಧನೆ ಮಾಡಲಿದ್ದಾರೆ ಎನ್ನುವ ಸಂದೇಶ ನೀಡಿದೆ.
ವಿದ್ಯಾರ್ಥಿಗಳಿಗೆ ಸರ್ಕಾರಿ ಸೌಲಭ್ಯ: ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳಿಗೆ ದೊರೆಯುವಂತೆ ಆಂಗ್ಲ ಮಾಧ್ಯಮದ ಮಕ್ಕಳಿಗೂ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳು ದೊರೆಯಲಿವೆ. ನುರಿತು ತರಬೇತಿ ಪಡೆದ ಶಿಕ್ಷಕರಿಂದ ಬೋಧನೆ ಕೊಡಿಸುವ ಸಿದ್ಧತೆ ನಡೆದಿದ್ದು, ಇರುವ ಶಾಲೆಯಲ್ಲೇ ಒಂದು ಕೊಠಡಿ ಆಂಗ್ಲ ಮಾಧ್ಯಮಕ್ಕೆ ಮೀಸಲಿಡಲು ವ್ಯವಸ್ಥೆ ಮಾಡಲಾಗಿದೆ. ಎನ್‌ಸಿಇಆರ್‌ಟಿ ಪಠ್ಯಕ್ರಮದ ಪ್ರಕಾರ ಬೋಧನೆ ನಡೆಯಲಿದೆ. ಉಳದಿಂತೆ ಉಚಿತ ಪಠ್ಯ-ಪುಸ್ತಕ, ಸಮವಸ್ತ್ರ, ಶ್ಯೂ, ಸಾಕ್ಸ್ ಸೇರಿದಂತೆ ಹಾಲು, ಬಿಸಿಯೂಟ ದೊರೆಯಲಿದೆ.
ಆಂಗ್ಲ ಮಾಧ್ಯಮ ಶಾಲೆಗಳ ಪ್ರಚಾರ: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಮೊದಲ ಬಾರಿಗೆ ಆಂಗ್ಲ ಮಾಧ್ಯಮ ಆರಂಭಿಸುವ ಹಿನ್ನೆಲೆಯಲ್ಲಿ ಆಯ್ಕ್ಕೆಯಾದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆಂಗ್ಲ ಮಾಧ್ಯಮ ಶಾಲೆ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ವಿದ್ಯಾರ್ಥಿಗಳ ದಾಖಲಾತಿಗೆ ಸೂಚನೆ ನೀಡಿದ್ದು, ಅದರಂತೆ ಕರಪತ್ರ, ಬ್ಯಾನರ್ ಮುದ್ರಿಸಿ ಪ್ರಚಾರ, ಪಾಲಕರ ಮನೆ-ಮನೆಗೆ ಭೇಟಿ ನೀಡಿ ಶಾಲೆಯ ಬಗ್ಗೆ ಮಾಹಿತಿ ನೀಡುವ ಕಾರ್ಯವೂ ನಡೆದಿದೆ. ಪಾಲಕರಿಗೆ ಖುಷಿ ತಂದಿದ್ದರೆ, ಸಾಹಿತಿಗಳಿಗೆ ಈ ಬಗ್ಗೆ ಅಸಮಾಧಾನವೂ ಇದೆ.
•ದತ್ತು ಕಮ್ಮಾರ