Advertisement

ಕುಟುಂಬ, ಸಮುದಾಯ, ರಾಜ್ಯ, ದೇಶದ ಧ್ಯೇಯ ತಿಳಿಯಿರಿ

09:09 PM Jul 15, 2019 | Team Udayavani |

ಮೈಸೂರು: ನಾವು ಪಡೆದುಕೊಳ್ಳುವ ಶಿಕ್ಷಣ ಹಾಗೂ ಜ್ಞಾನ ಸಮಾಜದ ಅಭ್ಯುದಯಕ್ಕೆ ಹಾಗೂ ಮನುಕುಲದ ಒಳಿತಿಗಾಗಿ ಇರಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಹೇಳಿದರು.

Advertisement

ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜು ವತಿಯಿಂದ ಕಾಲೇಜಿನ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಗತ ಮತ್ತು ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಒಬ್ಬ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿ ಮಾಡುವುದು ಶಿಕ್ಷಣದ ಕೆಲಸ. ಇದರ ಜೊತೆಗೆ ಚಾರಿತ್ರ್ಯ, ವ್ಯಕ್ತಿತ್ವ ಹೆಚ್ಚಿಸುವುದು ಸೇರಿದಂತೆ ವಿದ್ಯಾರ್ಥಿಗಳ ಮಾನಸಿಕ ಮಟ್ಟವನ್ನು ವಿಸ್ತರಿಸಬೇಕು. ವಿದ್ಯಾರ್ಥಿಗಳನ್ನು ಸ್ವಾವಲಂಬಿ ಮಾಡುವ ಶಿಕ್ಷಣ ನಮಗೆ ಬೇಕಿದೆ.

ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಧ್ಯೇಯಗಳಿರುತ್ತವೆ. ಇದರ ಜೊತೆಗೆ ಕುಟುಂಬ, ಸಮುದಾಯ, ನಮ್ಮ ಸಮಾಜ, ರಾಜ್ಯ ಹಾಗೂ ದೇಶದ ಧ್ಯೇಯಗಳು ಏನು ಎಂದು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಸ್ಪಷ್ಟತೆಯನ್ನು ಹೊಂದಿರಬೇಕು ಎಂದರು.

ಪರಿಶ್ರಮ: ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿ, ಧ್ಯೇಯ ಹಾಗೂ ಕನಸು ಇರಬೇಕು. ಇವುಗಳನ್ನು ಸಾಕಾರಪಡಿಸಿಕೊಳ್ಳಲು ಶಿಕ್ಷಣ ಅಗತ್ಯ. ಆದರೆ, ಶಿಕ್ಷಣ ಮತ್ತು ಜ್ಞಾನ ಪಡೆದುಕೊಳ್ಳುವುದು ಸುಲಭವಲ್ಲ. ಇದಕ್ಕೆ ನಿರಂತರ ಪರಿಶ್ರಮ ಅಗತ್ಯ.

Advertisement

ನಾವು ಪಡೆದುಕೊಳ್ಳುವ ಜ್ಞಾನವೇ ನಮಗೆ ಬಂಡವಾಳ ಮತ್ತು ಶಕ್ತಿಯಾಗಿರುತ್ತದೆ. ಜೊತೆಗೆ ಯಶಸ್ಸಿಗೆ ಯಾವುದೇ ಅಡ್ಡದಾರಿ ಇರುವುದಿಲ್ಲ. ಪರಿಶ್ರಮಕ್ಕೆ ಪರ್ಯಾಯವಾದುದು ಇಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಓದಿನಲ್ಲಿ ಪರಿಶ್ರಮ, ನಿಷ್ಠೆ ಹೊಂದಿರಬೇಕು ಎಂದು ತಿಳಿಸಿದರು.

ಇಂದು ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಅಧ್ಯಾಪಕರಲ್ಲಿ ವಿಷಯ ಜ್ಞಾನದ ಕೊರತೆ ಇದೆ ಎಂಬ ಗುಮಾನಿ ಇದೆ. ಈ ಸಂದರ್ಭದಲ್ಲಿ ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡುವ ಅಗತ್ಯವಿದೆ. ಶಿಕ್ಷಕರು, ಅಧ್ಯಾಪಕರು, ಸಂಶೋಧಕರ ಕೆಲಸ ಇಂದು ಸವಾಲಿನಿಂದ ಕೂಡಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಲೋಕಜ್ಞಾನ ಹಾಗೂ ಮೌಲ್ಯಗಳನ್ನು ಕಲಿಸಿಕೊಡಬೇಕಿದೆ ಎಂದರು.

ಇಂದು ಮಾನವಿಕ ಶಿಕ್ಷಣ ಅಥವಾ ಕಲಾ ನಿಕಾಯ ದೇಶಾದ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಾ ನಿಕಾಯಕ್ಕೆ ಸೇರಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಮಹಾರಾಜ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಸಿ.ಪಿ. ಸುನೀತ, ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಅನಿಟ ವಿಮ್ಲ ಬ್ರ್ಯಾಗ್ಸ್‌, ಸಂಚಾಲಕ ಡಾ.ಸಿ.ಇ. ಲೋಕೇಶ್‌ ಇತರರಿದ್ದರು.

ಕಾಲಕ್ಕೆ ತಕ್ಕಂತೆ ಜ್ಞಾನ ಪಡೆಯಿರಿ: ಇಂದು ಅವಕಾಶಗಳ ಯುಗವಾಗಿದ್ದು, ತಂತ್ರಜ್ಞಾನ ಮತ್ತು ಸಂವಾಹನ ಕ್ಷೇತ್ರ ಸಾಕಷ್ಟು ಸುಧಾರಿಸಿದ್ದು, ಅಂಗೈಯಲ್ಲಿಯೇ ಎಲ್ಲಾ ಮಾಹಿತಿ ಲಭ್ಯವಾಗುತ್ತಿದೆ. ಜೊತೆಗೆ ಕಲಿಯುವ ಅವಕಾಶಗಳೂ ಬದಲಾಗಿವೆ.

ಈ ಸಂದರ್ಭ ಅಧ್ಯಾಪಕ ಬಳಗ ಸಂದರ್ಭಕ್ಕೆ ತಕ್ಕಂತೆ ತಮ್ಮನ್ನು ತಾವು ಶೈಕ್ಷಣಿಕವಾಗಿ ಉನ್ನತೀಕರಿಸಿಕೊಳ್ಳಬೇಕು. ಜ್ಞಾನ ಅಥವಾ ಶಿಕ್ಷಣದ ಅಂತಿಮ ಗುರಿ ಸಮಾಜದ ಅಭ್ಯುದಯ ಪ್ರಗತಿಯಾಗಿರಬೇಕು ಎಂದು ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next