ದೇವನಹಳ್ಳಿ: ಪ್ರತಿ ಗರ್ಭಿಣಿಯರು ಕಡ್ಡಾಯವಾಗಿ ತಾಯಿಕಾರ್ಡು ಮಾಡಿಸಬೇಕು. ಗುಣಾತ್ಮಕ ವೈದ್ಯಕೀಯ ತಪಾಸಣೆಗೆ ಹತ್ತಿರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ.ರೇವಣ್ಣ ಹೇಳಿದರು.
ತಾಲೂಕಿನ ಕೋಡಗುರ್ಕಿ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಯಿಕಾರ್ಡು ಮಹತ್ವ ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಅರಿವು ಮೂಡಿಸಿ ಮಾತನಾಡಿದರು.
ಕುಳ್ಳಗಿರುವ ಚೊಚ್ಚಲ ಗರ್ಭಿಣಿ 4.10ಗಿಂತ ಕಡಿಮೆ ಇದ್ದಲ್ಲಿ, ತೀವ್ರ ರಕ್ತಹೀನತೆ (ಎಚ್ಬಿ 7 ಗ್ರಾಂ ಗಿಂತ ಕಡಿಮೆಯಿದ್ದಲ್ಲಿ), ಕೈಕಾಲು ಊತ ಇರುವುದು, ರಕ್ತದೊತ್ತಡ ಅಧಿಕವಾಗಿರುವುದು, ಹಿಂದಿನ ಹೆರಿಗೆಗೆ ಸಿಜೆರಿಯನ್ ಆದಲ್ಲಿ, ಅವಳಿ/ತ್ರಿವಳಿ ಮಕ್ಕಳು ಇದ್ದಲ್ಲಿ, ಅಡ್ಡವಿರುವ ಭ್ರೂಣ, ಹೆರಿಗೆಯ ಮೊದಲು ರಕ್ತಸ್ತ್ರಾವ, ರಕ್ತದ ಗುಂಪಿನಲ್ಲಿ ಹೊಂದಿಕೊಳ್ಳದಿರುವುದು.
ಗರ್ಭಾಶಯದಲ್ಲಿ ಗಡ್ಡೆ, ಹೃದಯ ಕಾಯಿಲೆ, ಮದುಮೇಹ ಇತ್ಯಾದಿ ವೈದ್ಯಕೀಯ ಸಮಸ್ಯೆ, ಕುಂಠಿತ ಬೆಳವಣಿಗೆಯ ಭ್ರೂಣ, ಗರ್ಭಿಣಿಯ ಆರೈಕೆ, ಪ್ರಸವಪೂರ್ವ ಆರೈಕೆ, ಪೌಷ್ಟಿಕ ಆಹಾರ, ಪ್ರಸವ ನಂತರದ ಆರೈಕೆ, ನವಜಾತ ಶಿಶುವಿನ ಆರೈಕೆ, ಎದೆಹಾಲಿನ ಮಹತ್ವ, ಕುಟುಂಬ ಕಲ್ಯಾಣ ವಿಧಾನಗಳು, ಜನನಿ ಸುರಕ್ಷಾ ಯೋಜನೆ (ಜೆಎಸ್‌ವೈ) ಹಾಗೂ ಜನನಿ ಶಿಶು ಸುರಕ್ಷಾ ಯೋಜನೆ (ಜೆಎಸ್‌ಎಸ್‌ಕೆ)ಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ದೊರೆಯುವ ಕಾರ್ಯಕ್ರಮಗಳ ಬಗ್ಗೆ ಪ್ರತಿ ಜನರಲ್ಲೂ ಅರಿವು ಮೂಡಬೇಕು ಎಂದು ತಿಳಿಸಿದರು.
ಬಿಸಿಜಿ, ವೆಂಟಾವೈಯಲೆಂಟ್, ದಡಾರ, ಡಿಪಿಟಿ, ಟಿಡಿ ಲಸಿಕೆಗಳ ಬಗ್ಗೆ ಗರ್ಭಿಣಿ ಸ್ತ್ರೀ ಮತ್ತು ಮಕ್ಕಳಿರುವ ತಾಯಂದಿರಿಗೆ ತಿಳಿಸಲಾಗಿದೆ ಹಾಗೂ ಎಲ್ಲಾ ವರ್ಗದ ಗರ್ಭಿಣಿಯರಿಗೂ ಹಾಗೂ ಇತರೆ ರಾಜ್ಯಗಳಿಂದ ವಲಸೆ ಬಂದಂತಹ ಗರ್ಭಿಣಿಯರಿಗೆ ತಾಯಿ ಕಾರ್ಡುಗಳನ್ನು ನೀಡಲಾಗಿದೆ ಎಂದು ಹೇಳಿದರು.
ಕಿರಿಯ ಆರೋಗ್ಯ ಸಹಾಯಕರಾದ ಪದ್ಮಾ, ಉಮೇಶ್, ಆಶಾ ಸುಗಮಕಾರರಾದ ಮಂಜುಳಾ, ಆಶಾ ಕಾರ್ಯಕರ್ತೆಯರಾದ ಆಂಜಿನಮ್ಮ, ಜಯಮಾಲಾ, ಗರ್ಭಿಣಿ ತಾಯಂದಿರಾದ ಅರುಣಾ, ಸುನಿತಾ, ಮಂಜುಳಾ ಮತ್ತಿತರರು ಇದ್ದರು.