Advertisement

ಕನ್ನಡ ಕಲಿಯಿರಿ, ಮಕ್ಕಳಿಗೂ ಕಲಿಸಿ’

06:55 AM Nov 02, 2017 | Team Udayavani |

ಬೆಂಗಳೂರು: ಕನ್ನಡ ನಾಡಿನಲ್ಲಿ ವಾಸವಾಗಿರುವ ಹೊರ ರಾಜ್ಯದವರು “ನಾಡ ಭಾಷೆ ಕನ್ನಡ’ ಕಲಿಯಬೇಕು. ತಮ್ಮ ಮಕ್ಕಳಿಗೂ ಕನ್ನಡದಲ್ಲಿ ಶಿಕ್ಷಣ ಕೊಡಿಸಬೇಕು ಎನ್ನುವ ಸಂದೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರಭಾಷಿಗರಿಗೆ ನೀಡಿದ್ದಾರೆ.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಮತ್ತು ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ವಾಸಿಸುವವರು ಎಲ್ಲರೂ ಕನ್ನಡಿಗರೇ. ಅನ್ಯರಾಜ್ಯದಿಂದ ಬಂದವರು ಕೂಡ ಈ ನೆಲದ ಭಾಷೆ
ಕಲಿಯಬೇಕು, ಗೌರವಿಸಬೇಕು ಮತ್ತು ತಮ್ಮ ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕನ್ನಡವನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಕನ್ನಡ ಕಲಿಯದೇ ಇರುವುದು ನಾಡಿಗೆ ಮಾಡುವ ಅಪಮಾನ ಎಂದು
ಹೇಳಿದರು.

ಗುಣಮಟ್ಟದ ಶಿಕ್ಷಣ: ಖಾಸಗಿ ಶಾಲೆಗಳಲ್ಲಿ ಸಿಗುವಷ್ಟೇ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೂ ನೀಡಲಿದ್ದೇವೆ. ಸರ್ಕಾರಿ ವೈದ್ಯಕೀಯ, ದಂತವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಸೀಟುಗಳಿಗೆ ಮುಗಿಬೀಳುವ 
ಪಾಲಕರು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಅಸಡ್ಡೆ ವಹಿಸುವುದು ಸರಿಯಲ್ಲ ಎಂದರು.

ಕನ್ನಡೇತರರಿಗೆ ಕನ್ನಡ ಭಾಷೆ ಕಲಿಸುವ ವಾತಾವರಣ ನಿರ್ಮಾಣವಾಗಬೇಕು. ಮಾತೃ ಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ನೀಡಬೇಕು. ಈ ವಿಚಾರವಾಗಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಿಂದ ಪ್ರಾದೇಶಿಕ ಭಾಷೆಗಳ ಮೇಲೆ ದೊಡ್ಡ ಹೊಡೆತ ಬೀಳಲಿದೆ.

Advertisement

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿಷಯವನ್ನು ಅರ್ಥ ಮಾಡಿಕೊಳ್ಳಲು ಹಾಗೂ ವ್ಯಕ್ತಪಡಿಸಲು ಸುಲಭವಾಗುತ್ತದೆ. ಹೀಗಾಗಿ ಮಾತೃಭಾಷೆಯಲ್ಲಿ ಶಿಕ್ಷಣ ಅತ್ಯವಶ್ಯಕ ಎಂದರು. ಶಿಕ್ಷಕರಿಗೆ ತರಬೇತಿ: ಸಿಬಿಎಸ್‌ಇ, ಐಸಿಎಸ್‌ಇ ಸೇರಿ ರಾಜ್ಯದ ಎಲ್ಲ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯ ಮಾಡಿದ್ದೇವೆ. ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್‌ ಕಲಿಕೆಗೂ ಕ್ರಮ ತೆಗೆದುಕೊಂಡಿದ್ದೇವೆ. 10 ಸಾವಿರ ಇಂಗ್ಲಿಷ್‌ ಶಿಕ್ಷಕರಿಗೆ ವಿಶೇಷ ತರಬೇತಿ ನೀಡುತ್ತಿದ್ದೇವೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪಾಲಕರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಹಮ್ಮಿಕೊಳ್ಳಲಿದ್ದೇವೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು 50 ಸಾವಿರ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಿದ್ದೇವೆ.

ಮಕ್ಕಳಿಗೆ ಕನ್ನಡ ಮಾತನಾಡಲು ಅವಕಾಶ ನೀಡದ ಖಾಸಗಿ ಶಾಲೆಗಳ ವಿರುದಟಛಿ ಕಠಿಣ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ದೈಹಿಕ ಶಿಕ್ಷಕರ ನೇಮಕ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್  ಮಾತನಾಡಿ, ಸರ್ಕಾರಿ ಶಾಲೆಯ
ಗುಣಮಟ್ಟ ಸುಧಾರಿಸುವ ದೃಷ್ಟಿಯಿಂದ ಇಂಗ್ಲಿಷ್‌, ಗಣಿತ ಹಾಗೂ ವಿಜ್ಞಾನ ಬೋಧನೆಗೆ ವಿಶೇಷ ಆದ್ಯತೆ 
ನೀಡುತ್ತಿದ್ದೇವೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲು ದೈಹಿಕ ಶಿಕ್ಷಕರ ನೇಮಕ ಮಾಡಿಕೊಳ್ಳಲಿದ್ದೇವೆ. ಸರ್ಕಾರಿ ಶಾಲೆಯಲ್ಲಿ ಗ್ರಂಥಪಾಲಕರ ನೇಮಕಕ್ಕೆ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಬದಲಾವಣೆ ತಂದಿದ್ದೇವೆ. ಸರ್ಕಾರಿ ಶಾಲಾ ಸಬಲೀಕರಣ ಸಮಿತಿ ನೀಡಿರುವ ವರದಿಯನ್ನು ಶೀಘ್ರವೇ ಸಂಪುಟದಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದರು.

ನಗರಾಭಿವೃದ್ಧಿ ಹಾಗೂ ಹಜ್‌ ಸಚಿವ ಆರ್‌.ರೋಷನ್‌ ಬೇಗ್‌, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಮೇಯರ್‌ ಆರ್‌. ಸಂಪತ್‌ ರಾಜ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌, ಆಯುಕ್ತ ಡಾ.ಪಿ.ಸಿ.ಜಾಫ‌ರ್‌ ಇತರರಿದ್ದರು. 

ನಾಡಿನ ಸೇವೆಗೆ ಸಂಕಲ್ಪ ತೊಡಿ 
ಬೆಂಗಳೂರು
: “ರಾಜ್ಯೋತ್ಸವ ಕೇವಲ ಸಂಭ್ರಮಕ್ಕೆ ಸೀಮಿತವಾಗದೇ, ನಾಡು, ನುಡಿಗೆ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ನಾಡಿನ ಸೇವೆಗೆ ಸಂಕಲ್ಪ ಮಾಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಈ ನೆಲದಲ್ಲಿ ಹುಟ್ಟಿದ, ವಾಸ ಮಾಡಿದ ಎಲ್ಲರೂ ಕನ್ನಡಿಗರೇ. ಹಾಗಂತ ಬೇರೆ ಭಾಷೆಗಳನ್ನು ದ್ವೇಷಿಸಬೇಕೆಂದೇನೂ ಇಲ್ಲ.

ಎಲ್ಲರನ್ನೂ ಗೌರವಿಸಬೇಕು. ಆದರೆ, ಕನ್ನಡಕ್ಕೆ ಕುತ್ತು ಮಾಡಿ ಬೇರೆ ಭಾಷೆ ಗೌರವಿಸಬಾರದು. ಯಾರಿಗೆ ಕನ್ನಡ ಬರುತ್ತದೆಯೋ ಅವರೊಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡುವುದಿಲ್ಲ ಎಂಬ ಸಂಕಲ್ಪ ಮಾಡಬೇಕು ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌, ಕನ್ನಡ ಮತ್ತು ಸಂಸðತಿ ಸಚಿವೆ ಉಮಾಶ್ರೀ, ಮೇಯರ್‌ ಸಂಪತ್‌ ರಾಜ… ಉಪಸ್ಥಿತರಿದ್ದರು.

57 ಸಾಧಕರಿಗೆ ಪ್ರಶಸ್ತಿ
57 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರ ಪೈಕಿ ಗಾಯಕ ಜೆ.ಯೇಸುದಾಸ್‌, ಚಿಂತಕ ರಾಮಚಂದ್ರ ಗುಹಾ, ಸಾಹಿತಿ ಡಿ.ಎಸ್‌. ನಾಗಭೂಷಣ್‌, ವಿದುಷಿ ಲಲಿತಾ ಜೆ.ರಾವ್‌, ಸಮಾಜ ಸೇವಕ ಡಾ.ಸಯ್ಯದ್‌ ಷಾ ಖುಸ್ರೋ ಹುಸೇನಿ ಗೈರು ಹಾಜರಾಗಿದ್ದರು.

ಕರ್ನಾಟಕ ಏಕೀಕರಣವಾಗಿ 61 ವರ್ಷ ಪೂರ್ಣಗೊಂಡು, 62ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕನ್ನಡ ನಾಡು-ನುಡಿಯ ವಿಚಾರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಆದರೆ, ಕರ್ನಾಟಕದಲ್ಲಿ ಪೂರ್ತಿಯಾಗಿ ಕನ್ನಡದ ವಾತಾವರಣ ಸೃಷ್ಟಿಸಲು ಸಾಧ್ಯವಾಗಿಲ್ಲ.
– ಸಿದ್ದರಾಮಯ್ಯ,
ಮುಖ್ಯಮಂತ್ರಿ

ಸರ್ಕಾರಿ ಶಾಲೆಯ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ನೀಡುತ್ತಿದ್ದೇವೆ  ಮುಂದಿನ ದಿನಗಳಲ್ಲಿ ವಿವಿಧ ಫ್ಲೇವರ್‌ಯುಕ್ತ ಹಾಲು ನೀಡುವ ಉದ್ದೇಶದಿಂದ ನ.1ರಿಂದಲೇ ಮೈಸೂರು ಮತ್ತು ರಾಯಚೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಿದ್ದೇವೆ.
–  ತನ್ವೀರ್‌ ಸೇಠ್ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next