Advertisement

ಕೆಂಪಾಪುರದಲ್ಲಿ ವಾಲಿದ 5 ಅಂತಸ್ತಿನ ಕಟ್ಟಡ

12:33 AM Feb 06, 2020 | Lakshmi GovindaRaj |

ಬೆಂಗಳೂರು: ನಗರದ ಬ್ಯಾಟರಾಯನಪುರ ವಾರ್ಡಿನ ಕೆಂಪಾಪುರದ ಜಿ.ರಾಮಯ್ಯ ಲೇಔಟ್‌ನಲ್ಲಿ ಐದು ಅಂತಸ್ತಿತ ಕಟ್ಟಡವೊಂದು ಬುಧವಾರ ಬೆಳಗ್ಗೆ ವಾಲಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

Advertisement

ಕಟ್ಟಡ ತೆರವು ಕಾರ್ಯಾಚರಣೆ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದಲ್ಲಿ ವಾಸವಿರುವ 35 ಕುಟುಂಬದ 150ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಅಮೃತಹಳ್ಳಿಯ ಸರ್ಕಾರಿ ಆಸ್ಪತ್ರೆ ಹಾಗೂ ಶಾಲೆಯಲ್ಲಿ ತಾತ್ಕಾಲಿಕ ವಾಸ್ತವ್ಯಕ್ಕೆ ಬಿಬಿಎಂಪಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

ಐದು ಅಂತಸ್ತಿನ ಕಟ್ಟಡವು ರಾಹುಲ್‌ ಎಂಬವರಿಗೆ ಸೇರಿದ್ದು, ಕಟ್ಟಡದ ಬಲಭಾಗದಲ್ಲಿ ಬಾಬು ಎಂಬವರಿಗೆ ಸೇರಿದ ನಿವೇಶನದಲ್ಲಿ ಪಾಲಿಕೆ ಯಿಂದ ಯಾವುದೇ ಅನುಮತಿ ಪಡೆದು ಕೊಳ್ಳದೆ ಮಂಗಳವಾರ ರಾತ್ರಿ ಕಟ್ಟಡ ನಿರ್ಮಾಣಕ್ಕೆ ಜೆಸಿಬಿ ಯಂತ್ರದಿಂದ ಪಾಯ ತೆಗೆಯಲು ಪ್ರಾರಂಭಿ ಸಲಾಗಿದ್ದು, ಈ ವೇಳೆ ಕಟ್ಟಡದ ಪಿಲ್ಲರ್‌ (ಕಂಬ)ಗಳಿಗೆ ಹಾನಿ ಉಂಟಾಗಿರುವುದರಿಂದ ಕಟ್ಟಡದ ಭಾಗ ವಾಲಿದೆ. ಶಬ್ದವಾಗುತ್ತಿದ್ದಂತೆ ಕಟ್ಟಡಲ್ಲಿದ್ದವರು ಹೊರಕ್ಕೆ ಬಂದಿದ್ದಾರೆ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹಂತ ಹಂತವಾಗಿ ತೆರವು: ಈಗಾಗಲೇ ರಾಜ್ಯ ವಿಪತ್ತು ನಿರ್ವಹಣೆ ತಂಡದ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಕಟ್ಟಡ ಹೆಚ್ಚು ವಾಲಿರುವುದರಿಂದ ಸಂಪೂರ್ಣ ಕಟ್ಟಡವನ್ನು ತೆರವು ಮಾಡುವಂತೆ ಸಲಹೆ ನೀಡಿದ್ದಾರೆ. ತೆರವು ಕಾರ್ಯಾಚರಣೆಯನ್ನು ಗುರುವಾರ ಬೆಳಗ್ಗೆಯಿಂದ ಪ್ರಾರಂಭಿಸಲಾಗುವುದು ಎಂದು ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್‌ ಅವರು ಮಾಹಿತಿ ನೀಡಿದರು.

ಕಟ್ಟಡವನ್ನು ಹಂತ ಹಂತವಾಗಿ ಕುಸಿಯದಂತೆ ತೆರವು ಮಾಡಲಾಗುವುದು. ತೆರವು ಕಾರ್ಯಕ್ಕೆ ಅಂದಾಜು 10- 15 ದಿನ ಬೇಕಾಗಲಿದೆ ಎಂದು ಎಸ್‌ಡಿಆರ್‌ಎಫ್ ತಜ್ಞರು ಮಾಹಿತಿ ನೀಡಿದ್ದಾರೆ. ಹಾಗೆಯೇ ಎರಡು ಅಂತಸ್ತುವುಳ್ಳ ಕಟ್ಟಡ ತೆರವು ಮಾಡುವವರಿಗೆ ಸವಾಲಾಗಿದೆ ಎಂದು ತಿಳಿಸಿದರು.

Advertisement

ಮಾಲೀಕರಾದ ರಾಹುಲ್‌ ನಿಗದಿತ ಅಂತಸ್ತಿಗಿಂತ ಹೆಚ್ಚಿನ ಮಹಡಿ ನಿರ್ಮಿಸಿದ್ದಾರೆ ಹಾಗೂ ನಕ್ಷೆ ನಿಯಮ ಉಲ್ಲಂ ಸಿದ್ದಾರೆ. ಕಟ್ಟಡ ಪಕ್ಕದ 20×20 ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾದ ಬಾಬು ಪಾಲಿಕೆಯಿಂದ ಅನುಮತಿ ಪಡೆದಿಲ್ಲ ಹೀಗಾಗಿ, ರಾಹುಲ್‌ ಅವರಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರವೇಶಕ್ಕೆ ನಿಷೇಧ: ಮುಂಜಾಗ್ರತಾ ಕ್ರಮವಾಗಿ ಈ ಭಾಗದಲ್ಲಿ ಸಾರ್ವಜನಿಕರು ಓಡಾಡುವುದಕ್ಕೆ ನಿಷೇಧಿಸಲಾಗಿದ್ದು, ವಾಲಿದ ಕಟ್ಟಡದಲ್ಲಿರುವ ಬೆಲೆ ಬಾಳುವ ವಸ್ತು ಹಾಗೂ ದಾಖಲೆಗಳನ್ನು ಎಸ್‌ಡಿಆರ್‌ಎಫ್ ತಂಡ ಸಿಬ್ಬಂದಿ ತೆಗೆದು ವಾರಸುದಾರರಿಗೆ ನೀಡಲಿದ್ದಾರೆ. ಪೊಲೀಸ್‌ ಭದ್ರತೆ ನೀಡಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಟ್ಟಡ ವಾಲಿರುವ ಪ್ರದೇಶಕ್ಕೆ ಮೇಯರ್‌ ಎಂ.ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹಾಗೂ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಪರಿಶೀಲನೆ ನಡೆಸಿದರು.

ಆರೋಪಿಗಳು ಪೊಲೀಸ್‌ ವಶಕ್ಕೆ: ಕೆಂಪಾಪುರದಲ್ಲಿ ಐದು ಅಂತಸ್ತಿ ಕಟ್ಟಡ ವಾಲಿದ ಪ್ರಕರಣ ಸಂಬಂಧ ಘಟನೆಗೆ ಕಾರಣವಾದ ಸ್ಥಳೀಯ ನಿವಾಸಿ, ಖಾಲಿ ನಿವೇಶನ ಮಾಲೀಕ ಬಾಬು(50) ಹಾಗೂ ಜೆಸಿಬಿ ಚಾಲಕನ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಅನುಮತಿ ಪಡೆದುಕೊಳ್ಳದೆ ಪಾಯ ಅಗೆಯಲಾಗಿದೆ. ವಾಲಿದ ಕಟ್ಟಡ ನಕ್ಷೆ ಉಲ್ಲಂ ಸಿ ನಿರ್ಮಿಸಲಾಗಿದ್ದು, ಸಣ್ಣ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿ ಅಗೆದಿರುವುದರಿಂದ ಪಕ್ಕದ ಕಟ್ಟಡ ವಾಲಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

ಮುನ್ನೆಚ್ಚರಿಕಾ ಕ್ರಮವಾಗಿ ವಾಲಿದ ಕಟ್ಟಡದ ಅಕ್ಕಪಕ್ಕದ ಮನೆಲ್ಲಿದ್ದವರನ್ನು ಸ್ಥಳಾಂತರಿಸಲಾಗಿದೆ. ಪಾಲಿಕೆ ಅಧಿಕಾರಗಳ ನಿರ್ಲಕ್ಷದಿಂದ ಇದು ಆಗಿಲ್ಲ. ಹೊಸದಾಗಿ ಕಟ್ಟಡ ನಿರ್ಮಾಣ ಮಾಡಲು ಪ್ರಾರಂಭಿಸಿದವರ ಲೋಪದಿಂದ ಈ ರೀತಿ ಆಗಿದೆ.
-ಗೌತಮ್‌ ಕುಮಾರ್‌, ಬಿಬಿಎಂಪಿ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next