Advertisement
ಬಿಳಿತೊನ್ನು ಉಂಟಾಗಲು ಏನು ಕಾರಣ?ಬಿಳಿತೊನ್ನು ಉಂಟಾಗಲು ಖಚಿತವಾದ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ವಂಶವಾಹಿ ಕಾರಣಗಳು, ಆಟೊಇಮ್ಯೂನ್ ಕಾರಣ (ದೇಹದ ರೋಗ ನಿರೋಧಕ ವ್ಯವಸ್ಥೆಯು ಮೆಲಾನೊಸೈಟ್‌ಗಳ ಮೇಲೆ ದಾಳಿ ಮಾಡಿ ನಾಶ ಮಾಡುವುದು), ಆಕ್ಸಿಡೇಟಿವ್ ಒತ್ತಡ, ನರಶಾಸ್ತ್ರೀಯ ಕಾರಣ ಹೀಗೆ ಹಲವು ಕಾರಣಗಳಿವೆ ಎಂದು ಅಂದಾಜಿಸಲಾಗಿದೆ.
ತೊನ್ನು ಯಾವುದೇ ವಯಸ್ಸಿನಲ್ಲಿ ಆರಂಭವಾಗಬಹುದು, ಜೀವನದ ದ್ವಿತೀಯ ಮತ್ತು ತೃತೀಯ ದಶಕಗಳಲ್ಲಿ ಅದರ ಉಚ್ಛಾಯ ಸ್ಥಿತಿ ಉಂಟಾಗುತ್ತದೆ. ಪುರುಷ ಮತ್ತು ಮಹಿಳೆಯರಲ್ಲಿ ಇದು ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಆಟೊ ಇಮ್ಯೂನ್ ಸಮಸ್ಯೆ (ಥೈರಾಯ್ಡ ಸಮಸ್ಯೆ, ಸೋರಿ ಯಾಸಿಸ್, ಟೈಪ್ 1 ಮಧುಮೇಹ) ಹೊಂದಿರು ವವರಿಗೆ ಬಿಳಿತೊನ್ನು ಉಂಟಾಗುವ ಸಾಧ್ಯತೆ ಹೆಚ್ಚು. ಲಕ್ಷಣಗಳೇನು?
ಚರ್ಮದ ಮೇಲೆ ಬಿಳಿಯ ಕಲೆಗಳು ಕಾಣಿಸಿಕೊಳ್ಳುವು ದೊಂದೇ ತೊನ್ನಿನ ಲಕ್ಷಣ. ಇಂತಹ ಕೆಲವೇ ಕಲೆಗಳು ಕಾಣಿಸಿ ಕೊಳ್ಳಬಹುದು ಅಥವಾ ಬೇರೆ ಬೇರೆ ಗಾತ್ರ ಮತ್ತು ಆಕಾರದ ಕಲೆಗಳು ಕಾಣಿಸಿಕೊಳ್ಳಬಹುದು. ಇವುಗಳು ಸಾಮಾನ್ಯವಾಗಿ ವಾತಾವರಣಕ್ಕೆ ತೆರೆದುಕೊಂಡಿರುವ ಕೈಗಳು, ಕಾಲುಗಳು, ಮುಖ ಮತ್ತು ತುಟಿಗಳಂತಹ ದೇಹಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.
Related Articles
ತೊನ್ನು ಒಂದು ದೀರ್ಘಕಾಲಿಕ ಆರೋಗ್ಯ ಸಮಸ್ಯೆ. ಇದರ ಗಂಭೀರತೆಯನ್ನು ಕಡಿಮೆ ಮಾಡಲು ಚಿಕಿತ್ಸೆ ನೀಡಲಾಗುತ್ತದೆ, ಆದರೆ ಸಂಪೂರ್ಣ ಗುಣಪಡಿಸುವುದು ಕಷ್ಟಸಾಧ್ಯ.
ಹಾಲಿ ಲಭ್ಯವಿರುವ ಚಿಕಿತ್ಸೆಗಳಲ್ಲಿ ಔಷಧೀಯ ಮತ್ತು ಶಸ್ತ್ರಚಿಕಿತ್ಸೆಗಳು ಒಳಗೊಂಡಿವೆ. ರೋಗಿಯ ಆಯ್ಕೆ ಮತ್ತು ಎಷ್ಟು ಚರ್ಮ ತೊನ್ನು ಬಾಧಿತವಾಗಿದೆ ಎಂಬುದನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ.
ಔಷಧೀಯ ಚಿಕಿತ್ಸೆಯು ಚರ್ಮಕ್ಕೆ ಹಚ್ಚುವ ಕ್ರೀಮುಗಳನ್ನು (ಕಾರ್ಟಿಕೊಸ್ಟಿರಾಯ್ಡ ಕ್ರೀಮುಗಳು, ಟಾಕ್ರೊಲಿಮಸ್ ಇತ್ಯಾದಿ) ಒಳಗೊಂಡಿದೆ.
ಫೊಟೊಥೆರಪಿ (ಪಿಯುವಿಎ – ಸೊರಾಲೆನ್ +ಯುವಿಎ ಅಥವಾ ಎನ್‌ಬಿಯುವಿಬಿ – ನ್ಯಾರೊಬ್ಯಾಂಡ್ ಯುವಿಬಿ). ಈ ಚಿಕಿತ್ಸೆಯನ್ನು ವಾರಕ್ಕೆ 2ರಿಂದ 3 ಬಾರಿ ಒದಗಿಸಬೇಕಾಗುತ್ತದೆ ಮತ್ತು ಇಂತಹ ಚಿಕಿತ್ಸೆಗಳನ್ನು ಅನೇಕ ಬಾರಿ (200ರಿಂದ 300 ಬಾರಿ) ಒದಗಿಸಬೇಕಾಗುತ್ತದೆ. ಇದು ಕಡಿಮೆ ಅಡ್ಡ ಪರಿಣಾಮಗಳನ್ನು ಹೊಂದಿದ್ದು, ಕ್ರೀಮು ಅಥವಾ ಲೋಶನ್‌ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ.
Advertisement
ಶಸ್ತ್ರಚಿಕಿತ್ಸೆ: ಔಷಧಿ ಚಿಕಿತ್ಸೆಯು ವಿಫಲವಾದಾಗ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. ಇದು ಈ ಕೆಳಗಿನವುಗಳನ್ನು ಒಳಗೊಂಡಿದೆ:ಚರ್ಮ ಕಸಿ (ರೋಗಿಯ ದೇಹದಿಂದಲೇ ಒಂದು ಬದಿಯ ಆರೋಗ್ಯವಂತ ಚರ್ಮವನ್ನು ತೊನ್ನುಪೀಡಿತ ಭಾಗಕ್ಕೆ ಕಸಿ ಮಾಡಲಾಗುತ್ತದೆ). ಇದರಲ್ಲಿ ಸ್ಪ್ಲಿಟ್ ಸ್ಕಿನ್ ಥಿಕ್‌ನೆಸ್ ಕಸಿ, ಪಂಚ್ ಕಸಿ ಇತ್ಯಾದಿ ವಿಧಗಳಿವೆ.
ತೊನ್ನು: ವಿಧಗಳು– ವಿಭಾಗೀಯ ತೊನ್ನು (ಸೆಗಮೆಂಟಲ್ ವಿಟಿಲಿಗೊ): ಬಿಳಿ ಕಲೆಗಳು ದೇಹದ ಒಂದು ಪಾರ್ಶ್ವದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.
– ಸಾಮಾನ್ಯ: ಕಲೆಗಳು ಎಲ್ಲಿ ಉಂಟಾಗುತ್ತವೆ ಮತ್ತು ಯಾವ ಆಕಾರ-ಗಾತ್ರ ಎಂಬುದಕ್ಕೆ ನಿರ್ದಿಷ್ಟತೆ ಇರುವುದಿಲ್ಲ. ಇದು ಬಹಳ ಸಾಮಾನ್ಯವಾಗಿ ಉಂಟಾಗುವ ವಿಧ. ಕಲೆಗಳು ಬಹುತೇಕ ಸಮಾನವಾಗಿದ್ದು, ಅನೇಕ ಇರುತ್ತವೆ.
– ಅಕ್ರೊಫೇಶಿಯಲ್: ಇದು ಬಹುತೇಕ ಕೈಬೆರಳುಗಳು ಮತ್ತು ಕಾಲೆºರಳುಗಳಲ್ಲಿ ಉಂಟಾಗುತ್ತದೆ.
– ಮ್ಯುಕೋಸಲ್: ತುಟಿ ಮತ್ತು ಜನನಾಂಗ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ.
– ಯೂನಿವರ್ಸಲ್: ದೇಹದ ಬಹುತೇಕ ಭಾಗಗಳಲ್ಲಿ ಚರ್ಮ ಬಣ್ಣ ಕಳೆದುಕೊಳ್ಳುತ್ತದೆ. ಇದು ಅಪರೂಪದ ತೊನ್ನು ವಿಧ.
– ಫೋಕಲ್: ಒಂದು ಅಥವಾ ಕೆಲವೇ ಕೆಲವು ಬಿಳಿಯ ಕಲೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಇದು ಬಹುತೇಕ ಎಳೆಯ ಮಕ್ಕಳಲ್ಲಿ ಉಂಟಾಗುತ್ತದೆ. ಚಿಕಿತ್ಸೆಯ ಇತರ ಆಯ್ಕೆಗಳೆಂದರೆ:
– ಸನ್‌ಸ್ಕ್ರೀನ್‌ಗಳು
– ಬಿಳಿ ಕಲೆಗಳನ್ನು ಮುಚ್ಚಲು ಮೇಕಪ್
ಅಥವಾ ಡೈಯಂತಹ ಕಾಸೆ¾ಟಿಕ್‌ಗಳು
– ಟ್ಯಾಟೂ ಹಾಕಿಸಿಕೊಳ್ಳುವುದು
– ಆಪ್ತ ಸಮಾಲೋಚನೆ ಮತ್ತು ಬೆಂಬಲ ತೊನ್ನು: ಸಾಮಾನ್ಯ ತಪ್ಪು ತಿಳಿವಳಿಕೆಗಳು
1. ತೊನ್ನು ಸಂಪರ್ಕದಿಂದ ಹರಡುತ್ತದೆ.
ಮುಟ್ಟುವುದು, ಅಪ್ಪಿಕೊಳ್ಳುವುದು, ಚುಂಬಿಸುವುದು ಇತ್ಯಾದಿ ಸಂಪರ್ಕಗಳಿಂದ ತೊನ್ನು ಹರಡುವುದಿಲ್ಲ. ಇದು ಸೋಂಕು ರೋಗವಲ್ಲ.
2. ಸೂರ್ಯನ ಬೆಳಕಿನಿಂದ ತೊನ್ನು ಉಂಟಾಗುತ್ತದೆ.
ತೊನ್ನು ಉಂಟಾಗುವುದರಲ್ಲಿ ಸೂರ್ಯನ ಬೆಳಕಿಗೆ ಯಾವ ಪಾತ್ರವೂ ಇಲ್ಲ. ತೊನ್ನು ಬಾಧಿತರು ಸೂರ್ಯನ ಬೆಳಕಿಗೆ ಹೆಚ್ಚು ಸಂವೇದನಾಶೀಲರಾಗಿರುತ್ತಾರೆ, ಹೀಗಾಗಿ ನಿಯಮಿತವಾಗಿ ಸನ್‌ಸ್ಕ್ರೀನ್ ಉಪಯೋಗಿಸಬೇಕಾಗುತ್ತದೆ.
3. ತೊನ್ನು ಅಂದರೆ ಕುಷ್ಠರೋಗ.
ಚರ್ಮದ ಮೇಲೆ ಬಿಳಿಕಲೆಗಳನ್ನು ಹೊಂದಿರುವ ಎಲ್ಲರೂ ಕುಷ್ಠರೋಗಿಗಳಲ್ಲ. ಕುಷ್ಠ ಒಂದು ಸೋಂಕು ರೋಗವಾಗಿದ್ದು ಇದರಲ್ಲಿ ಸಂವೇದನೆ ಕಳೆದುಕೊಂಡ ಬಿಳಿ ಕಲೆಗಳು ಉಂಟಾಗುತ್ತವೆ. ಇದು ಗುಣಪಡಿಸಬಹುದಾದ ಕಾಯಿಲೆ.
4. ತೊನ್ನು ವಂಶವಾಹಿ ಕಾಯಿಲೆ.
ಕೇವಲ ಶೇ.2ರಷ್ಟು ತೊನ್ನು ರೋಗಿಗಳಲ್ಲಿ ಮಾತ್ರ ತೊನ್ನಿಗೂ ವಂಶವಾಹಿಗಳಿಗೂ ಸಂಬಂಧ ಕಂಡುಬರುತ್ತದೆ. ತೊನ್ನು: ಕ್ಷಿಪ್ರ ಸತ್ಯಾಂಶಗಳು
1. ದೀರ್ಘಕಾಲಿಕ ಸಮಸ್ಯೆ, ಸಂಪೂರ್ಣ ಗುಣಪಡಿಸುವುದು ಕಷ್ಟ
2. ಸೌಂದರ್ಯ ಕೆಡುತ್ತದೆ, ಹೀಗಾಗಿ ಬಹುತೇಕ ರೋಗಿಗಳು ಮಾನಸಿಕವಾಗಿ ತೊಂದರೆಗೀಡಾಗುತ್ತಾರೆ.
3. ತೊನ್ನು ಸೋಂಕುರೋಗವಲ್ಲ.
4. ಬಿಳಿಕಲೆಗಳು ದೇಹದ ಇತರ ಭಾಗಗಳಿಗೂ ಹರಡುತ್ತವೆಯೇ ಮತ್ತು ಎಷ್ಟು ಪ್ರಮಾಣದಲ್ಲಿ ವಿಸ್ತರಿಸುತ್ತವೆ ಎಂಬುದನ್ನು ಊಹಿಸುವುದು ಕಷ್ಟ. ಈ ಹರಡುವಿಕೆಯು ಕೆಲವು ವಾರಗಳಲ್ಲಿ ವಿಸ್ತರಿಸಬಹುದು ಅಥವಾ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹಾಗೆಯೇ ಇರಬಹುದು.
5. ತೊನ್ನು ಉಂಟಾಗದಂತೆ ತಡೆಯಲು ಯಾವ ಮಾರ್ಗವನ್ನೂ ಕಂಡುಕೊಳ್ಳಲಾಗಿಲ್ಲ. ಸಾಮಾಜಿಕ ಸವಾಲುಗಳನ್ನು ಎದುರಿಸಿ ಗೆಲ್ಲುವುದು
ಬಿಳಿತೊನ್ನು ಒಂದು ಸೌಂದರ್ಯ ಸಂಬಂಧಿ ಸಮಸ್ಯೆ ಮಾತ್ರವೇ ಅಲ್ಲ; ಇದರಿಂದ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗೀಡಾಗುತ್ತಾನೆ/ಳೆ. ಬಹುತೇಕ ತೊನ್ನು ರೋಗಿಗಳು ಸಮಾಜದಲ್ಲಿ ಹೊಂದಿಕೊಳ್ಳಲು ಸಮಸ್ಯೆ ಎದುರಿಸುತ್ತಾರೆ ಹಾಗೂ ಖನ್ನತೆ, ಆತಂಕಗಳಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ.
ಕಪ್ಪು ಅಥವಾ ಗಾಢ ವರ್ಣದ ಚರ್ಮ ಹೊಂದಿರುವವರು ಹೆಚ್ಚು ಸಮಸ್ಯೆಗೀಡಾಗಬಲ್ಲರು; ಏಕೆಂದರೆ ಚರ್ಮದಲ್ಲಿ ಬಿಳಿ ಕಲೆಗಳು ಹೆಚ್ಚು ಗಮನ ಸೆಳೆಯುವಂತೆ ಇರುತ್ತವೆ. ಭಾರತದಲ್ಲಿ ತೊನ್ನನ್ನು “ಬಿಳಿ ಕುಷ್ಠ’ ಎಂಬುದಾಗಿ ಕರೆಯಲಾಗುತ್ತದೆ. ಕುಷ್ಠ ಒಂದು ಸೋಂಕುರೋಗವಾಗಿದ್ದು, ಉಲ್ಬಣಗೊಂಡರೆ ಅಂಗಾಂಗಗಳು ಊನವಾಗುತ್ತವೆ; ಆದರೆ ಇದನ್ನು ಗುಣಪಡಿಸಬಹುದಾಗಿದೆ. ಭಾರತದಲ್ಲಿ ಕುಷ್ಠ ರೋಗದ ಬಗ್ಗೆ ಬಹಳ ಮೂಢನಂಬಿಕೆಗಳಿವೆ. ತೊನ್ನಿನಲ್ಲೂ ಕುಷ್ಠದಂತೆಯೇ ಬಿಳಿಯ ಕಲೆಗಳು ಉಂಟಾಗುವ ಕಾರಣ ಇದನ್ನು ಕುಷ್ಠ ಎಂದು ತಪ್ಪು ತಿಳಿಯಲಾಗುತ್ತದೆ. ಹೀಗಾಗಿ ನಮ್ಮ ಸಮಾಜದಲ್ಲಿ ಹೆಚ್ಚು ಅರಿವು ಮೂಡಿಸಬೇಕಾದ ಅಗತ್ಯ ಇದೆ. ತೊನ್ನಿನಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳಿಲ್ಲ, ಇದು ಇತರರಿಗೆ ಹರಡುವುದಿಲ್ಲ ಹಾಗೂ ತೊನ್ನು ರೋಗಿಗಳನ್ನು ಸಮಾಜ ಸ್ವೀಕರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ. ತೊನ್ನು ರೋಗಿಗಳಲ್ಲಿ ಅರಿವು ಮೂಡಿಸುವ ಮೂಲಕ ಅವರ ಜೀವನ ಗುಣಮಟ್ಟವನ್ನು ಉತ್ತಮಪಡಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ. ಕೆಲವು ಪ್ರಕರಣಗಳಲ್ಲಿ ಆಪ್ತ ಸಮಾಲೋಚನೆ ಮತ್ತು ಮಾನಸಿಕ ಸಲಹೆಯೂ ಅಗತ್ಯವಾಗಬಹುದಾಗಿದೆ. ತೊನ್ನು ರೋಗದ ಬಗ್ಗೆ ಅರಿವು ವಿಸ್ತರಿಸುವುದಕ್ಕಾಗಿ ಪ್ರತೀ ವರ್ಷ ಜೂನ್ 25ನ್ನು ಜಾಗತಿಕ ತೊನ್ನುರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಡಾ| ದೀಪ್ತಿ ಡಿ’ಸೋಜಾ,
ಅಸಿಸ್ಟೆಂಟ್ ಪ್ರೊಫೆಸರ್
ಚರ್ಮರೋಗ ವಿಭಾಗ
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು.