ಜೇವರ್ಗಿ: ಶಾಲೆಗಳು ಪ್ರಾರಂಭವಾಗಿ ಎರಡು ತಿಂಗಳಾಗುತ್ತಾ ಬಂದಿದೆ. ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದರೇ, ಅವರಿಗೆ ಮೂಲಸೌಕರ್ಯ ಕಲ್ಪಿಸಲು ಶಿಕ್ಷಣ ಇಲಾಖೆಗೆ ಸಾಧ್ಯವಾಗುತ್ತಿಲ್ಲ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಶಖಾಪೂರ ಎಸ್.ಎ ಗ್ರಾಮ ಸೇರಿದಂತೆ ತಾಲೂಕಿನ ಹಲವಾರು ಶಾಲೆಗಳು ಸೋರಲು ಆರಂಭಿಸಿವೆ. ಇದರಿಂದ ಆತಂಕದ ಮಧ್ಯೆಯೇ ಮಕ್ಕಳು ಪಾಠ ಆಲಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ತಾಲೂಕಿನ ಶಖಾಪೂರ ಎಸ್.ಎ ಗ್ರಾಮದಲ್ಲಿ 7 ಕೋಣೆಗಳ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವಿದ್ದು, 1ರಿಂದ 7ನೇ ತರಗತಿಯವರೆಗೆ ಒಟ್ಟು 150 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 4 ಜನ ಖಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಪಾಠ ಭೋಧನೆ ಮಾಡುತ್ತಿದ್ದಾರೆ. ಒಟ್ಟು 7 ಕೋಣೆಗಳ ಪೈಕಿ 2 ಕೋಣೆಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ, 2 ಕೋಣೆಗಳು ಸೋರುತ್ತಿದ್ದು, 1 ಪತ್ರಾಸ ಕೋಣೆ, ಉಳಿದ 2 ಕೋಣೆಗಳ ಪೈಕಿ ಮಕ್ಕಳ ವಿದ್ಯಾಬ್ಯಾಸ, ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ.
ಶಾಲಾ ಆವರಣದಲ್ಲಿ ಮಳೆಗಾಲ ಬಂದರೇ ಸಾಕು ನೀರು ನಿಂತು ಕೆರೆಯಂತಾಗಿ ಮಕ್ಕಳಿಗೆ ಆಟವಾಡಲು ಸಮಸ್ಯೆಯಾಗುತ್ತಿದೆ. ಎರಡು ಕೋಣೆಗಳು ಯಾವಾಗ ಕುಸಿಯುತ್ತವೋ ಹೇಳಲಾಗದು. ಇತ್ತ ಪೋಷಕರು ಹಾಗೂ ಶಿಕ್ಷಕರಿಗೆ ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ಶುರುವಾಗಿದೆ. ಇಲ್ಲಿಯ ಸಮಸ್ಯೆ ಕುರಿತು ಎಸ್‌ಡಿಎಂಸಿ, ಗ್ರಾಮಸ್ಥರು, ಪೋಷಕರು ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 150 ಮಕ್ಕಳಿಗೆ ಎರಡು ಕೋಣೆಗಳಲ್ಲಿ ಕುರಿ ಹಿಂಡಿನಂತೆ ಕೂರಿಸಿ ಪಾಠ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದ ಮಕ್ಕಳು ಕುಳಿತುಕೊಳ್ಳುವ ಬೆಂಚ್ ಗಳು ತುಕ್ಕು ಹಿಡಿದು ಹಾಳಾಗುತ್ತಿವೆ, ಪುಸ್ತಕಗಳು ಒದ್ದೆಯಾಗಿವೆ. ಇದರಿಂದ ಮಕ್ಕಳ ಭವಿಷ್ಯ ಬೀದಿಗೆ ಬಿದ್ದಿದೆ. ಮಳೆಗಾಲದಲ್ಲಿ ಮೇಲ್ಛಾವಣಿ ಮೇಲೆ ನೀರು ನಿಂತು ಪದರು ಉದುರಿ ಬೀಳುತ್ತಿದೆ. ಎರಡು ಕೋಣೆಗಳು ಶಿಥಿಲಗೊಂಡರೂ ಇಲ್ಲಿಯವರೆಗೂ ತೆರವು ಕಾರ್ಯಾಚರಣೆ ನಡೆಸದೇ ಹಾಗೇ ಬಿಡಲಾಗಿದೆ. ಶಾಲೆಯ ದಾಖಲಾತಿಗಳು, ಮಕ್ಕಳ ಪುಸ್ತಕ, ಸಾಮಗ್ರಿ ಮಳೆ ಬಂದಾಗ ಒದ್ದೆಯಾಗುತ್ತವೆ. ಪೀಠೊಪಕರಣ, ಕಬ್ಬಿಣದ ಕಂಬಿಗಳು, ಸಲಾಖೆಗಳು, ಇತರೆ ವಸ್ತುಗಳು ತುಕ್ಕು ಹಿಡಿದು ಮೂಲ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ. ಗೋಡೆಯ ಮೇಲಿನ ಸುಣ್ಣ ಬಣ್ಣ ಕಳಚಿ ಬೀಳುತ್ತಿದೆ. ನೆಲದ ಮೇಲೆ ಪಾದದವರೆಗೂ ನೀರು ನಿಂತರೂ ಶಿಕ್ಷಕರು ಯಾವ ಸಮಯದಲ್ಲಿ ಏನಾಗುತ್ತೋ ಎಂಬ ಭಯದ ವಾತಾವರಣದಲ್ಲಿ ಪಾಠ ಮಾಡುವ ಅನಿವಾರ್ಯತೆ ಎದುರಾಗಿದೆ.
ಹೀಗಿದ್ದರೂ ಯಾರೂ ಈ ಶಾಲೆಯ ಕಡೆ ಗಮನಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಶಾಲಾ ಕೋಣೆಗಳ ದುರಸ್ತಿ ಜತೆಗೆ ಹೊಸ ಕೋಣೆಗಳ ನಿರ್ಮಾಣ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೇ ಮುಂದಾಗುವ ಅನಾಹುತಕ್ಕೆ ಶಿಕ್ಷಣ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಮಳೆಗಾಲದಲ್ಲಿ ಸಾಕಷ್ಟು ತೊಂದರೆಯಾಗುತ್ತಿದ್ದು, ಎರಡು ಕೋಣೆಗಳಲ್ಲಿ ತರಗತಿ ನಡೆಸಲಾಗುತ್ತಿದೆ. ಇದರಿಂದ ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ. ಶಾಲೆಯ ಕೋಣೆಗಳ ದುರಸ್ತಿ ಬಗ್ಗೆ ಗ್ರಾಪಂ ಸದಸ್ಯರಿಗೆ, ಶಿಕ್ಷಣ ಇಲಾಖೆಯ ಅಧಿ ಕಾರಿಗಳಿಗೆ ಮನವಿ ಮಾಡಲಾಗಿದೆ.
–ಇಮಾಮಸಾಬ್, ಮುಖ್ಯ ಶಿಕ್ಷಕರು ಶಖಾಪೂರ ಎಸ್.ಎ. ಶಾಲೆ
–ವಿಜಯಕುಮಾರ ಎಸ್.ಕಲಾ