Advertisement

ಸೋರುತ್ತಿದೆ ಅಫಜಲಪುರ ಕೆರೆ

10:42 AM Dec 26, 2017 | |

ಅಫಜಲಪುರ: ಪಟ್ಟಣದ ದೊಡ್ಡ ಕೆರೆ ಏರಿ ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿದ್ದು, ಸಂಬಂಧಿಸಿದವರು ಎಚ್ಚರಗೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ! ಪಟ್ಟಣದ ಅಗ್ನಿಶಾಮಕ ಠಾಣೆ ಸಮೀಪದಲ್ಲಿರುವ ಕೆರೆ 1983ರಲ್ಲಿ ನಿರ್ಮಾಣವಾಗಿದೆ. ಸುತ್ತಮುತ್ತಲಿನ ಸಾವಿರಾರು ಎಕರೆ ಭೂಮಿಗೆ ಇದೇ ಕೆರೆಯಿಂದ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಲ್ಲದೆ ಕೆರೆ ತುಂಬಿದರೆ ಸುತ್ತಮುತ್ತಲಿನ ಮೂರ್‍ನಾಲ್ಕು ಕಿಮೀ ವರೆಗೂ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕೆರೆಗೆ ನೀರು ತುಂಬಲಾಗಿದೆ. ಆದರೆ ಹೆಚ್ಚಾದ ನೀರು ಹೊರಹೋಗಲು ಸೂಕ್ತ ದಾರಿ ಇಲ್ಲ. ನೀರು ತುಂಬಿ ಹೆಚ್ಚಾಗಿ ಕೆರೆಗೆ ಕೋಡಿ ಬೀಳುತ್ತಿದೆ. ಕೆರೆ ಏರಿಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ತಕ್ಷಣವೇ ದುರಸ್ತಿಗೆ ಮುಂದಾಗಬೇಕಾಗಿದೆ.

Advertisement

ಕೆರೆಯಲ್ಲಿ 54.01 ಘನ ಮಿಲಿಯನ್‌ ಅಡಿಗಳಷ್ಟು ವಿಸ್ತೀರ್ಣದಲ್ಲಿ 8.38 ಹೆಕ್ಟೇರ್‌ನಷ್ಟು ನೀರು ನಿಲ್ಲುತ್ತದೆ. 433 ಹೆಕ್ಟೇರ್‌ ಪ್ರದೇಶ ನೀರಾವರಿಯಾಗುತ್ತಿದೆ. ಆದರೀಗ ಕೆರೆ ಏರಿ ಒಡೆಯುವ ಹಂತದಲ್ಲಿದೆ. ಅಲ್ಲಲ್ಲಿ ಬಿರುಕು ಬಿಟ್ಟಿದ್ದರಿಂದ ಕೆರೆ ಏರಿ ಕುಸಿಯುತ್ತಿದೆ. ಒಂದು ಕಡೆ ಸುಮಾರು 200 ಅಡಿಗಳಷ್ಟು ಕೆರೆ ಕುಸಿದಿದೆ. ಒಂದು ವೇಳೆ ಏರಿ ಒಡೆದರೆ ಕೆರೆ ಕೆಳಗಿನ ನೂರಾರು ಎಕರೆ ಜಮೀನು ಹಾಳಾಗಲಿದೆ. ಅಲ್ಲದೆ ಕಟಾವಿಗೆ ಬಂದಿರುವ ಕಬ್ಬು, ತೊಗರಿ, ಹತ್ತಿ ಬೆಳೆ ನಾಶವಾಗಿ ಅಪಾರ ನಷ್ಟ ಉಂಟಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಕೆರೆ ನಿರ್ಮಾಣವಾದಾಗಿನಿಂದ ಇಲ್ಲಿವರೆಗೂ ರಿಪೇರಿ ಮಾಡಿಸದೇ ಇರುವುದು ಏರಿ ಒಡೆಯುವ ಹಂತ ತಲುಪಿರುವುದು ಪ್ರಮುಖ ಕಾರಣ ಎನ್ನುತ್ತಾರೆ ರೈತರು.

ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಮಣ್ಣು ತೆಗೆಸಲಾಗಿತ್ತು. ಅನಂತರ ಭೀಮಾ ನದಿಯಿಂದ ಕಾಲುವೆಗಳ ಮೂಲಕ ಹೆಚ್ಚಾದ ನೀರನ್ನು ಕೆರೆಗೆ ತುಂಬಿಸಲಾಗಿತ್ತು. ಕೆರೆ ಸುಮಾರು ವರ್ಷಗಳಿಂದ ನೀರು ಇರಲಿಲ್ಲ. ಆದರೆ ಒಮ್ಮೆಲೆ ನೀರು ಬಂದು ಕಲ್ಲು ಮತ್ತು ಮಣ್ಣಲ್ಲಿ ಕಟ್ಟಿರುವ ಏರಿ ಕುಸಿಯುತ್ತಿದೆ. ಅಲ್ಲದೆ ಮಣ್ಣು ಕುಸಿದು ಕಲ್ಲಿನೊಳಗೆ ನೀರು ಸೇರಿ ಏರಿ ಒಡೆಯುತ್ತಿದೆ. ಮತ್ತು ಏರಿ ಮೇಲಿಂದ ಕಬ್ಬಿನ ಟ್ರಾಕ್ಟರ್‌, ಭಾರಿ ವಾಹನಗಳು, ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ಹೀಗಾಗಿ ಮಣ್ಣು ಕುಸಿಯುತ್ತಿದೆ ಎಂದು ತಿಳಿಸಿದ್ದಾರೆ.

ಕೆರೆ ಉಳಿಸುವ ಕೆಲಸ ಮಾಡಲಿ
ಕೆರೆ ನಂಬಿ ನಾವು ಬದುಕುತ್ತಿದ್ದೇವೆ. ಕೆರೆ ಏರಿ ಕುಸಿಯುತ್ತಿರುವುದು ಕಂಡು ನಮಗೆ ಭಯವಾಗುತ್ತಿದೆ. ಒಂದು ವೇಳೆ ಕೆರೆ ಒಡೆದರೆ ನಮ್ಮ ಬದುಕು ಮೂರಾಬಟ್ಟೆಯಾಗಲಿದೆ. ಹೀಗಾಗಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಕೆರೆ ಉಳಿಸುವ ಕೆಲಸ ಮಾಡಬೇಕು.
 ಮಲ್ಲಿಕಾರ್ಜುನ ಶರಣಪ್ಪ, ವಾಳಿ ಹಾಗೂ ಕೆರೆ ಸುತ್ತಮುತ್ತಲಿನ ರೈತರು

ಪಟ್ಟಣಕ್ಕೆ ನುಗ್ಗುತ್ತಿದೆ ಹೆಚ್ಚಾದ ನೀರು
ಅಫಜಲಪುರ ಕೆರೆ ರಿಪೇರಿ ಮಾಡಿಸದೆ ಒಮ್ಮೆಲೇ ನೀರು ಬಿಡಲಾಗಿದೆ. ಕೆರೆ ಸಂಪೂರ್ಣ ತುಂಬಿ ಹೆಚ್ಚಾದ ನೀರು ಪಟ್ಟಣಕ್ಕೆ ನುಗ್ಗುತ್ತಿದೆ. ಎಪಿಎಂಸಿ ರಸ್ತೆಯಲ್ಲಿರುವ ಅಂಬಾಭವಾನಿ ಮಂದಿರಕ್ಕೆ ಹೋಗಲು ದಾರಿಯೇ ಇಲ್ಲದಂತಾಗಿದೆ. 
 ಸುನೀಲ ಹೊಸ್ಮನಿ, ಪ್ರಕಾಶ ಫುಲಾರಿ, ಜೆಡಿಎಸ್‌ ಮುಖಂಡರು

Advertisement

ಪುನಃ ನಿರ್ಮಾಣ
ಕೆರೆ ಎಲ್ಲಿ ಬಿರುಕು ಬಿಟ್ಟಿದೆ ನೋಡಿಕೊಂಡು ಅದನ್ನು ಅಗೆಸಿ ಪುನಃ ನಿರ್ಮಿಸಲಾಗುತ್ತದೆ. ಅಲ್ಲದೆ ಕೆರೆಯಿಂದ ಯಾರಿಗೂ
ಅಪಾಯವಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಕಾಲುವೆ ನೀರು ಕೆರೆಗೆ ಬಿಡುವುದನ್ನು ನಿಲ್ಲಿಸುವಂತೆ ಕೆಎನ್‌ಎನ್‌ಎಲ್‌ ಎಇಇ ಐನಾಪುರ ಅವರಿಗೆ ಸೂಚಿಸಲಾಗಿದೆ. ಸ್ವಲ್ಪ ನೀರು ಹೊರ ಬಿಟ್ಟು ಕೆರೆ ರಿಪೇರಿ ಮಾಡಲಾಗುವುದು.
 ಆರ್‌.ಐ. ಇನಾಮದಾರ, ಎಇಇ ಸಣ್ಣ ನೀರಾವರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next