ಧಾರವಾಡ: ನೆತ್ತಿಗೆ ನೆರಳಾಗಿದ್ದ ಸೂರು ನೆಲಕಚ್ಚಿಯಾಗಿದೆ. ಬಿದ್ದ ಗೋಡೆ ಕಟ್ಟಿಕೊಳ್ಳುವ ಶಕ್ತಿ ಇಲ್ಲ. ಅಧಿಕಾರಿಗಳು ಹಣ ಕೊಟ್ಟವರ ಮನೆಯನ್ನು ಪಟ್ಟಿಗೆ ಸೇರಿಸಿದರೆ ನಮ್ಮ ಗತಿ ಏನು ಎಂಬ ಆತಂಕ. ಮನೆ ಬಿದ್ದು ಪರಿಹಾರ ಪಡೆಯುವವರ ಪಟ್ಟಿಯಲ್ಲಿ ರಾಜಕಾರಣಿಗಳ ಬೆಂಬಲಿಗರಿಗೆ ಅಗ್ರಸ್ಥಾನ. ಒಟ್ಟಿನಲ್ಲಿ ಸೋರುತಿಹುದು ಮನೆಯ ಮಾಳಗಿ ಅನ್ಯಾಯದಿಂದ.
ಹೌದು. ಜಿಲ್ಲೆಯಲ್ಲಿ ಜೂನ್‌ನಿಂದ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಮಳೆಗೆ 3800 ಮನೆಗಳಿಗೆ ಹಾನಿಯಾಗಿದ್ದು, ಈ ಮಾಹಿತಿಯನ್ನು ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆ ಮಾಡಿಯಾಗಿದೆ. ಬಿದ್ದ ಮನೆಗಳ ಮಾಲೀಕರಿಗೆ ಸರ್ಕಾರದಿಂದ ಪರಿಹಾರಕ್ಕೆ ಸೂಚಿಸಿದ್ದು, ಇಲ್ಲಿ ಭಾರಿ ಗೋಲ್‌ಮಾಲ್ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಒಟ್ಟು 3226 ಮನೆಗಳಿಗೆ ತೀವ್ರ ಹಾನಿಗೊಳಗಾಗಿದ್ದು, ಈ ಪೈಕಿ 3061 ಮನೆಗಳನ್ನು ಬಿ ಮತ್ತು ಸಿ ಕೆಟಗೇರಿ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ 1283 ಬಿ ಕೆಟಗೇರಿ ಮನೆಗಳು, 1943 ಸಿ ಕೆಟಗೇರಿಗೆ ಮನೆಗಳು ಸೇರ್ಪಡೆಯಾಗಿವೆ. ಈ ಪೈಕಿ 1170 ಎ ಮತ್ತು 1891 ಸಿ ಕೆಟಗೇರಿ ಮನೆಗಳನ್ನು ಗುರುತಿಸಲಾಗಿದೆ. ಅತೀ ಹೆಚ್ಚು ಮನೆಗಳು ಧಾರವಾಡ-ಕುಂದಗೋಳ ತಾಲೂಕಿನಲ್ಲಿಯೇ ಹಾನಿಗೊಳಗಾಗಿವೆ.
ಧಾರವಾಡ ತಾಲೂಕಿನಲ್ಲಿ 859, ಅಳ್ನಾವರ-20, ಹುಬ್ಬಳ್ಳಿ ಗ್ರಾಮೀಣ-460, ಹುಬ್ಬಳ್ಳಿ ನಗರ-111, ಕಲಘಟಗಿ 297, ನವಲಗುಂದ-541,ಅಣ್ಣಿಗೇರಿ-320 ಹಾಗೂ ಕುಂದಗೋಳ-453 ಮನೆಗಳು ಬಿ.ಸಿ.ಕೆಟಗೇರಿಯಲ್ಲಿ ಹಾನಿಗೊಳಗಾಗಿರುವ ಪಟ್ಟಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.
40 ಮನೆಗಳು ಅತಂತ್ರ: ಸದ್ಯಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾದ ಪಟ್ಟಿ ಹೊರತು ಪಡಿಸಿ ಆ ನಂತರವೂ ಅಂದರೆ ಎರಡನೇ ಬಾರಿಗೆ ಜನರ ಒತ್ತಾಯದ ಮೇರೆಗೆ ಬಿದ್ದ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ 40ಕ್ಕೂ ಅಧಿಕ ಮನೆಗಳಿಗೆ ಭಾರಿ ಹಾನಿಯಾಗಿದ್ದರೂ ಅವುಗಳನ್ನು ಇನ್ನು ಪರಿಹಾರದ ಪಟ್ಟಿಗೆ ಸೇರಿಸಿಲ್ಲ. ಇದಕ್ಕೆ ಸರ್ಕಾರದ ಒಪ್ಪಿಗೆ ಸೂಚಿಸಿದರೆ ಮಾತ್ರ ಈ ಮನೆಗಳು ಪರಿಹಾರ ಪಟ್ಟಿಗೆ ಸೇರಿಕೆಯಾಗಲಿವೆ. ಆದರೆ ಇನ್ನು 150 ಮನೆಗಳು ಭಾಗಶಃ ಜಖಂಗೊಂಡಿದ್ದು, ಅವುಗಳಿಗೆ ಪರಿಹಾರ ನೀಡಬೇಕೆನ್ನುವ ಆಗ್ರಹ ಕೇಳಿ ಬರುತ್ತಿದೆ. ಆದರೆ ಇವುಗಳನ್ನು ಪರಿಹಾರ ಪಟ್ಟಿಗೆ ಸೇರ್ಪಡೆ ಗೊಳಿಸುವುದು ಕಷ್ಟ ಎನ್ನುತ್ತಿದ್ದಾರೆ ಅಧಿಕಾರಿಗಳು.
ಬಸವ-ಅಂಬೇಡ್ಕರ್ ಪೂರ್ಣವಾಗಿಲ್ಲ: ಬಸವ ವಸತಿ ಯೋಜನೆಯಡಿ ಒಟ್ಟು ಜಿಲ್ಲೆಯಲ್ಲಿ 3772 ಜನರ ಪೈಕಿ 3646 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ವಾಜಪೇಯಿ ನಗರ ವಸತಿ ಯೋಜನೆಯಡಿ ಒಟ್ಟು 456 ಜನರು ಆಯ್ಕೆಯಾಗಿದ್ದು ಈ ಪೈಕಿ ಈವರೆಗೂ 253 ಜನರಿಗೆ ಮಾತ್ರ ಮನೆಗಳು ಲಭಿಸಿವೆ. ಡಾ|ಅಂಬೇಡ್ಕರ್ ನಿವಾಸ ವಸತಿ ಯೋಜನೆ ಅಡಿಯಲ್ಲಿ 1188 ಜನರ ಪೈಕಿ 1059 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದೇ ಯೋಜನೆ ನಗರ ವ್ಯಾಪ್ತಿಯಲ್ಲಿ 144 ಜನ ಫಲಾನುಭವಿಗಳಿದ್ದು ಈವರೆಗೂ 93 ಜನರಿಗೆ ಮಾತ್ರ ಮನೆಗಳು ಲಭಿಸಿವೆ.
ಪಕ್ಷಭೇದ ನಿಜವೇ?: ಮನೆ ಕಳೆದುಕೊಂಡವರಿಗೆ ಯಾವುದೇ ರಾಜಕೀಯ ಪಕ್ಷ, ಜಾತಿ, ಸ್ವಜನ ಪಕ್ಷಪಾತ ಯಾವುದೂ ಮಾನದಂಡವಲ್ಲ. ಆದರೆ ಪ್ರಭಾವಿ ರಾಜಕಾರಣಿಗಳ ಹಿಂಬಾಲಕರಿಗೆ ಮನೆ ಪರಿಹಾರ ನೀಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಅಷ್ಟೇಯಲ್ಲ ಆಡಳಿತ ಪಕ್ಷದ ಶಾಸಕರ ಹಿಂಬಾಲಕರಿಗೆ ಮನೆಗಳನ್ನು ನೀಡಲಾಗಿದ್ದು, ಬೇರೆ ಪಕ್ಷಗಳ ಬೆಂಬಲಿಗರ ಮನೆಗಳನ್ನು ಉದ್ದೇಶ ಪೂರ್ವಕವಾಗಿಯೇ ಪಟ್ಟಿಯಿಂದ ಕೈ ಬಿಡಲು ಒತ್ತಡ ಹೇರಲಾಗಿದೆ ಎಂಬ ಆರೋಪವೂ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಕೇಳಿ ಬರುತ್ತಿದೆ. ಅಷ್ಟೇಯಲ್ಲ ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ. ಇನ್ನು ಮನೆ ಪರಿಹಾರದಲ್ಲಿ ಆಗಿರುವ ಅನ್ಯಾಯದಿಂದ ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ನಡೆದ ಬಗ್ಗೆ ಪ್ರತಿಭಟನೆ ನಡೆಸಲಾಯಿತು.
ಕಿಕ್‌ಬ್ಯಾಕ್ ಆರೋಪ
ಬಿದ್ದ ಮನೆಗಳಿಗೆ ಪರಿಹಾರ ನೀಡಲು ಸರ್ಕಾರ ಎ ಕೆಟಗೇರಿಗೆ 5ಲಕ್ಷ ರೂ.ಬಿ ಕೆಟಗೇರಿಗೆ 3ಲಕ್ಷ ರೂ. ಹಾಗೂ ಸಿ ಶ್ರೇಣಿಗೆ 50 ಸಾವಿರ ರೂ. ನಿಗದಿಪಡಿಸಿದೆ. ಜಿಲ್ಲೆಯಲ್ಲಿ ಒಂದೇ ಒಂದು ಎ ಶ್ರೇಣಿ ಮನೆ ಪರಿಹಾರ ಪಟ್ಟಿಗೆ ಸೇರಿಲ್ಲ. ಆದರೆ ಬಿ ಮತ್ತು ಸಿ ಶ್ರೇಣಿ ಮಧ್ಯೆ ಇರುವ ಪರಿಹಾರ ಮೊತ್ತದ ಅಂತರ ಸಾಕಷ್ಟು ಭ್ರಷ್ಟಾಚಾರಕ್ಕೆ ಕಾರಣವಾಗುತ್ತಿದೆ. ಇಲ್ಲಿ ಸ್ಥಳೀಯ ಮಟ್ಟದ ಅಧಿಕಾರಿಗಳು ಕಿಕ್‌ಬ್ಯಾಕ್ ಪಡೆದು ಸಿ ಯಿಂದ ಬಿ ಶ್ರೇಣಿಗೆ ಮನೆಗಳನ್ನು ಸೇರ್ಪಡೆ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಅಷ್ಟೇಯಲ್ಲ ಬಿ ಶ್ರೇಣಿಗೆ ಯೋಗ್ಯವಾಗಿದ್ದರೂ ಅಂತವುಗಳನ್ನು ಸಿ ಶ್ರೇಣಿಗೆ ಸೇರ್ಪಡೆ ಮಾಡಿ ಹಣ ಪಡೆಯಲಾಗಿದೆ ಎಂದು ಅನೇಕರು ದೂರುತ್ತಿದ್ದಾರೆ.
ಮೂರು ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದೇವೆ. ಆಯ್ಕೆಯಲ್ಲಿ ಪ್ರಮಾದವಾಗಿರುವ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳೇ ಎರಡು ಸಲ ಖುದ್ದಾಗಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿಯೇ ಪಟ್ಟಿ ಮಾಡಿದ್ದಾರೆ. ಇಂತಲ್ಲೇ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆ ಕೊಟ್ಟರೆ ಕ್ರಮ ವಹಿಸುತ್ತೇವೆ. ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಹಣ ಕೊಟ್ಟವರಿಗೆ, ರಾಜಕಾರಣಿಗಳ ಹಿಂಬಾಲಕರಿಗೆ, ಹಳ್ಳಿಯಲ್ಲಿರುವ ರಾಜಕೀಯ ಮುಖಂಡರಿಗೆ ಹೆಚ್ಚು ಮನೆಗಳನ್ನೇ ಪರಿಹಾರದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ದೂರು ನೀಡಿದ್ದು, ಕ್ರಮ ವಹಿಸಬೇಕು. –
ಬಸವರಾಜ ಕೊರವರ, ಜನಜಾಗೃತಿ ಸಂಘಟನೆ ಮುಖ್ಯಸ್ಥ.
ಬಸವರಾಜ ಹೊಂಗಲ್