Advertisement

leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ

01:50 AM Sep 29, 2024 | Team Udayavani |

ದಾವಣಗೆರೆ: ಮುಖ್ಯ ಪರೀಕ್ಷೆ ಮಾದರಿಯಲ್ಲಿಯೇ ಪ್ರಸಕ್ತ ಸಾಲಿನ ಎಸೆಸೆಲ್ಸಿ ಅರ್ಧ ವಾರ್ಷಿಕ ಪರೀಕ್ಷೆ (ಸಂಕಲನಾತ್ಮಕ ಮೌಲ್ಯಮಾಪನ-01) ನಡೆಸಲು ಮುಂದಾಗಿರುವ ರಾಜ್ಯ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಪ್ರಶ್ನೆಪತ್ರಿಕೆ ಸೋರಿಕೆ ಸಮಸ್ಯೆ ಎದುರಾಗಿತ್ತು. ಇದನ್ನು ತಡೆಯಲು ಪರೀಕ್ಷೆ ಮಧ್ಯಾಂತರದಲ್ಲಿಯೇ ಮಂಡಳಿ ಕ್ರಮ ಕೈಗೊಂಡಿದ್ದು, ಆಯಾ ದಿನದ ವಿಷಯಗಳ ಪ್ರಶ್ನೆಪತ್ರಿಕೆ ಅಂದೇ ಶಿಕ್ಷಕರ ಲಾಗಿನ್‌ಗೆ ಸಿಗಲಿದೆ.

Advertisement

ಮಂಡಳಿಯ ಈ ಕ್ರಮದಿಂದ ವೇಳಾಪಟ್ಟಿಯಲ್ಲಿ ನಿಗದಿಯಾಗಿರುವ ಆಯಾ ವಿಷಯ ಪರೀಕ್ಷೆಗಳಿಗೆ ಅದೇ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರ ಲಾಗಿನ್‌ಗೆ ಪ್ರಶ್ನೆಪತ್ರಿಕೆ ಲಭಿಸಲಿವೆ. ಈ ಹೊಸ ಕ್ರಮದಿಂದಾಗಿ ಸೆ. 28ರಿಂದಲೇ ಶಾಲಾ ಮುಖ್ಯ ಶಿಕ್ಷಕರು ಬೆಳಗಿನ ಜಾವ ತಮ್ಮ ಲಾಗಿನ್‌ನಲ್ಲಿರುವ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷಾ ಸಮಯಕ್ಕೆ ವಿತರಿಸಲು ಕ್ರಮ ವಹಿಸಬೇಕಾಗಿದೆ.

ಕಾನೂನು ಕ್ರಮದ ಎಚ್ಚರಿಕೆ
ಒಂದು ವೇಳೆ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಫೋಟೋ ತೆಗೆಯುವುದು, ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ನಕಲು ಚೀಟಿ ಸರಬರಾಜು ಮಾಡುವುದು ಸೇರಿ ಇನ್ನಿತರ ಅಕ್ರಮ, ಅವ್ಯವಹಾರ ನಡೆದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಂಡಳಿ ಎಚ್ಚರಿಕೆಯನ್ನೂ ನೀಡಿದೆ.

ಮುಖ್ಯಶಿಕ್ಷಕರಿಗೆ ತಲೆಬಿಸಿ
ಈ ಮೊದಲು ಮಂಡಳಿ ಆಯಾ ವಿಷಯ ಪರೀಕ್ಷೆಗೆ ಸಂಬಂಧಿಸಿ ಪ್ರಶ್ನೆಪತ್ರಿಕೆಗಳು ಒಂದು ದಿನ ಮುಂಚಿತವಾಗಿ ಮಧ್ಯಾಹ್ನ 1 ಗಂಟೆಗೆ ಮುಖ್ಯ ಶಿಕ್ಷಕರ ಲಾಗಿನ್‌ನಲ್ಲಿ ಲಭಿಸುವ ವ್ಯವಸ್ಥೆ ಮಾಡಿತ್ತು. ಮುಖ್ಯ ಶಿಕ್ಷಕರು ಒಟಿಪಿ ನಮೂದಿಸಿ ಪ್ರಶ್ನೆಪತ್ರಿಕೆ ಡೌನ್‌ಲೋಡ್‌ ಮಾಡಿ ಶಾಲೆಯಲ್ಲಿ ಇಲ್ಲವೇ ಝೆರಾಕ್ಸ್‌ ಅಂಗಡಿಗೆ ಹೋಗಿ ಝೆರಾಕ್ಸ್‌ ಮಾಡಿಸಿ, ಮರುದಿನ ಪರೀಕ್ಷಾ ಸಮಯಕ್ಕೆ ವಿತರಿಸುತ್ತಿದ್ದರು. ಈಗ ಮಂಡಳಿ ಆಯಾ ದಿನದ ವಿಷಯ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಆಯಾ ದಿನ ಬೆಳಗ್ಗೆ 6ಕ್ಕೆ ಲಾಗಿನ್‌ನಲ್ಲಿ ಲಭಿಸುವಂತೆ ಮಾಡಿರುವುದು ಮುಖ್ಯ ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಾಜ್ಯದಲ್ಲಿ ನಗರ ಸೇರಿ ಹಲವು ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಕಂಪ್ಯೂಟರ್‌, ಝೆರಾಕ್ಸ್‌ ಯಂತ್ರ ಗಳಿಲ್ಲ. ಅಂಥ ಶಾಲೆಯ ಮುಖ್ಯ ಶಿಕ್ಷಕರು ಬೆಳಗ್ಗೆ 9 ಗಂಟೆಯೊಳಗೆ ಪ್ರಶ್ನೆಪತ್ರಿಕೆ ಡೌನ್‌ಲೋಡ್‌ ಮಾಡಿಕೊಂಡು, ಝೆರಾಕ್ಸ್‌ ಮಾಡಿಸಿ ಪರೀಕ್ಷಾ ಸಮಯ 10 ಗಂಟೆಗೆ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಿಸಬೇಕಾ
ಗಿದೆ. ವಿದ್ಯುತ್‌ ಕಡಿತ, ನೆಟ್‌ವರ್ಕ್‌ ಸಮಸ್ಯೆಗಳ ನಡುವೆ ಈ ಕೆಲಸ ನಿರ್ವಹಣೆ ಮುಖ್ಯ ಶಿಕ್ಷಕರಿಗೆ ಸವಾಲಾಗಿದೆ. ಒಟ್ಟಾರೆ ಪರೀಕ್ಷಾ ಮಂಡಳಿ ಕೈಗೊಂಡ ಕ್ರಮ ಅನುಷ್ಠಾನದಲ್ಲಿ ವ್ಯತ್ಯಾಸಗಳಾಗಿದ್ದರೂ ಈ ವ್ಯವಸ್ಥೆ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಗುಣಾತ್ಮಕ ಶಿಕ್ಷಣದ ದೃಷ್ಟಿಯಿಂದ ಉತ್ತಮ ಎಂದೇ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಪ್ರತಿಷ್ಠೆಗಾಗಿ ಸೋರಿಕೆ
ಅರ್ಧ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ಕಡಿಮೆಯಾದರೆ ಶಾಲೆಯ ಪ್ರತಿಷ್ಠೆಗೆ ಕುಂದು ಬರಬಹುದು ಎಂಬ ಉದ್ದೇಶದಿಂದಲೇ ಅನೇಕ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಶಾಲಾಡಳಿತ ಮಂಡಳಿಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ, ನಕಲಿಗೆ ಅವಕಾಶ ಮಾಡಿಕೊಡಲಾಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿಕ್ಷಕರು.

ದಿಢೀರ್‌ ಕ್ರಮ ಏಕೆ?
ಮುಖ್ಯ ಪರೀಕ್ಷೆ ಮಾದರಿಯಲ್ಲಿ ಅರ್ಧ ವಾರ್ಷಿಕ ಪರೀಕ್ಷೆಯಲ್ಲೂ ಪ್ರಶ್ನೆಪತ್ರಿಕೆ ಒಂದು ದಿನ ಮುಂಚಿತವಾಗಿ ಮುಖ್ಯ ಶಿಕ್ಷಕರ ಲಾಗಿನ್‌ಗೆ ಲಭಿಸುವ ವ್ಯವಸ್ಥೆ ಮಂಡಳಿ ಮಾಡಿತ್ತು. ಆದರೂ ರಾಜ್ಯದ ಅನೇಕ ಶಾಲೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮೊದಲೇ ಮಕ್ಕಳಿಗೆ ಉತ್ತರ ಬರೆಸುವ ಪ್ರಕರಣಗಳು ಕಂಡು ಬಂದಿದ್ದರಿಂದ ಈಗ ಆಯಾ ದಿನದ ಪ್ರಶ್ನೆಪತ್ರಿಕೆ ಅಂದೇ ಸಿಗುವಂತೆ ಮಾಡಲು ಮಂಡಳಿ ಕ್ರಮ ಕೈಗೊಂಡಿದೆ.

– ಎಚ್‌.ಕೆ.ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next