Advertisement

ತಂಡ ಮುನ್ನಡೆಸುವುದು ನನ್ನ ಕೆಲಸ:ಕಾರ್ತಿಕ್‌

09:23 AM Apr 27, 2019 | Team Udayavani |

ಕೋಲ್ಕತಾ: ಕೋಲ್ಕತಾ ನೈಟ್‌ ರೈಡರ್ ಸತತ 6 ಪಂದ್ಯಗಳಲ್ಲಿ ಸೋಲನುಭವಿಸಿದ ಅನಂತರ ದಿನೇಶ್‌ ಕಾರ್ತಿಕ್‌ ಅವರ ನಾಯಕತ್ವದ ಮೇಲೆ ಪ್ರಶ್ನೆಗಳು ಬೆಳೆಯುತ್ತಿದ್ದರೂ ಕಾರ್ತಿಕ್‌ ತಂಡವನ್ನು ಮುನ್ನಡೆಸುವುದು ಅವರ ಕೆಲಸ ಎಂದು ಹೇಳಿದ್ದಾರೆ.

Advertisement

ರಾಜಸ್ಥಾನ್‌ ವಿರುದ್ಧದ ಪಂದ್ಯದಲ್ಲಿ ಸೋತ ಅನಂತರ ಪ್ರತಿಕ್ರಿಯಿಸಿರುವ ದಿನೇಶ್‌ ಕಾರ್ತಿಕ್‌ “ತಂಡವನ್ನು ಮುನ್ನಡೆಸುವುದು ನನ್ನ ಕೆಲಸ. ಆದರೆ ಕೆಲವೊಂದು ಬಾರಿ ಫ‌ಲಿತಾಂಶ ನಾವು ಅಂದುಕೊಂಡಂತೆ ಇರುವುದಿಲ್ಲ. ಇವುಗಳನ್ನು ಸರಿಪಡಿಸಿಕೊಳ್ಳುವುದು ಕಷ್ಟಕರ ಸಂಗತಿ.

ನಿಜವಾಗಿಯೂ ತಂಡವಾಗಿ ನಾವು ಬಹಳಷ್ಟು ಶ್ರಮಿಸುತ್ತಿದ್ದೇವೆ. ನನಗೆ ನನ್ನ ಆಟಗಾರರ ಮೇಲೆ ನಂಬಿಕೆಯಿದ್ದು, ನಾವು ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಮೂಡಿಬರಲಿದ್ದೇವೆ’ ಎಂದು ಹೇಳಿದ್ದಾರೆ.

ಈಡನ್‌ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 6 ವಿಕೆಟ್‌ ಕಳೆದುಕೊಂಡು 175 ರನ್‌ ಗಳಿಸಿದರೆ, ರಾಜಸ್ಥಾನ್‌ ರಾಯಲ್ಸ್‌ 19.2 ಓವರ್‌ಗಳಲ್ಲಿ 7 ವಿಕೆಟಿಗೆ 177 ರನ್‌ ಬಾರಿಸಿ ಜಯ ಸಾಧಿಸಿತು. ಈ ಸೋಲು ಕೆಕೆಆರ್‌ಗೆ ಈಡನ್‌ನಲ್ಲಿ ಸತತ 4ನೇ ಸೋಲಾದರೆ, ಈ ಬಾರಿ ಐಪಿಎಲ್‌ನಲ್ಲಿ ಸತತ 6ನೇ ಸೋಲಾಗಿತ್ತು. ಕಳೆದ 5 ಪಂದ್ಯಗಳಲ್ಲಿ ಸೋತಾಗ ದಿನೇಶ್‌ ಕಾರ್ತಿಕ್‌ ಅವರ ನಾಯಕತ್ವದ ಮೇಲೆ ಹಲವಾರು ಪ್ರಶ್ನೆಗಳು ಮೂಡಿದ್ದವು ಮತ್ತು ಅವರನ್ನು ನಾಯಕತ್ವದಿಂದ ಕೆಳಗಿಳಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಫಾರ್ಮ್ಗೆ ಬಂದ ಕಾರ್ತಿಕ್‌
ಆರಂಭಿಕ ಆಘಾತ ಅನುಭವಿಸಿದ ಕೆಕೆಆರ್‌ಗೆ ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ದಿನೇಶ್‌ ಕಾರ್ತಿಕ್‌ 20 ಓವರ್‌ಗಳ ವರೆಗೆ ನಿಂತು ತಂಡದ ಮೊತ್ತ 150 ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದರು. ಅವರು 50 ಎಸೆತಗಳಲ್ಲಿ ಅಜೇಯ 97 ರನ್‌ ಸಿಡಿಸಿದರು. ಇದರಲ್ಲಿ 7 ಬೌಂಡರಿ, 9 ಸಿಕ್ಸರ್‌ಗಳಿದ್ದವು. ಈ ಮೂಲಕ ಕಾರ್ತಿಕ್‌ ಟಿ20 ಕ್ರಿಕೆಟಿನಲ್ಲಿ ವೈಯಕ್ತಿಕ ಅತ್ಯಧಿಕ ಸ್ಕೋರ್‌ ದಾಖಲಿಸಿದರು.

Advertisement

ಈ ಅತ್ಯುತ್ತಮ ಪ್ರದರ್ಶನ ಹೊರತಾಗಿಯೂ ತಂಡವನ್ನು ಸೋಲಿನಿಂದ ಪಾರು ಮಾಡಲಾ ಗದಿರುವುದು ಕಾರ್ತಿಕ್‌ಗೆ ಬೇಸರ ಮೂಡಿಸಿದೆ.  ಗೆಲುವು ಕಸಿದುಕೊಂಡ ಪರಾಗ್‌ ಸ್ಪಿನ್ನರ್‌ಗಳಾದ ಸುನೀಲ್‌ ನಾರಾಯಣ್‌, ಪೀಯೂಷ್‌ ಚಾವ್ಲಾ ಜತೆಯಾಗಿ ರಾಜಸ್ಥಾನ್‌ ತಂಡದ ರಹಾನೆ, ಸ್ಟೀವನ್‌ ಸ್ಮಿತ್‌ ಮತ್ತು ಬೆನ್‌ ಸ್ಟೋಕ್ಸ್‌ ವಿಕೆಟ್‌ ಕಿತ್ತರೆ ವೇಗಿಗಳು ಗೆಲುವನ್ನು ಬಿಟ್ಟುಕೊಟ್ಟರು. ಪರಾಗ್‌ (47) ಮತ್ತು ಜೋಫ‌ ಅರ್ಚರ್‌ (ಅಜೇಯ 27) 7ನೇ ವಿಕೆಟಿನ ಜತೆಯಾಟದಲ್ಲಿ 44 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿ ಗೆಲುವು ಕಸಿದುಕೊಂಡರು. ಈ ಸೋಲಿನಿಂದ ಕೆಕೆಆರ್‌ಗೆ ಪ್ಲೇ ಆಫ್ ದಾರಿ ಇನ್ನಷ್ಟು ಕಠಿನವಾಗಿದೆ.

ಸಂಕ್ಷಿಪ್ತ ಸ್ಕೋರ್‌: ಕೆಕೆಆರ್‌ 6 ವಿಕೆಟಿಗೆ 175; ರಾಜಸ್ಥಾನ್‌- 19.2 ಓವರ್‌ಗಳಲ್ಲಿ 7 ವಿಕೆಟಿಗೆ 177 (ರಿಯಾನ್‌ ಪರಾಗ್‌ 47, ಅಂಜಿಕ್ಯ ರಹಾನೆ 34, ಜೋಫ‌Å ಅರ್ಚರ್‌ ಔಟಾಗದೆ 27, ಪೀಯೂಷ್‌ ಚಾವ್ಲಾ 20ಕ್ಕೆ 3, ಸುನೀಲ್‌ ನಾರಾಯಣ್‌ 25ಕ್ಕೆ 2)  ಪಂದ್ಯ ಶ್ರೇಷ್ಠ- ವರುಣ್‌ ಅರೋನ್‌

ಈ ಸೋಲನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಇಲ್ಲಿ ಕುಳಿತುಕೊಂಡು ಪರವಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದು ತುಂಬಾ ನಿರಾಶಾದಾಯಕ. ನಾವು ಕಷ್ಟಪಟ್ಟು ಪ್ರಯತ್ನಿಸಿದ್ದೇವೆ. ಆದರೆ ಗುರಿ ತಲುಪಲು ಸಾಧ್ಯವಾಗಲಿಲ್ಲ.
ದಿನೇಶ್‌ ಕಾರ್ತೀಕ್‌, ಕೆಕೆಆರ್‌ ನಾಯಕ

ಎಕ್ಸ್‌ಟ್ರಾ ಇನ್ನಿಂಗ್ಸ್‌
* ದಶಕದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ಈಡನ್‌ ಗಾರ್ಡನ್ಸ್‌ ಸ್ಟೇಡಿಯಂನಲ್ಲಿ ಗೆಲುವು ಸಾಧಿಸಿದೆ. ಇದು ಈ ಸ್ಟೇಡಿಯಂನಲ್ಲಿ ರಾಜಸ್ಥಾನ್‌ಗೆ ದೊರಕಿದ 2ನೇ ಜಯ. 2008ರ ಆವೃತ್ತಿಯಲ್ಲಿ ಕೆಕೆಆರ್‌ ವಿರುದ್ಧವೇ ಜಯಿಸಿದ್ದು ಹಿಂದಿನ ದಾಖಲೆಯಾಗಿದೆ. 2010ರಿಂದ 2018ರ ವರೆಗಿನ ಆವೃತ್ತಿಗಳಲ್ಲಿ ರಾಜಸ್ಥಾನ್‌ 7 ಪಂದ್ಯಗಳನ್ನಾಡಿದ್ದು (6 ಕೆಕೆಆರ್‌ ವಿರುದ್ಧ, 1 ಮುಂಬೈ ಇಂಡಿಯನ್ಸ್‌ ವಿರುದ್ಧ) ಎಲ್ಲ ಪಂದ್ಯಗಳಲ್ಲೂ ಸೋಲನುಭವಿಸಿತ್ತು.
* ಕೆಕೆಆರ್‌ ಈಡನ್‌ ಗಾರ್ಡನ್ಸ್‌ನಲ್ಲಿ ಕಳೆದ 4 ಪಂದ್ಯಗಳಲ್ಲಿ ಸೋತಿದೆ. ಇದಕ್ಕೂ ಮುನ್ನ ತವರಿನಲ್ಲಿ ಕೆಕೆಆರ್‌ ಸತತ 2 ಪಂದ್ಯಗಳಲ್ಲಿ ಸೋಲು ಕಂಡಿಲ್ಲ. ಕೆಕೆಆರ್‌ ಈ ಹಿಂದೆ ಈಡನ್‌ನಲ್ಲಿ ಡೆಲ್ಲಿ, ಸಿಎಸ್‌ಕೆ, ರಾಜಸ್ಥಾನ್‌ ಮತ್ತು ಆರ್‌ಸಿಬಿ ವಿರುದ್ಧ ಸೋತಿದೆ.
* ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ ಸತತ 6 ಪಂದ್ಯಗಳಲ್ಲಿ ಸೋತಿದೆ. ಇದು ಅವರ 2ನೇ ಸುದೀರ್ಘ‌ ಸೋಲಿನ ಸರಮಾಲೆ. 2009ರ ಆವೃತ್ತಿಯಲ್ಲಿ ಕೆಕೆಆರ್‌ ಸತತ 8 ಪಂದ್ಯಗಳಲ್ಲಿ ಸೋತು ಕೊನೆಯ ಸ್ಥಾನದಲ್ಲಿ ಕೂಟವನ್ನು ಮುಗಿಸಿತ್ತು.
* ದಿನೇಶ್‌ ಕಾರ್ತಿಕ್‌ ಅವರ ಅಜೇಯ 97 ರನ್‌ ಟಿ20 ಕ್ರಿಕೆಟಿನಲ್ಲಿ ಅವರ ವೈಯಕ್ತಿಕ ಅತ್ಯಧಿಕ ಗಳಿಕೆ ಮತ್ತು ಕೆಕೆಆರ್‌ ಪರ 2ನೇ ಅತ್ಯಧಿಕ ಗಳಿಕೆಯಾಗಿದೆ. 2008ರ ಉದ್ಘಾಟನಾ ಆವೃತ್ತಿಯಲ್ಲಿ ಆರ್‌ಸಿಬಿ ವಿರುದ್ಧ ಬ್ರೆಂಡನ್‌ ಮೆಕಲಮ್‌ ಅವರ ಅಜೇಯ 158 ಅತ್ಯಧಿಕ ಗಳಿಕೆ. ಇದು ಇಲ್ಲಿಯವರೆಗೆ ಕೆಕೆಆರ್‌ ತಂಡದ ಪರ ದಾಖಲಾದ ಏಕೈಕ ಶತಕ.
* ದಿನೇಶ್‌ ಕಾರ್ತಿಕ್‌ 2013ರ ಅನಂತರ ಇದೇ ಮೊದಲ ಬಾರಿಗೆ 70 ರನ್‌ಗಳ ಗಡಿ ದಾಟಿದರು. ಒಟ್ಟು 9 ಸಿಕ್ಸರ್‌ ಸಿಡಿಸಿದ ಕಾರ್ತಿಕ್‌ ಕೆಕೆಆರ್‌ ಪರ ಇನ್ನಿಂಗ್ಸ್‌ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಪಟ್ಟಿಯಲ್ಲಿ ಮೆಕಲಮ್‌ ಮತ್ತು ರಸೆಲ್‌ ಅವರೊಂದಿಗೆ ಜಂಟಿ 3ನೇ ಸ್ಥಾನ ಪಡೆದಿದ್ದಾರೆ.
* ಕಾರ್ತಿಕ್‌ ಅವರ ಅಜೇಯ 97 ರನ್‌ ಕೆಕೆಆರ್‌ ನಾಯಕನಾಗಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್‌ ಮತ್ತು ಕೆಕೆಆರ್‌ನ ಸೋಲಿನಲ್ಲಿ ಅತ್ಯಧಿಕ ವೈಯಕ್ತಿಕ ಗಳಿಕೆಯಾಗಿದೆ. 2012ರ ಋತುವಿನಲ್ಲಿ ಆರ್‌ಸಿಬಿ ವಿರುದ್ಧ ಗೌತಮ್‌ ಗಂಭೀರ್‌ ಅವರ 93 ರನ್‌ ಕೆಕೆಆರ್‌ ನಾಯಕನಿಂದ ದಾಖಲಾದ ಅತ್ಯಧಿಕ ಸ್ಕೋರ್‌ ಆಗಿತ್ತು. 2013ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬಿಸ್ಲಾ 92 ರನ್‌ ಗಳಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ಕೆಕೆಆರ್‌ ಸೋಲನುಭವಿಸಿತ್ತು.
* ದಿನೇಶ್‌ ಕಾರ್ತಿಕ್‌ ಅವರ ಅಜೇಯ 97 ರನ್‌ ಐಪಿಎಲ್‌ನಲ್ಲಿ ಕೀಪರ್‌/ನಾಯಕನಿಂದ ದಾಖಲಾದ 2ನೇ ಅತ್ಯಧಿಕ ಸ್ಕೋರ್‌ ಆಗಿದೆ. ಆ್ಯಡಮ್‌ ಗಿಲ್‌ಕ್ರಿಸ್ಟ್‌ 2011ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಆರ್‌ಸಿಬಿ ವಿರುದ್ಧ 106 ರನ್‌ ಬಾರಿಸಿದ್ದರು.
* ಪೀಯೂಷ್‌ ಚಾವ್ಲಾ ಈ ಬಾರಿಯ ಐಪಿಎಲ್‌ನಲ್ಲಿ 3 ವಿಕೆಟ್‌ ಕಿತ್ತ ಕೆಕೆಆರ್‌ನ ಏಕೈಕ ಬೌಲರ್‌. ಚಾವ್ಲಾ ಅವರ 20ಕ್ಕೆ 3 ಈ ಬಾರಿಯ ಐಪಿಎಲ್‌ನಲ್ಲಿ ಕೆಕೆಆರ್‌ನ ಅತ್ಯುತ್ತಮ ಬೌಲಿಂಗ್‌ ಫಿಗರ್‌ ಆಗಿದೆ.
* ಈ ಋತುವಿನಲ್ಲಿ ಚಾವ್ಲಾ 9 ವಿಕೆಟ್‌ಗಳನ್ನು ಕಿತ್ತಿದ್ದು, ಕೆಕೆಆರ್‌ ಪರ ಅತ್ಯಧಿಕ ವಿಕೆಟ್‌ ಕಿತ್ತ ಬೌಲರ್‌ ಆಗಿದ್ದಾರೆ. ಈ ಮೂಲಕ ರಸೆಲ್‌ ಅವರನ್ನು ಹಿಂದಿಕ್ಕಿದ್ದಾರೆ.
* ಈ ಪಂದ್ಯದಲ್ಲಿ ರಾಜಸ್ಥಾನ್‌ ನಾಯಕ ಸ್ಟೀವನ್‌ ಸ್ಮಿತ್‌ 2 ರನ್‌ ಬಾರಿಸುವ ಮೂಲಕ ಐಪಿಎಲ್‌ನಲ್ಲಿ 2,000 ರನ್‌ ಪೂರೈಸಿದರು. 2,000 ರನ್‌ ಪೂರೈಸಿದ 31ನೇ ಆಟಗಾರ ಮತ್ತು 12ನೇ ವಿದೇಶಿ ಆಟಗಾರ. 12 ವಿದೇಶಿ ಆಟಗಾರರಲ್ಲಿ 2,000 ಪ್ಲಸ್‌ ರನ್‌ ಪೂರೈಸಿದ ಆಟಗಾರರಲ್ಲಿ ಸ್ಮಿತ್‌ ಸೇರಿದಂತೆ 5 ಆಟಗಾರರು ಆಸ್ಟ್ರೇಲಿಯದವರು.

Advertisement

Udayavani is now on Telegram. Click here to join our channel and stay updated with the latest news.

Next