Advertisement

ಜಡೇಜ ವೈಫ‌ಲ್ಯಕ್ಕೆ ನಾಯಕತ್ವದ ಒತ್ತಡ ಕಾರಣ: ಎಂ. ಎಸ್‌. ಧೋನಿ

02:47 AM May 03, 2022 | Team Udayavani |

ಮುಂಬಯಿ: ನಾಯಕತ್ವದ ಒತ್ತಡ ಮತ್ತು ಬೇಡಿಕೆಗಳಿಂದಾಗಿ ರವೀಂದ್ರ ಜಡೇಜ ಅವರ ಸಿದ್ಧತೆ ಹಾಗೂ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬಿತ್ತು ಎಂಬುದಾಗಿ ಚೆನ್ನೈ ತಂಡದ ಮಹೇಂದ್ರ ಸಿಂಗ್‌ ಧೋನಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಬೇರೊಬ್ಬರು ಹೇಳಿದ ಮಾತಿನಂತೆ ನಡೆಯುವುದಕ್ಕಿಂತ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವಂತೆ ಧೋನಿ ಅವರು ಜಡೇಜ ಅವರನ್ನು ಪ್ರೋತ್ಸಾಹಿಸಿದ್ದರು. ಇದರಂತೆ ಐಪಿಎಲ್‌ ಆರಂಭವಾಗಲು ಕೆಲವು ದಿನ ಬಾಕಿ ಇರುವಾಗಲೇ ಧೋನಿ ನಾಯಕತ್ವದಿಂದ ಹಿಂದೆ ಸರಿದಿದ್ದರು. ಕ್ಯಾಪ್ಟನ್ಸಿಗೆ ಅವರು ರವೀಂದ್ರ ಜಡೇಜ ಹೆಸರನ್ನು ಸೂಚಿಸಿದ್ದರು.

ಆದರೆ ಆಲ್‌ರೌಂಡರ್‌ ಜಡೇಜ ಒತ್ತಡದಲ್ಲಿ ಮುಳುಗಿದರು. ನಾಯಕತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಅವರಿಂದ ಸಾಧ್ಯವಾಗಲಿಲ್ಲ. ಆಡಿದ 8 ಪಂದ್ಯಗಳಲ್ಲಿ ಚೆನ್ನೈ ಆರರಲ್ಲಿ ಸೋತು ಆಘಾತ ಅನುಭವಿಸಿತಲ್ಲದೇ ಅಭಿಮಾನಿಗಳು ನಿರಾಶೆಗೊಂಡರು.

ಮಾತ್ರವಲ್ಲದೇ ವೈಯಕ್ತಿಕವಾಗಿ ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಫೀಲ್ಡಂಗ್‌ನಲ್ಲಿಯೂ ಜಡೇಜ ವೈಫ‌ಲ್ಯ ಅನುಭವಿಸಿದರು. ಇದರಿಂದ ಕಂಗೆಟ್ಟ ಜಡೇಜ ಕೂಟದ ನಡುವೆ ನಾಯಕತ್ವದ ಜವಾಬ್ದಾರಿಗೆ ರಾಜೀನಾಮೆ ಕೊಟ್ಟರು. ಫ್ರಾಂಚೈಸಿ ಮತ್ತೆ ಧೋನಿ ಅವರಲ್ಲಿ ನಂಬಿಕೆ ಇಟ್ಟು ನಾಯಕತ್ವದ ಹೊಣೆಯನ್ನು ಅವರಿಗೆ ವಹಿಸಿತು.

ನಂಬಿಗಸ್ಥ ಆಟಗಾರ
ನಿಜವಾಗಿ ಹೇಳುವುದಾದರೆ ಜಡೇಜ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಭಾರತದ ಅತ್ಯಂತ ನಂಬಿಗಸ್ಥ ಆಟಗಾರರಲ್ಲಿ ಒಬ್ಬರಾಗಿದ್ದರು. ಆದರೆ ಈ ಐಪಿಎಲ್‌ನಲ್ಲಿ ಅವರು ಎಲ್ಲ ವಿಭಾಗಗಳಲ್ಲೂ ವೈಫ‌ಲ್ಯ ಕಂಡಿರುವುದು ಎದ್ದು ಕಾಣುತ್ತಿದೆ.

Advertisement

ಧೋನಿ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುತ್ತಲೇ ಚೆನ್ನೈ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ರವಿವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಸನ್‌ರೈಸರ್ ಹೈದರಾಬಾದ್‌ ತಂಡವನ್ನು 13 ರನ್ನುಗಳಿಂದ ಸೋಲಿಸಲು ಯಶಸ್ವಿಯಾಗಿದೆ.

ಈ ವರ್ಷ ಚೆನ್ನೈ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂಬುದು ಜಡೇಜ ಅವರಿಗೆ ಕಳೆದ ವರ್ಷವೇ ತಿಳಿದಿತ್ತು. ಈ ಐಪಿಎಲ್‌ನ ಮೊದಲ ಎರಡು ಪಂದ್ಯಗಳ ವೇಳೆ ಅವರ ನಾಯಕತ್ವದ ಕರ್ತವ್ಯದ ಮೇಲ್ವಿಚಾರಣೆ ನಡೆಸಿದ್ದೇನೆ ಮತ್ತು ಕೆಲವೊಂದು ಸೂಚನೆ ನೀಡಿದ್ದೇನೆ. ಆಬಳಿಕ ನಿಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಸೂಚಿಸಿದ್ದೆ ಎಂದು ಧೋನಿ ಪಂದ್ಯದ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ತಿಳಿಸಿದರು.

“ಒಮ್ಮೆ ನೀವು ನಾಯಕರಾಗಿ ಆಯ್ಕೆಯಾದ ಬಳಿಕ ಬಹಳಷ್ಟು ಬೇಡಿಕೆಗಳು ಬರುತ್ತವೆ. ನಾಯಕತ್ವದ ಜವಾಬ್ದಾರಿ ಕಠಿನವಾಗುತ್ತ ಹೋದಾಗ ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಜಡೇಜ ಅವರಿಗೂ ಇದೇ ಸಮಸ್ಯೆ ಎದುರಾಗಿದೆ’ ಎಂದು ಧೊನಿ ಹೇಳಿದರು.

“ನಾಯಕತ್ವ ಜವಾಬ್ದಾರಿ ವಹಿಸಿಕೊಂಡ ಬಳಿಕ ನೀವು ಹಲವಾರು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕಾಗುತ್ತದೆ. ಇದರಲ್ಲಿ ನಿಮ್ಮದೇ ಆಟವೂ ಒಳಗೊಂಡಿದೆ. ಇದೀಗ ಒತ್ತಡದಿಂದ ಮುಕ್ತರಾದ್ದರಿಂದ ಜಡೇಜ ಅವರು ಎಂದಿನಂತೆ ನೈಜ ಆಟ ಪ್ರದರ್ಶಿಸಲು ಪ್ರಯತ್ನಸಬೇಕಾಗಿದೆ’ ಎಂದು ಧೋನಿ ವಿವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next