Advertisement

ಕಲಾವಿದರ ಸಂಘಕ್ಕೆ‌ ಮುಂದಾಳತ್ವ

11:40 AM Nov 25, 2018 | |

ಕನ್ನಡ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿದ್ದ ಅಂಬರೀಶ್‌ ಅವರಿಗೆ ಸಂಘಕ್ಕೊಂದು ಸುಸಜ್ಜಿತ ಕಟ್ಟಡ ಬೇಕೆಂಬ ಆಸೆ ಇತ್ತು. ಅದರಂತೆ ಚಾಮರಾಜಪೇಟೆಯಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸುವಲ್ಲಿ ಅಂಬರೀಶ್‌ ಯಶಸ್ವಿಯಾಗಿದ್ದರು ಕೂಡಾ. ಇದೇ ವರ್ಷ ಆ ಕಟ್ಟಡದ ಉದ್ಘಾಟನೆಯನ್ನು ಅದ್ಧೂರಿಯಾಗಿ ಮಾಡುವ ಮೂಲಕ ಇಡೀ ದಕ್ಷಿಣ ಭಾರತದ ಚಿತ್ರರಂಗ ತಿರುಗಿ ನೋಡುವಂಥೆ ಮಾಡಿದ್ದರು.

Advertisement

ಬಾಲಿವುಡ್‌ನ‌ ಶತ್ರುಘ್ನ ಸಿನ್ಹಾ, ತೆಲುಗಿನಿಂದ ಚಿರಂಜೀವಿ, ಮೋಹನ್‌ ಬಾಬು ಸೇರಿದಂತೆ ಬೇರೆ ಬೇರೆ ಭಾಷೆಯ ಕಲಾವಿದರನ್ನು ಕರೆಸಿದ್ದರು. ಅಂದು ಕಲಾವಿದರ ಸಂಘವನ್ನು ಕಂಡ ಚಿರಂಜೀವಿ ಖುಷಿಯಾಗಿ ಮಾತನಾಡಿದ್ದರು. “ನಾವು ಇವತ್ತು ಬಂದಿದ್ದೇವೆ ಎಂದರೆ ಅದಕ್ಕೆ ಕಾರಣ ಅಂಬರೀಶ್‌. ಅಂಬರೀಶ್‌ ಕರೆದ ಮೇಲೆ ಬಾರದೇ ಇರೋಕ್ಕಾಗಲ್ಲ. ಭಾರತದಲ್ಲೇ ಕಲಾವಿದರ ಸಂಘಕ್ಕೆ ಇಂಥದ್ದೊಂದು ಕಟ್ಟಡ ಎಲ್ಲೂ ಇಲ್ಲ.

ಕನ್ನಡದಲ್ಲಿ ಈ ತರಹದ ಕಟ್ಟಡ ನಿರ್ಮಾಣವಾಗಿದೆ ಎಂದರೆ ಅದಕ್ಕೆ ಕಾರಣ ಅಂಬರೀಶ್‌’ ಎಂದು ಹೇಳುವ ಮೂಲಕ ಅಂಬರೀಶ್‌ ನಾಯಕತ್ವದ ಗುಣಗಾನ ಮಾಡಿದ್ದರು. ಅಂಬರೀಶ್‌ ಅವರಿಗೆ ಕಲಾವಿದರ ಸಂಘದಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿ, ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಆಶಯ ಹೊಂದಿದ್ದರು. 

ಕಲಾವಿದರ ನಂಟು: ಅಂಬರೀಷ ಅವರ ವ್ಯಕ್ತಿತ್ವ ಯಾರನ್ನೇ ಬೇಕಾದರೂ ಸೆಳೆಯುವಂಥದ್ದು. ಆ ತರಹದ ಒಂದು ವರ್ಣರಂಜಿತ ವ್ಯಕ್ತಿತ್ವದಿಂದಲೇ ಎಲ್ಲಾ ಭಾಷೆಯ ಸ್ಟಾರ್‌ ನಟರು ಕೂಡಾ ಅಂಬರೀಷ್‌ ಅವರೊಂದಿಗೆ ಆತ್ಮೀಯರಾಗಿದ್ದರು. ರಾಜಕುಮಾರ್‌ ಬಿಟ್ಟರೆ ಆ ತರಹದ ನಂಟು ಬೆಳೆಸಿಕೊಂಡ ನಟ ಅಂಬರೀಷ್‌. ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಎಲ್ಲಾ ಭಾಷೆಯ ನಟರೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದರು.

ಅದಕ್ಕೆ ಸಾಕ್ಷಿಯಾಗಿದ್ದು “ಅಂಬಿ ಸಂಭ್ರಮ’ ಕಾರ್ಯಕ್ರಮ. “ಅಂಬಿ ಸಂಭ್ರಮ’ ಕಾರ್ಯಕ್ರಮಕ್ಕೆ ಚಿರಂಜೀವಿ, ರಜನಿಕಾಂತ್‌, ಶತ್ರುಘ್ನ ಸಿನ್ಹಾ ಸೇರಿದಂತೆ ಬಹುಭಾಷಾ ನಟ-ನಟಿಯರು ಆಗಮಿಸಿ, ಅಂಬರೀಷ್‌ ಬಗೆಗಿನ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಇದಷ್ಟೇ ಅಲ್ಲದೇ, ಕನ್ನಡ ಚಿತ್ರರಂಗದ ಯಾವುದೇ ಕಾರ್ಯಕ್ರಮಕ್ಕಾದರೂ ಅಂಬರೀಷ್‌ ಆಹ್ವಾನಿಸಿದರೆ, ಬಂದು ಅಂಬಿ ಹಾಗೂ ಕನ್ನಡ ಚಿತ್ರರಂಗದ ಪ್ರೀತಿಯ ಬಗ್ಗೆ ಮಾತನಾಡುತ್ತಿದ್ದರು. ಆ ತರಹದ ಒಂದು ಪ್ರೀತಿಯನ್ನು ಸಂಪಾದಿಸಿದ್ದು ಅಂಬರೀಷ್‌ ಅವರ ವ್ಯಕ್ತಿತ್ವಕ್ಕೆ ಕಾರಣ.

Advertisement

ಸ್ಟಾರ್‌ಗಳೂ ತಲೆಬಾಗುತ್ತಿದ್ದರು: ಕನ್ನಡ ಚಿತ್ರರಂಗದ ಯಾರೇ ಸ್ಟಾರ್‌ ಆದರೂ ಅಂಬರೀಷ್‌ ಅವರ ಮಾತುಗಳನ್ನು ತೆಗೆದು ಹಾಕುತ್ತಿರಲಿಲ್ಲ. ಅದು ಸುದೀಪ್‌, ದರ್ಶನ್‌, ಯಶ್‌ ಯಾರೇ  ಆದರೂ ಅಂಬರೀಷ್‌ ಅವರ ಮಾತಿಗೆ ತಲೆಬಾಗುತ್ತಿದ್ದರು. ತಾವು ಏನೇ ಹೊಸ ಕೆಲಸ ಮಾಡುವ ಮುನ್ನ ಮೊದಲು ಅಂಬರೀಷ್‌ ಮನೆಗೆ ಹೋಗಿ ಆ ಬಗ್ಗೆ ಹೇಳಿ ಅವರ ಆಶೀರ್ವಾದ ಪಡೆಯುತ್ತಿದ್ದರು.

ಜೊತೆಗೆ ಅಂಬರೀಷ್‌ ಅವರು ತಮ್ಮ ಸಿನಿಮಾಗಳಲ್ಲಿ ನಟಿಸಬೇಕು, ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಿದ್ದರು ಕೂಡಾ. ಅದೇ ಕಾರಣದಿಂದ ಸುದೀಪ್‌ ಜೊತೆ “ವೀರ ಪರಂಪರೆ’, “ಅಂಬಿ ನಿಂಗೆ ವಯಸ್ಸಾಯೊ¤à’, ದರ್ಶನ್‌ ಜೊತೆ “ಬುಲ್‌ ಬುಲ್‌’, “ಅಂಬರೀಷ’, ಯಶ್‌ ಜೊತೆ “ಡ್ರಾಮಾ’ ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲಾ ಸ್ಟಾರ್‌ ಅಂಬರೀಷ್‌ ಅವರನ್ನು ಪ್ರೀತಿಯಿಂದ “ಅಪ್ಪಾಜಿ’ ಎಂದು ಕರೆಯುತ್ತಿದ್ದರು. 

ಈ ದಿನ ನನಗೆ ಕೆಟ್ಟ ದಿನ. ಚಿತ್ರರಂಗದ ಅಜಾತಶತ್ರು, ಎಲ್ಲರ ಪ್ರೀತಿಪಾತ್ರವಾಗಿದ್ದ ಅಂಬರೀಶ್‌ರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ನೋವು ತಂದಿದೆ. ಅವರ ಅಭಿಮಾನಿಗಳಿಗೂ ಅಷ್ಟೇ ನೋವಿದೆ. ಅಂಬರೀಷ್‌ ಅವರ ಅಭಿಮಾನಿಗಳು ಶಾಂತಿ ಹಾಗೂ ಸಂಯಮ ಕಾಪಾಡಬೇಕು.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ 

ಕನ್ನಡ ಚಿತ್ರರಂಗದ ದಿಗ್ಗಜ,ರೆಬೆಲ್‌ ಸ್ಟಾರ್‌ ಎಂದೇ ಖ್ಯಾತಿ ಪಡೆದಿದ್ದ ಚಲನಚಿತ್ರ ನಟ, ಅಂಬರೀಶ್‌ ಹಾಗೂ ನನ್ನ ಸ್ನೇಹಿತನ ನಿಧನವು ವೈಯಕ್ತಿಕವಾಗಿ ನನಗೆ, ರಾಜ್ಯಕ್ಕೆ, ಕನ್ನಡ  ಚಿತ್ರರಂಗಕ್ಕೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ತುಂಬಲಾರದ ನಷ್ಟ. ಕನ್ನಡ ಚಿತ್ರರಂಗದ ಸ್ಟಾರ್‌ ನಟರಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರಾಗಿ ಉತ್ತಮವಾಗಿ ಕೆಲಸ ಮಾಡಿದ್ದರು
-ಕೆ.ಸಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ

ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಸಂದರ್ಭದಲ್ಲಿ ಮಂಡ್ಯದಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯದ ಅಭಿವೃದ್ಧಿಗೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದರು. ನನಗೆ ಅತ್ಯಂತ ಆತ್ಮೀಯರಾಗಿದ್ದ ಅಂಬರೀಷ್‌ ನಿಧನದಿಂದ ರಾಜ್ಯ ಹಾಗೂ ಕನ್ನಡ ಚಿತ್ರರಂಗ ಒಬ್ಬ ಹೃದಯವಂತ ವ್ಯಕ್ತಿಯನ್ನು ಕಳೆದುಕೊಂಡು ಬಡವಾದಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. 
-ಎಸ್‌.ಎಂ.ಕೃಷ್ಣ ಮಾಜಿ ಮುಖ್ಯಮಂತ್ರಿ.

ನೀವೆಲ್ಲಾ ಊರಿಗೆ ದೊಡ್‌ ಮನುಷ್ಯರು. ನಿಮಗೆ ಪಂಕ್ತಿ, ಜಾತಿ ದೊಡ್ಡದಾದ್ರೆ, ನನ್ನ್ಗೆನನ್‌ ಕುಚಿಕು ಪ್ರೀತಿ ದೊಡ್ಡದು.
-ಅಂಬಿ

Advertisement

Udayavani is now on Telegram. Click here to join our channel and stay updated with the latest news.

Next